ಗ್ಯಾರಂಟಿ ಕೊಟ್ಟಿದ್ದೇವೆ, ಕನಿಷ್ಠ 14 ಗೆಲ್ತೇವೆ, 5-6 ಸೀಟ್‌ ನಂಬೋಕೆ ಸಾಧ್ಯವಿಲ್ಲ: ಎಂಬಿ ಪಾಟೀಲ್‌!

Published : Jun 01, 2024, 09:30 PM IST
ಗ್ಯಾರಂಟಿ ಕೊಟ್ಟಿದ್ದೇವೆ, ಕನಿಷ್ಠ 14 ಗೆಲ್ತೇವೆ, 5-6 ಸೀಟ್‌ ನಂಬೋಕೆ ಸಾಧ್ಯವಿಲ್ಲ: ಎಂಬಿ ಪಾಟೀಲ್‌!

ಸಾರಾಂಶ

ಚುನಾವಣೋತ್ತರ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಸಿಂಗಲ್‌ ಡಿಜಿಟ್‌ ಸ್ಥಾನ ಪಡೆಯುವ ಸೂಚನೆ ಬೆನ್ನಲ್ಲಿಯೇ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕ ಎಂಬಿ ಪಾಟೀಲ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಸಮೀಕ್ಷೆಯನ್ನು ನಂಬೋಕೆ ಸಾಧ್ಯವಿಲ್ಲ ಎಂದಿದ್ದಾರೆ.  

ಬೆಂಗಳೂರು (ಜೂ.1): ವಿವಿಧ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗುತ್ತಿವೆ. ಹೆಚ್ಚಿನೆಲ್ಲಾ ಸಮೀಕ್ಷೆಗಳು ಬಿಜೆಪಿಗೆ ಕೇಂದ್ರದಲ್ಲಿ ಸರಳ ಬಹುಮತ ಎಂದು ಹೇಳಿದ್ದರೆ, ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ದೊಡ್ಡ ಮಟ್ಟದ ವಿರೋಧ ಎದುರಾಗುವ ಲಕ್ಷಣ ತೋರಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಕನಿಷ್ಠ 17 ರಿಂದ ಗರಿಷ್ಠ 24ರವರೆಗಿನ ಸ್ಥಾನ ಗೆಲ್ಲಬಹುದು ಎಂದಿದ್ದರೆ, ಕಾಂಗ್ರೆಸ್‌, 3-6 ಸೀಟ್‌ ಗೆಲ್ಲಬಹುದು ಎಂದಿದೆ. ಇದರ ಬೆನ್ನಲ್ಲಿಯೇ ರಾಜ್ಯ ಕಾಂಗ್ರೆಸ್‌ ನಾಯಕರು ಈ ಸಮೀಕ್ಷೆಗಳನ್ನ ನಂಬೋದೇ ಇಲ್ಲ ಎಂದಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್‌ ಬಳಿಕ, ಸಚಿವ ಎಂಬಿ ಪಾಟೀಲ್‌ ಕೂಡ ನಾವು ಗ್ಯಾರಂಟಿಗಳನ್ನ ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. 5-6 ಸೀಟ್‌ ಅಂದರೆ ನಂಬೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಚುನಾವಣೋತ್ತರ ಸಮೀಕ್ಷೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಬಿ ಪಾಟೀಲ್‌, 'ಬಾಲಾಕೋಟ್‌ ದಾಳಿಯ ಬಳಿಕ ರಾಷ್ಟ್ರೀಯತೆ ಭಾವನೆ ಬಿತ್ತಿತ್ತು. ಇದರಿಂದಾಗಿ ಬಿಜೆಪಿ ಪರವಾಗಿ ದೇಶದಲ್ಲಿ ಒಲವು ವ್ಯಕ್ತವಾಗಿತ್ತು.  ಎಲ್ಲರೂ ಕೂಡ ಬಿಜೆಪಿ ಪರವಾಗಿ ನಿಂತಿದ್ದರು.  ಇದರಿಂದಾಗಿ ಬಿಜೆಪಿ ಕೂಡ 2019ರಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸೋಕೆ ಕಾರಣವಾಯಿತು.  ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ದೇಶದಲ್ಲಿ ಜನ ಬಿಜೆಪಿಯನ್ನು ಗಂಡಾಂತರದ ರೀತಿಯಲ್ಲಿ ನೋಡ್ತಿದ್ದಾರೆ.  ಈ ಬಾರಿ ಮೋದಿ ಅಲೆ ಕಾಣ್ತಾ ಇಲ್ಲ. ಈಗಾಗಲೇ ಹಲವು ಬಾರಿ ಹೇಳಿದ್ದೇನೆ. ಬಿಜೆಪಿ ಕಳೆದ ಬಾರಿ 303 ಸೀಟ್‌ಗಳನ್ನು ಗೆದ್ದಿತ್ತು. ಇವುಗಳ ಪೈಕಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಈ ಬಾರಿ 15-20 ಸೀಟ್‌ ಕಳೆದುಕೊಳ್ಳಲಿದೆ. ಕರ್ನಾಟಕದಲ್ಲಿ ಕನಿಷ್ಠ ಪಕ್ಷ 13 ಸೀಟ್‌ಗಳನ್ನು ಕಳೆದುಕೊಳ್ಳಲಿದೆ. ಮಹಾರಾಷ್ಟ್ರದಲ್ಲಿ ಸುಮಾರಿ 15 ಸೀಟ್‌ಗಳನ್ನು ಕಳೆದುಕೊಳ್ಳಲಿದೆ. ರಾಜಸ್ಥಾನದಲ್ಲಿ  ಸುಮಾರು 5-10 ಸೀಟ್‌ ಕಳೆದುಕೊಳ್ಳಲಿದೆ.  ಹೀಗೆ ಎಲ್ಲವನ್ನೂ ವಿಚಾರ ಮಾಡಿದಾಗ ಬಿಜೆಪಿ ಇಲ್ಲಿಯೇ 60 ರಿಂದ 70 ಸೀಟ್‌ ಕಳೆದುಕೊಳ್ಳಲಿದೆ' ಎಂದು ಹೇಳಿದರು.

ಬಿಜೆಪಿ ಸ್ವಂತ ಬಲದಿಂದ ಅವರು 250 ಸೀಟ್‌ ದಾಟೋದು ಕೂಡ ಕಷ್ಟ. ಹಾಗಾಗಿ ಈ ಸಮೀಕ್ಷೆಗಳು ನೈಜ ಪರಿಸ್ಥಿತಿಯಿಂದ ಬಹಳ ದೂರದಲ್ಲಿದೆ ಅಂತಾ ಅನಿಸಿದೆ ಅನ್ನೋದು ನನ್ನ ಅಭಿಪ್ರಾಯ. ಅದಕ್ಕೂ ಕೂಡ ಕಾದು ನೋಡೋಣ. ನಾಲಕ್ನೇ ತಾರೀಕು ಬಹಳ ದೂರವಿಲ್ಲ. ಕರ್ನಾಟಕದಲ್ಲಿ 3-5 ಸೀಟ್‌ ನಾವು ಗೆಲ್ಬಹುದು ಅಂತಾ ತೋರಿಸುತ್ತಿದ್ದಾರೆ.  ಆದ್ರೆ ವಿಜಯಪುರ ಸೀಟ್‌ಅನ್ನು ನಾವು ಗ್ಯಾರಂಟಿಯಾಗಿ ಗೆದ್ದೇ ಗೆಲ್ಲುತ್ತೇವೆ.  ಇದು 4 ರಂದು ನಿಮಗೆ ಗೊತ್ತಾಗಲಿದೆ. ನಾವು ಗ್ಯಾರಂಟಿಗಳನ್ನ ನೀಡಿದ್ದೇವೆ. ಇದರಿಂದಾಗಿ ಕನಿಷ್ಠ ಪಕ್ಷ, ಅತ್ಯಂತ ಕಡಿಮೆ ಅಂದರೂ ನಾವು 14 ಸೀಟ್‌ ಗೆಲ್ತೇವೆ. ಹೀಗಿರುವಾಗ ಯಾವುದೇ ಸಮಿಕ್ಷೆಗಳು ನಮಗೆ ಡಬಲ್‌ ಡಿಜಿಟ್‌ಅನ್ನು ಕೊಡದೇ ಒಂದಂಕಿಗೆ ನಿಲ್ಲಿಸಿದ್ದು ಶಾಕ್‌ ಎನಿಸಿದೆ. ಏನೂ 10-12 ಕೊಟ್ಟಿದ್ದರೆ, ಇದನ್ನು ನಂಬಬಹುದಿತ್ತು.  ಆದ್ರೆ 3 ರಿಂದ 5 ಸೀಟು, 6 ಸೀಟು ಇದು ನಂಬಲಿಕ್ಕೆ ಅಸಾಧ್ಯ ಎಂದರು.

ಎಕ್ಸಿಟ್‌ ಪೋಲ್‌ನಲ್ಲಿ ನಂಬಿಕೆ ಇಲ್ಲ, ಡಬಲ್‌ ಡಿಜಿಟ್‌ ದಾಟ್ತೇವೆ: ಡಿಕೆ ಶಿವಕುಮಾರ್‌

ಮೋದಿ ಅಲೆ ಕೂಡ ಈ ಬಾರಿ ಇದ್ದಿರಲಿಲ್ಲ. ಆರೆಸ್ಸೆಸ್‌ ನವರು ಮೋದಿಗೆ ಸಾಥ್‌ ನೀಡಲೇ ಇಲ್ಲ. ಈ ಬಾರಿಯ ಚುನಾವಣೆಯಲ್ಲಿ ಆರೆಸ್ಸೆಸ್‌ನವರು ಎಲ್ಲಿಯೂ ಮೋದಿ ಪರವಾಗಿ ಅಭಿಯಾನ ಮಾಡಿಲ್ಲ. ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ ಎಲ್ಲಾ ಕಡೆಯಲ್ಲೂ ನೋಡಿದ್ದೇವೆ, ಆರೆಸ್ಸೆಸ್‌ ನವರು ಪ್ರಚಾರ ಮಾಡಿಲ್ಲ.ಅವರು ಕೂಡ ಬೇಸರಗೊಂಡಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎನ್‌ಆರ್‌ಐಗಳು ಕೂಡ ಮೋದಿಗೆ ಬೆಂಬಲ ನೀಡ್ತಿದ್ದರು. ಅಮೆರಿಕ, ಇಂಗ್ಲೆಂಡ್‌, ಸಿಂಗಾಪುರ, ಜರ್ಮನಿ, ಫ್ರಾನ್ಸ್‌ಗಳಲ್ಲಿ ಪ್ರಚಾರ ಮಾಡ್ತಿದ್ದರು. ಈ ಬಾರಿ ಅಂಥದ್ದು ಯಾವುದೂ ನಡೆದಿಲ್ಲ. ಹಾಗಾಗಿ ನಾವಿದನ್ನು ನಂಬೋದಿಲ್ಲ. 4ನೇ ತಾರೀಕು ನಿಜವಾದ ಫಲಿತಾಂಶ ಹೊರಬರುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಇಂದು ಇಂಡಿಯಾ ಮೈತ್ರಿಯ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದರು. ಈ ವೇಳೆ ಇಂಡಿಯಾ ಮೈತ್ರಿ 295ಕ್ಕಿಂತ ಅಧಿಕ ಸೀಟ್‌ ಗೆಲ್ಲುತ್ತದೆ ಎಂದು ಅಂದಾಜು ಮಾಡಿದ್ದಾರೆ ಎಂದು ಎಂಬಿ ಪಾಟೀಲ್‌ ಹೇಳಿದ್ದಾರೆ.

Exit Poll Result ಇಂಡಿಯಾ ಮೈತ್ರಿಗೆ ಮತ ಹಾಕದ ಭಾರತ, ಮೋದಿಗೆ ಹ್ಯಾಟ್ರಿಕ್ ಬಹುಮತ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಾ ಜಿ ಪರಮೇಶ್ವರ ರಾಜ್ಯದ ಸಿಎಂ ಆಗಬೇಕು, ರಾಜಕೀಯದಲ್ಲಿ ಸಂಚಲನ ಮೂಡಿಸೋ ಹೇಳಿಕೆ ಕೊಟ್ಟ ಕೇಂದ್ರ ಸಚಿವ ವಿ. ಸೋಮಣ್ಣ!
ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!