* ದೇಶದ ಆರ್ಥಿಕತೆಯ ಚಿತ್ರಣವನ್ನೇ ಬದಲಿಸುವ ಬಜೆಟ್
* ಜನಪ್ರಿಯ ಬಜೆಟ್ ಎನಿಸಿಕೊಳ್ಳಬೇಕೆಂಬ ಹಂಬಲ ತೊರೆದು, ದೂರದೃಷ್ಟಿಯ ಬಜೆಟ್ ಮಂಡಿಸಲಾಗಿದೆ
* ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್ ನಿರಾಣಿ ಅಭಿಪ್ರಾಯ
ಬೆಂಗಳೂರು, (ಫೆ,01): ದೇಶದ ಆರ್ಥಿಕತೆಯ ಚಿತ್ರಣವನ್ನೇ ಬದಲಿಸುವ ಬಜೆಟ್ ಇದು. ಆರ್ಥಿಕತೆಗೆ ಚೈತನ್ಯ ತುಂಬುವ ಜತೆಗೆ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿ ಹೊಂದಿರುವ ಬಜೆಟ್ ನೀಡಿರುವ ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್ ನಿರಾಣಿ (Murugesh Nirani) ಅಭಿನಂದಿಸಿದ್ದಾರೆ.
ಇಂದಿನ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಕೊವಿಡ್ ನಂತರದ ಆರ್ಥಿಕ ಸುಧಾರಣೆ ಮತ್ತು ಉದ್ಯೋಗ ಸೃಷ್ಟಿ ಇಂದಿನ ತುರ್ತು ಅಗತ್ಯತೆ. ಇಂದಿನ ಬಜೆಟ್ ಈ ಎಲ್ಲ ಅಂಶಗಳನ್ನು ಒಳಗೊಂಡಿದೆ. 2022ರಲ್ಲಿ ಆರ್ಥಿಕತೆ ಶೇ.9.2ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದ್ದು, ಮುಂದಿನ 25 ವರ್ಷದ ಗುರಿಯಾಗಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ. ಇದರಿಂದ ಕರ್ನಾಟಕದ ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಇನ್ನೂ ಹೆಚ್ಚಿನ ಅನುಕೂಲ ಆಗಲಿದೆ. ದೇಶದ ಒಟ್ಟಾರೆ ವಿದೇಶಿ ಹೂಡಿಕೆಯಲ್ಲಿ ರಾಜ್ಯದ ಪಾಲು ಶೇ.45ರಷ್ಟಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಮತ್ತಷ್ಟು ಏರುವ ವಿಶ್ವಾಸ ಇದೆ ,"ಎಂದು ನಿರಾಣಿ ತಿಳಿಸಿದರು.
Union Budget 2022 ಕೇಂದ್ರ ಬಜೆಟ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ಲೇಷಿಸಿದ್ದು ಹೀಗೆ
"ಸುಲಲಿತ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಈಸ್ ಆಫ್ ಡೂಯಿಂಗ್ ಉದ್ದೇಶದಲ್ಲಿಯೂ ಕೆಲವು ಯೋಜನೆಗಳು ಜಾರಿಯಾಗುತ್ತವೆ. ಏಕಗವಾಕ್ಷಿ ಯೋಜನೆಯಲ್ಲಿ ಜನಕ್ಕೆ ಎಲ್ಲಾ ಸೇವೆ ಅನುಕೂಲವಾಗಲಿದೆ. ಈ ಬಾರಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ 2.O ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. ಇದು ದೇಶದ ಆರ್ಥಿಕ ಪ್ರಗತಿಗೆ ದಿಕ್ಸೂಚಿ ಆಗಲಿದೆ," ಎಂದರು ಮೆಚ್ಚುಗೆ ವ್ಯಕ್ತಪಡಿಸಿದರು.
"ದೇಶದಲ್ಲಿ ‘ಎಲೆಕ್ಟ್ರಿಫೈಡ್ ಇಂಡಿಯಾ’ ಯುಗ ಆರಂಭವಾಗಿದ್ದು, ಪರಿಸರ ಸ್ನೇಹಿ ಇವಿ ವಾಹನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬ್ಯಾಟರಿ ಸ್ವಾಪಿಂಗ್ ಸೌಕರ್ಯ ಕಲ್ಪಿಸುವ ಜತೆಗೆ ಬ್ಯಾಟರಿ ಸ್ವ್ಯಾಪಿಂಗ್‌ಗೆ ನೀತಿ ಜಾರಿ ಮಾಡಾಗುತ್ತದೆ. ಗ್ರೀನ್ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಉತ್ತೇಜನಕ್ಕಾಗಿ ಯೋಜನೆ ಮಾಡಲಾಗುವುದು ಎಂದು ವಿತ್ತ ಸಚಿವರು ಘೋಷಿಸಿದ್ದಾರೆ. ಇವಿ ಕ್ಷೇತ್ರದಲ್ಲಿ ಇದು ಮಹತ್ವದ ಹೆಜ್ಜೆ ಆಗಲಿದ್ದು, ಕರ್ನಾಟಕವು ಮುಂದಿನ 'ಪರಿಸರ ಸ್ನೇಹಿ ಕ್ಯಾಪಿಟಲ್' ಆಗುವುದರಲ್ಲಿ ಸಂದೇಹ ಇಲ್ಲ," ಎಂದರು.
ಜನಪ್ರಿಯ ಬಜೆಟ್ ಎನಿಸಿಕೊಳ್ಳುವ ಹಂಬಲ ಇಲ್ಲ
"ದೇಶದ ಜನರಿಗೆ ಅನುಕೂಲವಾಗುವ ಅದ್ಭುತ ಬಜೆಟ್ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲು ಬಯಸುತ್ತೇನೆ. ಚುನಾವಣೆ ನಡೆಯುತ್ತಿರುವ ರಾಜ್ಯಗಳಿಗೂ ಮೋದಿ ಸರ್ಕಾರ ಯಾವುದೇ ಕೊಡುಗೆ ನೀಡಿಲ್ಲ. ಜನಪ್ರಿಯ ಬಜೆಟ್ ಎನಿಸಿಕೊಳ್ಳಬೇಕೆಂಬ ಹಂಬಲ ತೊರೆದು, ದೂರದೃಷ್ಟಿಯ ಬಜೆಟ್ ಮಂಡಿಸಲಾಗಿದೆ," ಎಂದು ಹೇಳಿದರು.
ಯಡಿಯೂರಪ್ಪ ಪ್ರತಿಕ್ರಿಯೆ
ಭಾರತ ಸರ್ಕಾರದ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಮಂಡಿಸಿದ 2022-23ನೇ ಸಾಲಿನ ಆಯವ್ಯಯವು ಕೋವಿಡ್-19ರಿಂದ ಉಂಟಾದ ಆರ್ಥಿಕ ಹಿಂಜರಿತವನ್ನು ಸರಿಪಡಿಸುವ ದೃಷ್ಟಿಯಲ್ಲಿ ಹಾಗೂ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿದೆ. ಡಿಜಿಟಲೀಕರಣ ಮತ್ತು ಸ್ವಾವಲಂಬನೆಗೆ ಒತ್ತು ನೀಡಿದ್ದು, ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದೆ ಎಂದಿದ್ದಾರೆ.
ಪ್ರತಿ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಒದಗಿಸುವುದು, ನಗರ ಪ್ರದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬ್ಯಾಟರಿ ಸ್ವಾಪಿಂಗ್ ಕೇಂದ್ರ ಸ್ಥಾಪನೆ ಉದ್ದೇಶಿಸಿರುವುದು ಸ್ವಾಗತಾರ್ಹ ವಿಷಯ.
ದೇಶದ ಪ್ರಮುಖ ನದಿಗಳ ಜೋಡಣೆ, ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವುದು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಒತ್ತು ನೀಡಿರುವುದು, 2023ರ ವರ್ಷವನ್ನು "ಅಂತರಾಷ್ಟ್ರೀಯ ಸಿರಿಧಾನ್ಯ" ವರ್ಷವೆಂದು ಘೋಷಣೆ ಮಾಡಿದ್ದು, ಒಟ್ಟಾರೆಯಾಗಿ ಜನಪರವಾದ ಆಯವ್ಯಯ ಮಂಡಿಸಿರುವ ವಿತ್ತ ಸಚಿವರನ್ನು ಹಾಗೂ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.