
ಬೆಂಗಳೂರು : ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಂಬಂಧ ಭಾನುವಾರ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಮನ್ವಯ ಸಭೆ ನಡೆಯಿತು.
ಜೆಡಿಎಸ್ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಆರ್.ಅಶೋಕ್, ಡಾ। ಸಿ.ಎನ್.ಅಶ್ವತ್ಥನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು. ಚುನಾವಣೆಯಲ್ಲಿ ಗೆಲ್ಲುವ ತಂತ್ರಗಾರಿಗೆ ಕುರಿತು ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಅ.ದೇವೇಗೌಡರು ಮಾತ್ರ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ. ಉಳಿದ ಅಭ್ಯರ್ಥಿಗಳಿಗೂ ನಮಗೂ ಸಂಬಂಧವಿಲ್ಲ. ಆದರೆ, ನಮ್ಮ ಪಕ್ಷದ ಪ್ರಾಥಮಿಕ ಸದಸ್ಯರೂ ಅಲ್ಲದ ಚನ್ನಪಟ್ಟಣದ ಪುಟ್ಟಸ್ವಾಮಿ ಎನ್ನುವರು ನನ್ನ ಮತ್ತು ಪಕ್ಷದ ವರಿಷ್ಠ ನಾಯಕ ದೇವೆಗೌಡರ ಚಿತ್ರಗಳನ್ನು ಕರಪತ್ರಗಳಲ್ಲಿ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಅಂಶ ನನ್ನ ಗಮನಕ್ಕೆ ಬಂದಿದೆ ಎಂದರು.
ಅಲ್ಲದೇ, ನಾನು ಮತ್ತು ದೇವೇಗೌಡರು ತಮ್ಮನ್ನು ಆಶೀರ್ವದಿಸಿದ್ದಾರೆ ಎಂದು ಅವರು ಹೇಳಿಕೊಂಡು ತಿರುಗುತ್ತಿದ್ದಾರೆ. ಈ ರೀತಿ ನಾನಾಗಲಿ, ದೇವೇಗೌಡರಾಗಲಿ ಯಾರಿಗೂ ಬೆಂಬಲ ನೀಡಿಲ್ಲ. ಅವರು ತಕ್ಷಣ ನಮ್ಮ ಹೆಸರು, ಭಾವಚಿತ್ರಗಳನ್ನು ಬಳಸುವುದನ್ನು ನಿಲ್ಲಿಸಬೇಕು. ತಪ್ಪಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪರಿಷತ್ ಚುನಾವಣೆ 2024: ಇಂದು ಬಿಜೆಪಿ-ಜೆಡಿಎಸ್ ಮೈತ್ರಿ ಸಮನ್ವಯ ಸಭೆ
ಇದಕ್ಕೂ ಮುನ್ನ ಸಭೆಯ ಗಮನಕ್ಕೆ ಈ ವಿಷಯ ತಂದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಪುಟ್ಟಸ್ವಾಮಿಗೂ ನಮ್ಮ ಪಕ್ಷಕ್ಕೂ ಸಂಬಂಧ ಇಲ್ಲ. ಅವರು ದೇವೇಗೌಡರು, ಕುಮಾರಸ್ವಾಮಿ ಅವರ ಹೆಸರಿನಲ್ಲಿ ಮತಯಾಚನೆ ಮಾಡುವುದು ಅಪರಾಧ ಎಂದು ಎಚ್ಚರಿಕೆ ಕೊಟ್ಟರು.
ಕಾಂಗ್ರೆಸ್ ಮುಕ್ತ ಕರ್ನಾಟಕವೇ ಈ ಮೈತ್ರಿ ಉದ್ದೇಶ. ಎರಡೂ ಪಕ್ಷಗಳ ಉದ್ದೇಶ ಒಂದೇ, ಕಾಂಗ್ರೆಸ್ ವಿರೋಧಿ ನೀತಿ. ಹೀಗಾಗಿ ನಾವು ಒಂದಾಗಿದ್ದೇವೆ. ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದೇವೆ. ದೇವೇಗೌಡರು ಮೋದಿ ಅವರು ಈ ಮೈತ್ರಿಗೆ ಕಾರಣರು ಎಂದರು.ಸಭೆಯಲ್ಲಿ ಉಭಯ ಪಕ್ಷಗಳ ಮುಖಂಡರಾದ ಕೆ.ಗೋಪಾಲಯ್ಯ, ಮುನಿರತ್ನ, ಸಿ.ಪಿ.ಯೋಗೇಶ್ವರ್, ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ನಿಸರ್ಗ ನಾರಾಯಣಸ್ವಾಮಿ, ಡಾ। ಶ್ರೀನಿವಾಸಮೂರ್ತಿ, ಎ.ಮಂಜುನಾಥ್ ಭಾಗಿಯಾಗಿದ್ದರು.
ಮೈತ್ರಿ ಉದ್ದೇಶ ಕಾಂಗ್ರೆಸ್ ಮುಕ್ತ ಕರ್ನಾಟಕ: ಅಶ್ವತ್ಥ
ಮಾಜಿ ಸಚಿವ ಡಾ। ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಕಾಂಗ್ರೆಸ್ ಮುಕ್ತ ಕರ್ನಾಟಕವೇ ಈ ಮೈತ್ರಿಯ ಉದ್ದೇಶ. ಎರಡೂ ಪಕ್ಷಗಳ ಉದ್ದೇಶ ಒಂದೇ. ಅದು ಕಾಂಗ್ರೆಸ್ ವಿರೋಧಿ ನೀತಿ. ಹೀಗಾಗಿ ನಾವು ಒಂದಾಗಿದ್ದೇವೆ. ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದೇವೆ. ದೇವೇಗೌಡರು ಮತ್ತು ಮೋದಿ ಅವರು ಈ ಮೈತ್ರಿಗೆ ಕಾರಣರು ಎಂದು ಹೇಳಿದರು.
ಬಿಜೆಪಿ ಗೆಲ್ಲೋಕೆ..ಎದುರಾಳಿ ಸೋಲೋಕೆ..3 ಕಾರಣ?! ರಾಜಕೀಯ ಚಾಣಾಕ್ಷ ನುಡಿದ ಭವಿಷ್ಯವೇನು ..?
ಸಮೃದ್ಧ ಕರ್ನಾಟಕ ನಿರ್ಮಾಣ ಈ ಮೈತ್ರಿಕೂಟದಿಂದ ಸಾಧ್ಯ. ಕಾಂಗ್ರೆಸ್ ಎದುರಿಸಲು ನಾವು ಒಂದಾಗಿದ್ದೇವೆ. ಕುಮಾರಸ್ವಾಮಿ ಅವರ ಪ್ರೀತಿಗೆ ನಾವು ಪೂರ್ಣವಾಗಿ ಸೋತಿದ್ದೇವೆ. ನಮ್ಮನ್ನೆಲ್ಲ ಪ್ರೀತಿಯಿಂದ ಕರೆದು ಮಾತನಾಡಿದ್ದಾರೆ. ಜನರು ಕಾರ್ಯಕರ್ತರು ನಮ್ಮನ್ನು ಒಪ್ಪಿದ್ದಾರೆ. ಮೊದಲ ಪರೀಕ್ಷೆಯಲ್ಲಿ ನಾವು ಪಾಸಾಗುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.