
ಶಿವಮೊಗ್ಗ (ಜೂ.01): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರ ಹಿನ್ನೆಲೆಯಲ್ಲಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸಬೇಕು. ಜೊತೆಗೆ ಇಲಾಖೆಯ ಸಚಿವ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರನ್ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಬಯಲಿಗೆಳೆದು, ಇದಕ್ಕಾಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ. ಇದಕ್ಕಾಗಿ ಚಂದ್ರಶೇಖರ ಕುಟುಂಬಕ್ಕೆ ಸರ್ಕಾರವು ₹50 ಲಕ್ಷ ರು.ಪರಿಹಾರ ನೀಡಬೇಕು ಎಂದು ಆಗ್ರಹಪಡಿಸಿದರು.
ಚಂದ್ರಶೇಖರ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು. ಆದರೆ ಘಟನೆ ನಡೆದಿದೆ. ಈ ಕುಟುಂಬ ಇದೀಗ ಬೀದಿಗೆ ಬಂದಿದೆ. ಈ ಕುಟುಂಬದ ರಕ್ಷಣೆ ಸರ್ಕಾರದ ಕರ್ತವ್ಯ. ಪ್ರಾಮಾಣಿಕ ಅಧಿಕಾರಿಗಳು ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದರೆ ಹೇಗೆ? ಪ್ರಾಮಾಣಿಕ ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ಅವಕಾಶವೇ ಇಲ್ಲವೇ? ಸರ್ಕಾರ ಬಿಗಿ ಧೋರಣೆ ತಳೆಯದಿದ್ದರೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ. ಹೀಗಾಗಿ ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಪಡಿಸಿದರು.
ಸಚಿವ ನಾಗೇಂದ್ರ ರಾಜೀನಾಮೆ ನೀಡಲಿ: ಮಾಜಿ ಸಿಎಂ ಬೊಮ್ಮಾಯಿ
ಸರ್ಕಾರ ಭಂಡತನ ಬಿಡಲಿ: ಗೃಹಸಚಿವ ಪರಮೇಶ್ವರ್ ಈ ಪ್ರಕರಣಕ್ಕೂ, ನಾನು ರಾಜೀನಾಮೆ ನೀಡಿದ ಸಂದರ್ಭದ ಪ್ರಕರಣಕ್ಕೂ ಹೋಲಿಕೆ ಮಾಡಿ ಎರಡೂ ಬೇರೆ ಬೇರೆ ಎಂದು ಹೇಳಿದ್ದಾರೆ. ಆದರೆ ನಾನು ಆರೋಪ ಕೇಳಿ ಬಂದಾಕ್ಷಣ ರಾಜೀನಾಮೆ ನೀಡಿದೆ. ಸಚಿವ ನಾಗೇಂದ್ರ ಹೆಸರು ಡೆತ್ ನೋಟ್‌ನಲ್ಲಿರದಿರಬಹುದು. ಆದರೆ ಸಚಿವರು ಮೌಖಿಕವಾಗಿ ಹೇಳಿದ್ದಾರೆ ಎಂದು ಬರೆದಿಟ್ಟಿಲ್ಲವೇ? ಇದರರ್ಥ ನಾಗೇಂದ್ರ ಎಂದೇ ಅಲ್ಲವೇ ಎಂದು ಈಶ್ವರಪ್ಪ ಪ್ರಶ್ನಿಸಿದರು. ಸರ್ಕಾರ ಭಂಡತನ ಮಾಡಬಾರದು. ನೈತಿಕತೆಯ ಆಧಾರದ ಮೇಲೆ ರಾಜೀನಾಮೆ ನೀಡಲೇಬೇಕು ಎಂದು ಒತ್ತಾಯಿಸಿದರು.
ಪೊಲೀಸರಿಗೆ ರಕ್ಷಣೆ ಇಲ್ಲವೇ: ಚನ್ನಗಿರಿ ಘಟನೆ ಪ್ರಸ್ತಾಪಿಸಿದ ಈಶ್ವರಪ್ಪ ರಾಜ್ಯದಲ್ಲಿ ಪೊಲೀಸರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಠಾಣೆಗೆ ಕರೆತಂದ 7 ನಿಮಿಷದ ಒಳಗೆ ಮುಸ್ಲಿಂ ಯುವಕ ಹೃದಯಘಾತದಿಂದ ಸತ್ತಿದ್ದಾನೆ. ಆದರೆ ಸಾವಿರಾರು ಮುಸ್ಲಿಂರು ಠಾಣೆಗೆ ಮುತ್ತಿಗೆ ಹಾಕಿ ಧ್ವಂಸ ಮಾಡಿದ್ದಾರೆ. ಆದರೆ ಸರ್ಕಾರ ಧ್ವಂಸ ಮಾಡಿದವರನ್ನು ಶಿಕ್ಷಿಸುವ ಬದಲು ಪೊಲೀಸರನ್ನು ಶಿಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗವು ಸೇರಿ ರಾಜ್ಯದ ಎಲ್ಲೆಡೆ ಮಟ್ಕಾ, ಜೂಜು, ಕೊಲೆ, ಸುಲಿಗೆಗಳು ನಡೆಯುತ್ತಲೇ ಇವೆ. ಅನೇಕ ಕಡೆ ಪೊಲೀಸರು ಶಾಮೀಲಾಗಿರುತ್ತಾರೆ. ರಾಜ್ಯ ಸರ್ಕಾರ ಮಾತ್ರ ತನಗೇನು ಗೊತ್ತಿಲ್ಲದಂತೆ ವರ್ತಿಸುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದರು. ಗೋಷ್ಠಿಯಲ್ಲಿ ಪಾಲಿಕೆಯ ಮಾಜಿ ಸದಸ್ಯರಾದ ವಿಶ್ವಾಸ್, ಶಂಕರ್ಗನ್ನಿ, ಕಾಚಿನಕಟ್ಟೆ ಸತ್ಯನಾರಾಯಣ, ಮಹಾಲಿಂಗಶಾಸ್ತ್ರಿ, ಜಾಧವ್, ಭೂಪಾಲ್, ಬಾಲು, ಮೋಹನ್ ಮೊದಲಾದವರು ಇದ್ದರು.
ವೈಯಕ್ತಿಕವಾಗಿ 3 ಲಕ್ಷ ರು. ನೆರವು: ಅಧಿಕಾರಿ ಚಂದ್ರಶೇಖರನ್ ಕುಟುಂಬಕ್ಕೆ ಸಾಂತ್ವನ ಹೇಳಲೆಂದು ಮನೆಗೆ ಹೋಗಿದ್ದೆ. ಕಷ್ಟದಲ್ಲಿ ಜೀವನ ನಡೆಸುತ್ತಿರುವ ಅವರ ಪರಿಸ್ಥಿತಿ ಕಂಡು ದುಃಖವಾಗಿದೆ. ನಾನು ವೈಯುಕ್ತಿಕವಾಗಿ 3 ಲಕ್ಷ ರು. ಚೆಕ್ ನೀಡಿ ಬಂದಿದ್ದೇನೆ. ಸರ್ಕಾರ ಕೂಡ ಮಾನವೀಯತೆ ದೃಷ್ಟಿಯಿಂದ ನೆರವಿಗೆ ನಿಲ್ಲಬೇಕಿದೆ. ಒಂದು ಪಕ್ಷ ಸರ್ಕಾರ ಜೂ.10 ರೊಳಗಾಗಿ ನೆರವಿಗೆ ಬಾರದಿದ್ದರೆ ರಾಷ್ಟ್ರಭಕ್ತರ ಬಳಗದಿಂದ ಹಣ ಸಂಗ್ರಹಿಸಿ ಅವರ ಕುಟುಂಬಕ್ಕೆ ನೀಡಲಿದ್ದೇವೆ ಎಂದರು.
ಬಿಜೆಪಿ ಸರ್ಕಾರದಿಂದ ಬಡವರ ಉದ್ಧಾರ ಆಗಿಲ್ಲ: ಸಚಿವ ಈಶ್ವರ್ ಖಂಡ್ರೆ
ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಇಂತಹ ಘಟನೆಗಳು ನಡೆಯಲು ಸಾಧ್ಯ. ಸಿದ್ದರಾಮ್ಯನವರೇ ಇದು ಮುಸ್ಲಿಂ ರಾಜ್ಯ ಎಂದಾದರೂ ಘೋಷಣೆ ಮಾಡಿ. ಮಂಗಳೂರಿನ ರಸ್ತೆಯ ಮೇಲೆಯೇ ನಮಾಜ್ ಮಾಡುತ್ತಾರೆ. ನಮಾಜ್ ಮಾಡಿದವರ ವಿರುದ್ಧ ಕೇಸು ದಾಖಲಿಸಿ ಪೊಲೀಸ್ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಬಿ ರಿಪೋರ್ಟ್ ಸಲ್ಲಿಸುತ್ತಾರೆ. ಇದೆಂತಹ ಸರ್ಕಾರ
-ಕೆ.ಎಸ್. ಈಶ್ವರಪ್ಪ, ಮಾಜಿ ಡಿಸಿಎಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.