
ನವದೆಹಲಿ (ಜು.20): ದೇಶದಲ್ಲಿ ಬಿಜೆಪಿಯ ಸಂಘಟನಾ ಚಾತುರ್ಯದ ಚಾಣಕ್ಯ ಎಂದು ಕರೆಯಲಾಗುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕರ್ನಾಟಕದ ಬಿಜೆಪಿ ಉಪಾಧ್ಯಕ್ಷ ಶಾಸಕ ಬಿ.ವೈ. ವಿಜಯೇಂದ್ರ ಭೇಟಿ ಮಾಡಿದರು. ಇನ್ನು ಲೋಕಸಭಾ ಚುನಾವಣೆ ಕುರಿತು ಚರ್ಚೆ ಮಾಡಲಾಗಿದ್ದು, ಗುಟ್ಟಾಗಿ ನಡೆದ ಚರ್ಚೆಯ ವಿಚಾರವನ್ನು ಶಾಸಕ ವಿಜಯೇಂದ್ರ ರಿವೀಲ್ ಮಾಡಿದ್ದಾರೆ.
ಈ ಕುರಿತು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಮಾಹಿತಿ ನೀಡಿರುವ ಬಿಜೆಪಿ ರಾಜ್ಯಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, "ಸಂಘಟನಾ ಚಾತುರ್ಯದ ಚಾಣಕ್ಯನೆಂದೇ ಬಣ್ಣಿಸಲ್ಪಡುವ ಮಾನ್ಯ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಮಾಡಲಾಯಿತು. ರಾಜ್ಯದಲ್ಲಿ ವೈಫಲ್ಯದ ಗ್ಯಾರಂಟಿ ಬೆನ್ನಿಗಂಟಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಲು ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕುರಿತು ಮಾರ್ಗದರ್ಶನ ಪಡೆಯಲಾಯಿತು" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ ಮಾತ್ರವಲ್ಲ, ನಾಳೆಯಿಂದ ಡಾಕ್ಟರ್ ಆಗಲಿದ್ದಾರೆ
ವಿಪಕ್ಷ ನಾಯಕನ ಆಯ್ಕೆಗೆ ಹೋಗಿದ್ದ ಯಡಿಯೂರಪ್ಪ: ಇನ್ನು ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ರಾಜ್ಯದಲ್ಲಿ ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ತೆರಳಿದ್ದರು. ಈ ವೇಳೆ ಗೃಹಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಬಂದಿದ್ದರು. ಆದರೆ, ನಾನಾ ಕಾರಣಗಳಿಂದಾಗಿ ಬಿಜೆಪಿಯಲ್ಲಿ ಈವರೆಗೂ ವಿಪಕ್ಷ ನಾಯಕನಾಗಿ ಯಾರನ್ನೂ ಆಯ್ಕೆ ಮಾಡಿಲ್ಲ. ಆದರೆ, ಇತ್ತೀಚಿನ ಮಾಹಿತಿಗಳ ಪ್ರಕಾರ ರಾಜ್ಯದಲ್ಲಿ ವಿಪಕ್ಷ ನಾಯಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಗಳಿಗೆ ಸೂಕ್ತ ವ್ಯಕ್ತಿಗಳನ್ನು ಹೈಕಮಾಂಡ್‌ನಿಂದ ಒಮ್ಮೆಲೆ ಆಯ್ಕೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಧಾನಿ ಭೇಟಿ ಮಾಡಿದ ತೇಜಸ್ವಿನಿ ಅನಂತ್ ಕುಮಾರ್: ಮತ್ತೊಂದೆಡೆ ಮಾಜಿ ಸಂಸದ ಅನಂತ್‌ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಆದರೆ, ಲೋಕಸಭಾ ಚುನಾವಣೆಗೂ ಮುನ್ನವೇ ಏಕಾಏಕಿ ಪ್ರಧಾನಿ ಅವರನ್ನು ಭೇಟಿ ಮಾಡಿದ ಉದ್ದೇಶ ಮಾತ್ರ ಬಹಿರಂಗವಾಗಿಲ್ಲ. ಆದ್ದರಿಂದ ಬೆಂಗಳೂರು ಲೋಕಸಭಾ ಕ್ಷೇತ್ರಗಳ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಿಗೆ ಭೇಟಿ ಉದ್ದೇಶದ ಬಗ್ಗೆ ಕುತೂಹಲ ಹೆಚ್ಚಾಗಿದೆ. ರಾಜ್ಯ ನಾಯಕರಲ್ಲಿ ತೇಜಸ್ವಿನಿ ಅನಂತಕುಮಾರ್ ಅವರ ಪ್ರಧಾನಿ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
ಗೃಹಲಕ್ಷ್ಮಿ ಯೋಜನೆ ಅಧಿಕೃತ ಆರಂಭ: ಮೊದಲ ಫಲಾನುಭವಿ ಮಹಿಳೆಯರು ಇವರೇ.. ಸುಮಾ, ಆನಂದಿ, ಸತ್ಯಾ
ಲೋಕಸಭಾ ಚುನಾವಣೆಗೆ ಟಿಕೆಟ್ ಸಾಧ್ಯತೆ: ಇನ್ನು ತೇಜಸ್ವಿನಿ ಅನಂತಕುಮಾರ್ ಅವರಿಗೆ ಕಳೆದ ಲೋಕಸಭೆ (2019) ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಮತ್ತೊಂದೆಡೆ ಇತ್ತೀಚೆಗೆ ನಡೆದ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲೂ ಅವರಿಗೆ ಸ್ಪರ್ಧೆಯನ್ನು ಮಾಡಲು ಅವಕಾಶ ನೀಡಲಿಲ್ಲ. ಆದರೆ, ಈಗ ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಪಕ್ಷ ಸಂಘಟನೆಯ ಚರ್ಚೆಗಳು ಆರಂಭವಾದ ಬೆನ್ನಲ್ಲಿಯೇ ತೇಜಸ್ವಿನಿ ಅನಂತಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಹೀಗಾಗಿ, ಮುಂಬರುವ 2024ರ ಲೋಕಸಭಾ ಚುನಾವಣೆಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.