ರಾಜಾಹುಲಿಗೆ ಸಚಿವರ ಬೆಂಬಲ, ಈಶ್ವರಪ್ಪಗೆ ಕಿರಿಯರ ನೀತಿಪಾಠ

By Suvarna NewsFirst Published Apr 1, 2021, 4:02 PM IST
Highlights

ತಮ್ಮ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡುತ್ತಿದ್ದಾರೆ/ ಕೆಎಸ್ ಈಶ್ವರಪ್ಪ ಪತ್ರದ ನಂತರ ಸಚಿವರ ಪ್ರತಿಕ್ರಿಯೆ/ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು/ ನಾವೆಲ್ಲ ಬಿಎಸ್‌ವೈ ನೇತೃತ್ವದಲ್ಲಿ ಚುನಾವಣೆ ಎದುರಿಸಿದವರು/ ಮುಜುಗರ ತರುವ ಕೆಲಸ ಮಾಡಬಾರದಿತ್ತು

ಬೆಂಗಳೂರು(ಏ. 01)  ತಮ್ಮ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೇಳಿದ್ದ ಈಶ್ವರಪ್ಪ ಹೈಕಮಾಂಡ್ ಗೆ ಪತ್ರ ರವಾನಿಸಿದ್ದರು.  ಇದಾದ ಮೇಲೆ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆದಿವೆ.

ಮಾದ್ಯಮ ಗಳಲ್ಲಿ ಕೆ ಎಸ್ ಈಶ್ವರಪ್ಪ ಸಿಎಂ ಮೇಲೆ ದೂರು ಎಂಬ ವಿಚಾರ ಕೇಳಿಬಂತು. ನಾವೆಲ್ಲಾ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಗೆದ್ದವರು. ಸಚಿವರನ್ನು ಮಾಡುವುದೂ ಸಿಎಂ ಪರಮಾಧಿಕಾರ. ಆದರೆ ಇವತ್ತು ಆಗಿರುವ ಬೆಳವಣಿಗೆ ದುರದೃಷ್ಟಕರ. ಶಾಸಕರು ಬಂದು ಅನುದಾನಕ್ಕೆ  ಬೇಡಿಕೆ  ಇಡುವುದು ಸಾಮಾನ್ಯ. ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವುದು ಸಿಎಂ ಪರಮಾಧಿಕಾರ. ಇದನ್ನು ಆಕ್ಷೇಪಿಸಿ ಈಶ್ವರಪ್ಪ ರಾಜ್ಯಪಾಲರ ಬಳಿ ದೂರು ನೀಡಿರುವುದು ಸರಿಯಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಈಶ್ವರಪ್ಪ  ವಿರುದ್ಧ ಶಾಸಕರ ದೂರು

ಶಾಸಕರ ಅಗತ್ಯಕ್ಕೆ ಅನುಗುಣವಾಗಿ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ. ಹಣಕಾಸು ಸಚಿವರಾಗಿರುವ ಕಾರಣ ಸಿಎಂ ಅನುದಾನ ಹಂಚಿಕೆ ಮಾಡಿದ್ದಾರೆ. ಇವಾಗ ಈಶ್ವರಪ್ಪ ಗೆ ಏನಾದರೂ ಅಸಮಾಧಾನ, ಭಿನ್ನಾಭಿಪ್ರಾಯ ಇದ್ರೆ ಸಿಎಂ ಜೊತೆ ಚರ್ಚೆ ಮಾಡಬೇಕಿತ್ತು. ಅದು ಬಿಟ್ಟು ರಾಜ್ಯಪಾಲರ ಅಂಗಳಕ್ಕೆ ಇದನ್ನು ತೆಗೆದುಕೊಂಡು ಹೋಗೋದು ಒಳ್ಳೆ ಬೆಳವಣಿಗೆಯಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಈಶ್ವರಪ್ಪ ಒಬ್ಬ ಹಿರಿಯ ಸಚಿವರು. ಅವ್ರು ನಮಗೆ ಮಾರ್ಗದರ್ಶಕ ರಾಗಬೇಕು. ಏನೇ ವಿಷಯ ಇದ್ರು ಅದನ್ನು ಸಿಎಂ ಜೊತೆ ಚರ್ಚಿಸಬೇಕಿತ್ತು. ಅದು ಬಿಟ್ಟು ರಾಜ್ಯಪಾಲರ ಬಳಿ‌ ಹೋಗಿ ಅದನ್ನು ಜಾಹಿರ ಮಾಡೋದು, ಅವರಿಗೆ ಶೋಭೆ ತರುವುದಿಲ್ಲ ಎನ್ನುವುದು ಕೃಷಿ ಸಚಿವ ಬಿಸಿ ಪಾಟೀಲ್ ಅಭಿಪ್ರಾಯ. 

ಸಚಿವ ಸಂಪುಟ ಯಡಿಯೂರಪ್ಪ ನೇತೃತ್ವದಲ್ಲಿ ಇದೆ. ಯಡಿಯೂರಪ್ಪ ರನ್ನು ಸರ್ವಾನುಮತದಿಂದ ಸಿಎಂ ಸ್ಥಾನದಲ್ಲಿ ಕೂರಿಸಿದ್ದೇವೆ. ಯಾವುದೇ ಇಲಾಖೆಯ ಫೈಲ್ ನ್ನು ಸಿಎಂ ತರಿಸಿಕೊಳ್ಳಬಹುದು. ಜೊತೆಗೆ ಅನುದಾನ ಹಂಚಿಕೆ ಮಾಡುವ ಅಧಿಕಾರ ಕೂಡ ಅವರಿಗೆ ಇದೆ. ಇವಾಗ ಈಶ್ವರಪ್ಪ ಗೆ ಏನಾದರೂ ಭಿನ್ನಾಭಿಪ್ರಾಯ ಇದ್ರೆ ಸಿಎಂ ಜೊತೆ ಚರ್ಚಿಸಿ ಬಗೆ ಹರಿಸಿಕೊಳ್ಳಬೇಕಿತ್ತು. ಆದರೆ ಈಗ ಈಶ್ವರಪ್ಪ ಈ ರೀತಿ ಮಾಡಿರೋದು ಸರ್ಕಾರಕ್ಕೆ ಮುಜುಗರ ತಂದಿದೆ.  ಜನರಪರ ಅಭಿವೃದ್ಧಿ ಗೆ ಒತ್ತು ಕೊಡಬೇಕೇ ವಿನಹ,  ಈ ರೀತಿಯ ಸಣ್ಣ ತಪ್ಪುಗಳಿಂದ ಆಡಳಿತ ಯಂತ್ರವನ್ನು‌ ನಿಧಾನ ಮಾಡುವ ಕೆಲಸ ಮಾಡಬಾರದು ಎಂದು ಆರೋಗ್ಯ ಸಚಿವ ಸುಧಾಕರ್ ಸಲಹೆ ನೀಡಿದ್ದಾರೆ. 

 

click me!