ದೊಡ್ಡಣ್ಣ ಅಳಿಯ ವೀರೇಂದ್ರಗೆ ಜೆಡಿಎಸ್‌ ವಿಧಾನಪರಿಷತ್‌ ಟಿಕೆಟ್‌?

By Suvarna NewsFirst Published May 23, 2022, 4:32 AM IST
Highlights

* ರಂಗೇರಿದ ಚುನಾವಣಾ ಕಣ

* ದೊಡ್ಡಣ್ಣ ಅಳಿಯ ವೀರೇಂದ್ರಗೆ ಜೆಡಿಎಸ್‌ ವಿಧಾನಪರಿಷತ್‌ ಟಿಕೆಟ್‌?

* ಐಟಿ ದಾಳಿ ವೇಳೆ ಇವರ ಮನೆ ಟಾಯ್ಲೆಟ್‌ನಲ್ಲಿ ಹಣ ಸಿಕ್ಕಿತ್ತು!

ಬೆಂಗಳೂರು(ಮೇ.23): ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್‌ ತನಗೆ ಲಭಿಸುವ ಒಂದು ಸ್ಥಾನಕ್ಕೆ ಚಿತ್ರನಟ ದೊಡ್ಡಣ್ಣ ಅವರ ಅಳಿಯ ಹಾಗೂ ಪಕ್ಷದ ಮುಖಂಡ ಕೆ.ಸಿ.ವೀರೇಂದ್ರ (ಪಪ್ಪಿ) ಅವರಿಗೆ ಟಿಕೆಟ್‌ ನೀಡುವ ಸಾಧ್ಯತೆಯಿದೆ.

ಈ ಬಗ್ಗೆ ಪಕ್ಷದ ವರಿಷ್ಠರು ಗಂಭೀರ ಚಿಂತನೆ ನಡೆಸಿದ್ದು, ಸೋಮವಾರ ಸ್ಪಷ್ಟಚಿತ್ರಣ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

ವೀರೇಂದ್ರ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಉದ್ಯಮಿಯಾಗಿರುವ ವೀರೇಂದ್ರ ಅವರು ಗೋವಾದಲ್ಲಿನ ಕ್ಯಾಸಿನೋ ಮಾಲೀಕರಾಗಿದ್ದಾರೆ. ಹಲವು ವರ್ಷಗಳ ಹಿಂದೆ ಆದಾಯ ತೆರಿಗೆ ಇಲಾಖೆ ಅವರ ನಿವಾಸದ ಮೇಲೆ ದಾಳಿ ನಡೆಸಿ ಬಚ್ಚಲುಮನೆಯಲ್ಲಿ ಕೋಟ್ಯಂತರ ರುಪಾಯಿ ನಗದು ವಶಪಡಿಸಿಕೊಂಡಿತ್ತು. ಬಳಿಕ ಸಿಬಿಐ ಹವಾಲಾ ವಹಿವಾಟು ಆರೋಪದ ಮೇರೆಗೆ ವೀರೇಂದ್ರ ಅವರನ್ನು ವಶಕ್ಕೆ ಪಡೆದಿತ್ತು.

ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದರೂ ಸಂಖ್ಯಾಬಲದ ಆಧಾರದ ಮೇಲೆ ಜೆಡಿಎಸ್‌ಗೆ ಒಂದು ಸ್ಥಾನ ಮಾತ್ರ ಲಭ್ಯವಾಗಲಿದೆ. ಹಾಲಿ ಸದಸ್ಯ ರಮೇಶ್‌ಗೌಡ ಅವರ ಅವಧಿ ಮುಂದಿನ ತಿಂಗಳು ಅಂತ್ಯವಾಗಲಿದೆ. ಅವರೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಅಲ್ಲದೆ, ಪಕ್ಷದ ವಕ್ತಾರ ಟಿ.ಎ.ಶರವಣ, ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ, ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಪ್ರಕಾಶ್‌ ಮತ್ತಿತರರು ಟಿಕೆಟ್‌ಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಜೆಡಿಎಸ್‌ ವರಿಷ್ಠರು ವೀರೇಂದ್ರ ಅವರನ್ನು ಕಣಕ್ಕಿಳಿಸುವ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.

click me!