ಲೋಕ ಎಲೆಕ್ಷನನ್ನು ಬಿಜೆಪಿ ಮತಪತ್ರ ಮೂಲಕ ಮಾಡಲಿ: ಸಚಿವ ಎಚ್‌.ಕೆ.ಪಾಟೀಲ್‌

Published : Sep 07, 2025, 07:33 AM IST
ಲೋಕ ಎಲೆಕ್ಷನನ್ನು ಬಿಜೆಪಿ ಮತಪತ್ರ ಮೂಲಕ ಮಾಡಲಿ: ಸಚಿವ ಎಚ್‌.ಕೆ.ಪಾಟೀಲ್‌

ಸಾರಾಂಶ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ ಇವಿಎಂ ಮೇಲೆ ವಿಶ್ವಾಸ ಇಲ್ಲದಂತಾಗಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರಗಳ ಬಳಕೆಗೆ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.

ಬೆಂಗಳೂರು (ಸೆ.07): ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ ಇವಿಎಂ ಮೇಲೆ ವಿಶ್ವಾಸ ಇಲ್ಲದಂತಾಗಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರಗಳ ಬಳಕೆಗೆ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಅಗತ್ಯವಾದರೆ ಈ ಕುರಿತು ಕಾಯ್ದೆಯಲ್ಲೂ ತಿದ್ದುಪಡಿ ತರಲಾಗುವುದು ಮತ್ತು ನಿಯಮ ಬದಲಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಇವಿಎಂ ಮೂಲಕ ಅಕ್ರಮ ನಡೆಯುತ್ತಿರುವ ಕುರಿತು ಕರ್ನಾಟಕ ಸೇರಿ ದೇಶದ ಅನೇಕ ರಾಜ್ಯಗಳಲ್ಲಿ ಅನುಮಾನ ವ್ಯಕ್ತವಾಗಿದೆ. ಇವಿಎಂ ಹ್ಯಾಕ್‌ ಮಾಡಲಾಗುತ್ತದೆ ಎಂಬ ಅನುಮಾನವಿದೆ.

ಅದರಲ್ಲೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಕ್ರಿಯೆ, ಫಲಿತಾಂಶ ಅದಕ್ಕೆ ಪುಷ್ಟಿ ನೀಡುವಂತಿದೆ. ಇವಿಎಂ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕಿರುವ ಅಧಿಕಾರದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರಗಳ ಬಳಕೆಗೆ ನಿರ್ಣಯಿಸಲಾಗಿದೆ ಎಂದರು. ಚುನಾವಣಾ ಪ್ರಕ್ರಿಯೆ ಮತ್ತು ಇವಿಎಂ ಮೇಲಿನ ಅನುಮಾನದ ಕುರಿತು ಬಿಜೆಪಿ ಸರ್ಕಾರವಿದ್ದಾಗಲೇ ವಿಧಾನಸಭೆಯಲ್ಲಿ ಚರ್ಚೆ ಮಾಡಲಾಗಿತ್ತು. ಅಲ್ಲದೆ ಇವಿಎಂ ವಿರುದ್ಧ ಸರ್ವಾನುಮತದಿಂದ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈ ಚರ್ಚೆ ಕುರಿತು ಆಗಿನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.

ಅದಕ್ಕೆ ಚುನಾವಾಣೆ ಆಯೋಗ, ತಮ್ಮ ಬಗ್ಗೆ ಸದನದಲ್ಲಿ ಚರ್ಚೆ ಮಾಡಬಾರದು ಎಂದು ಪ್ರತ್ಯುತ್ತರ ನೀಡಿದ್ದರು. ಆದರೆ ಇವಿಎಂ ಮೇಲಿನ ಅನುಮಾನದ ಬಗ್ಗೆ ವಿವರಣೆ ನೀಡಲಿಲ್ಲ. ಪ್ರಜಾಪ್ರಭುತ್ವದಲ್ಲಿ ಸ್ವಾಯತ್ತ ಸಂಸ್ಥೆ ಮೇಲೆ ಅನುಮಾನ ಬಂದಾಗ ಪಾರದರ್ಶಕವಾಗಿ ಅದನ್ನು ಪರಿಹರಿಸಬೇಕು. ಆದರೆ, ಚುನಾವಣಾ ಆಯೋಗ ಅದನ್ನು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಆಯೋಗದ ನಿಯಮದಂತೆ 15 ವರ್ಷಗಳಾದ ನಂತರ ಇವಿಎಂಗಳನ್ನು ನಾಶ ಮಾಡಬೇಕು.

ಹೇಗೆ ನಾಶ ಮಾಡಬೇಕು ಎಂಬುದಕ್ಕೂ ನಿಯಮವಿದೆ. ಆದರೆ, ಆಯೋಗ ಅದನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಅನೇಕ ರಾಜ್ಯಗಳಲ್ಲಿ ಟ್ರಕ್‌ಗಟ್ಟಲೆ ಇವಿಎಂಗಳನ್ನು ತೆಗೆದುಕೊಂಡು ಹೋಗುವುದನ್ನೂ ನೋಡಿದ್ದೇವೆ. ಇನ್ನು, ಇವಿಎಂ ಯಂತ್ರಗಳು ಎಲ್ಲೆಂದರಲ್ಲಿ ಬಿದ್ದಿರುವುದೂ ವರದಿಯಾಗಿದೆ. ಚುನಾವಣಾ ಆಯೋಗ ನಿಯಮ ಗಾಳಿಗೆ ತೂರಿ ಕೆಲಸ ಮಾಡುತ್ತಿದೆ. ಆಯೋಗ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಹೀಗಾಗಿ ಅನುಮಾನ ಹೋಗಲಾಡಿಸಲು ಮತಪತ್ರದ ಮೂಲಕ ಚುನಾವಣೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಮತಯಂತ್ರವೇ ಬಳಕೆಯಾಗಲಿ: ಇವಿಎಂ ಮೂಲಕ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದ ಕಾರಣ ಕಾಂಗ್ರೆಸ್‌ ಅಧಿಕಾರ ತ್ಯಜಿಸಲಿ ಎಂದು ಬಿಜೆಪಿ ಮಾಡಿರುವ ಸವಾಲಿಗೆ ಪ್ರತಿಕ್ರಿಯಿಸಿದ ಎಚ್‌.ಕೆ. ಪಾಟೀಲ್‌, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನೂ ಮತಪತ್ರಗಳ ಮೂಲಕ ಮಾಡುತ್ತೇವೆ ಎಂದು ಬಿಜೆಪಿ ಘೋಷಿಸಲಿ. ಆಗ ನಾವೂ ಚುನಾವಣೆಯನ್ನು ಮತ್ತೊಮ್ಮೆ ಎದುರಿಸುತ್ತೇವೆ. ಇವಿಎಂ ಕುರಿತು ಕರ್ನಾಟಕದಲ್ಲಿ ಎಥಿಕಲ್‌ ಹ್ಯಾಕಥಾನ್‌ ಮಾಡಿ ಎಂದು ಆಯೋಗಕ್ಕೆ ಹಿಂದೆಯೇ ಹೇಳಿದ್ದೆವು. ಆದರೆ, ಆಯೋಗ ಅದನ್ನು ಮಾಡಲಿಲ್ಲ. ಚುನಾವಣಾ ಆಯೋಗ ಯಾವುದೇ ಪರೀಕ್ಷೆಗೆ ಒಪ್ಪಲಿಲ್ಲ. ಬಿಜೆಪಿ ರಾಜಕೀಯವಾಗಿ ಹೇಳುತ್ತಿದೆ ಎಂದರು.

ಕಾಯ್ದೆ ತಿದ್ದುಪಡಿ ಮಾಡ್ತೀವಿ: ಸ್ಥಳೀಯ ಚುನಾವಣೆಗಳಲ್ಲಿ ಮತಪತ್ರ ಬಳಕೆಗೆ ಸಂಬಂಧಿಸಿ ಅಗತ್ಯವಿದ್ದರೆ ಕಾಯ್ದೆ ತಿದ್ದುಪಡಿ ಮಾಡುತ್ತೇವೆ. ರಾಜ್ಯಪಾಲರು ಕಾನೂನು, ಸಂವಿಧಾನದ ಪರವಾಗಿ ಕೆಲಸ ಮಾಡಬೇಕು. ನಾವು ಮಾಡಿಕಳುಹಿಸುವ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಬೇಕು ಎಂದು ಎಚ್‌.ಕೆ. ಪಾಟೀಲ್‌ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!