* ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ವಿವಾದ ಸೃಷ್ಟಿಸಿರುವ ಈಶ್ವರಪ್ಪ
* ಇದರ ಬೆನ್ನಲ್ಲೇ ಮತ್ತೋರ್ವ ಸಚಿವನಿಂದ ವಿವಾದ
* ರಾಷ್ಟ್ರ ಧ್ವಜಕ್ಕೆ ಕರ್ನಾಟಕದ ಮತ್ತೋರ್ವ ಸಚಿವ ಅಪಮಾನ
ಮಂಡ್ಯ, (ಫೆ.18): ಒಂದೆಡೆ ಕರ್ನಾಟಕದಲ್ಲಿ ಹಿಜಾಬ್ ಗದ್ದಲ, ಗಲಾಟೆ ಜೋರಾಗಿದೆ. ಮತ್ತೊಮದೆಡೆ ತ್ರಿವರ್ಣ ಧ್ವಜ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮ ಶುರುವಾಗಿದೆ.
ರಾಷ್ಟ್ರಧ್ವಜದ (Flag Row) ಬಗ್ಗೆ ಸಚಿವ ಕೆ.ಎಸ್ಈಶ್ವರಪ್ಪ ಹೇಳಿಕೆ ಖಂಡಿಸಿ ಸದನದಲ್ಲಿಯೇ ಕಾಂಗ್ರೆಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿರುವ ಕಾಂಗ್ರೆಸ್ ನಾಯಕರು, ನಿನ್ನೆಯ ಅಧಿವೇಶನ ಮುಗಿದ ಬಳಿಕವೂ ಪ್ರತಿಭಟನೆ ಮುಂದುವರಿಸಿದ್ದು, ಸದನದಲ್ಲಿಯೇ ಅಹೋರಾತ್ರಿ ಧರಣಿ ನಡೆಸಿದ್ದಾರೆ.
Flag Row: ಈಶ್ವರಪ್ಪ ರಾಜೀನಾಮೆ ಬೇಡ, ಅವರನ್ನು ವಜಾ ಮಾಡ್ಬೇಕು: ಡಿಕೆಶಿ
ಇಷ್ಟೆಲ್ಲಾ ರಂಪರಾಮಾಯಣ ಆಗುತ್ತಿರುವುದು ಗೊತ್ತಿದ್ದರೂ ಸಹ ಕ್ರೀಡೆ ಮತ್ತು ರೇಷ್ಮೆ ಸಚಿವ ಕೆ.ಸಿ.ನಾರಾಯಣ ಗೌಡ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ನಡೆದಿದೆ.
ಹೌದು....ಮಾಜಿ ಶಾಸಕ ಡಾ.ಹೆಚ್.ಡಿ.ಚೌಡಯ್ಯ ಅಂತ್ಯಕ್ರಿಯೆ ವೇಲೆ ಸಚಿವ ನಾರಾಯಣಗೌಡ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ಡಾ. ಹೆಚ್ ಡಿ ಚೌಡಯ್ಯ ಬುಧವಾರ ವಿಧಿವಶರಾದ್ದರು. ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನಡೆದಿದ್ದು, ಮಾಜಿ ಶಾಸಕರ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಕ್ರೀಡೆ ಮತ್ತು ರೇಷ್ಮೆ ಸಚಿವ ಕೆ.ಸಿ.ನಾರಾಯಣ ಗೌಡ ಚಪ್ಪಲಿ ಧರಿಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.
ಸಚಿವ ಕೆ.ಸಿ.ನಾರಾಯಣ ಗೌಡ ಅವರ ನಿರ್ಲಕ್ಷ್ಯತನಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇದು ರಾಷ್ಟ್ರಧ್ವಜಕ್ಕೆ ಅಷ್ಟೇ ಅಲ್ಲ, ಮಾಜಿ ಶಾಸಕರಿಗೂ ಮಾಡಿದ ಅಪಮಾನ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಅನ್ನೋ ವಿಚಾರ ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ರೊಚ್ಚಿಗೆದ್ದಿದೆ. ಇದು ತವ್ರ ಸ್ವರೂಪ ಪಡೆಯುವ ಲಕ್ಷಣಗಳು ಜೋರಾಗಿವೆ. ಪ್ರಸ್ತುತ ವಿಧಾನಮಂಡಲ ಅಧಿವೇಶನದಲ್ಲಿ ಇದು ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಸದನದ ಒಳಗೆ ರಾಷ್ಟ್ರಧ್ವಜದ ಗಲಾಟೆ ಜೋರಾದ್ರೆ.. ಹೊರಗೂ ಕೂಡ ಮಹಾ ಕಾಳಗ ನಡೆದಿದೆ.ಇದರ ಮಧ್ಯೆ ನಾರಾಯಣಗೌಡ ಈ ಘಟನೆ ಮುಂದೆ ಯಾವ ರೀತಿ ಸ್ವರೂಪ ಪಡೆದುಕೊಳ್ಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
ಮಹಾರಾಷ್ಟ್ರಕ್ಕೆ ಜೈಕಾರ ಹಾಕಿ ಬಳಿಕ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದ ಸಚಿವ
ಮಹಾರಾಷ್ಟ್ರಕ್ಕೆ ಜೈಕಾರ ಹಾಕಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಸಚಿವ ಕೆ.ನಾರಾಯಣಗೌಡ ಇಂದು ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದರು. "ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕನ್ನಡಿಗರಲ್ಲಿ, ಕರ್ನಾಟಕ ಜನರಲ್ಲಿ ಕ್ಷಮೆ ಕೋರುತ್ತೇನೆ. ಕನ್ನಡದ ಬಗ್ಗೆ ನನಗೆ ಗೌರವವಿದೆ, ನಾನು ಏನು ಹೇಳಿದ್ದೀನಿ ಅದು ಬಾಯಿ ತಪ್ಪಿ ಬಂದಿದೆ. ಅದರಿಂದ ಕನ್ನಡಿಗರಿಗೆ ನೋವಾಗಿದ್ದರೆ, ಖಂಡಿತಾ ಕ್ಷಮೆ ಕೋರಲು ಬಯಸುತ್ತೇನೆ. ನಾನು ಎಂದೆಂದಿಗೂ ಕನ್ನಡಿಗನೇ ಎಂದು ನಾರಾಯಣಗೌಡ ಹೇಳಿದ್ದರು.
ಈಶ್ವರಪ್ಪ ವಿರುದ್ಧ ಮಹಾದೇವಪ್ಪ ವಾಗ್ದಾಳಿ
ಮೈಸೂರು: ಈಶ್ವರಪ್ಪ ಒಬ್ಬ ಮಂತ್ರಿಯಾಗಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ. ಇವರಿಗೆ ರಾಷ್ಟ್ರದ ಧ್ವಜದ ಬಗ್ಗೆ ಗೌರವವಿಲ್ಲ. ಕೇಸರಿ ಧ್ವಜ ಹಾರಿಸುತ್ತೇವೆ ಅನ್ನೋದು ರಾಷ್ಟ್ರದ್ರೋಹಕ್ಕೆ ಸಮ. ಈಶ್ವರಪ್ಪ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಇಲ್ಲ ಗೌರ್ನರ್ ಮಧ್ಯಪ್ರವೇಶಿಸಿ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಈಶ್ವರಪ್ಪಗೆ, ಬಿಜೆಪಿ ಪಕ್ಷಕ್ಕೆ ಜನತೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ .ಇದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದಿದ್ದಾರೆ