ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು: ಸಂಸದ ಯದುವೀರ್‌

Published : Sep 07, 2025, 06:45 AM IST
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು: ಸಂಸದ ಯದುವೀರ್‌

ಸಾರಾಂಶ

ಬುಕರ್‌ ಪ್ರಶಸ್ತಿ ವಿಜೇತೆ, ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಗೆ ಆಗಮಿಸುವ ವೇಳೆ ಅವರಿಂದ 2023ರಲ್ಲಿ ವೇದಿಕೆಯೊಂದರಲ್ಲಿ ನಡೆದ ಘಟನೆ ಮರುಕಳಿಸಬಾರದು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.

ಬೆಂಗಳೂರು (ಸೆ.07): ಬುಕರ್‌ ಪ್ರಶಸ್ತಿ ವಿಜೇತೆ, ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಗೆ ಆಗಮಿಸುವ ವೇಳೆ ಅವರಿಂದ 2023ರಲ್ಲಿ ವೇದಿಕೆಯೊಂದರಲ್ಲಿ ನಡೆದ ಘಟನೆ ಮರುಕಳಿಸಬಾರದು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ. ನಗರದಲ್ಲಿ ಗಣೇಶ ಉತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಷ್ತಾಕ್ ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಬಗ್ಗೆ ಭಿನ್ನಾಭಿಪ್ರಾಯ ಇಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಿದ್ದೇವೆ. ಆದರೆ, ಮುಸ್ಲಿಂ ಮಹಿಳೆಯರಿಗೆ ಅವರದೇ ಧಾರ್ಮಿಕ ಸ್ಥಳದಲ್ಲಿ ಪ್ರವೇಶವಿಲ್ಲದ ವ್ಯವಸ್ಥೆ ಇದೆ. ನಮ್ಮ ಧಾರ್ಮಿಕ ವ್ಯವಸ್ಥೆಯಲ್ಲಿ ಅವರಿಗೆ ಅತ್ಯಂತ ಒಳ್ಳೆಯ ರೀತಿಯಲ್ಲಿ ಸ್ವಾಗತ ಮಾಡುತ್ತಿರುವುದು ಭಾರತೀಯ ಧರ್ಮದ ಬಹುತ್ವದ ಪ್ರತೀಕ ಎಂದರು.

ಜನರ ದಿಕ್ಕು ತಪ್ಪಿಸಲು ಬ್ಯಾಲೆಟ್‌ ಪೇಪರ್‌: ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಕುರಿತು ಪ್ರಶ್ನೆಗೆ, ಇವಿಎಂ ಮೂಲಕ ದೇಶದಲ್ಲಿ ಪಾರದರ್ಶಕ ಚುನಾವಣೆ ನಡೆಯುತ್ತಿದೆ. ಹೀಗಿರುವಾಗ, ಇವಿಎಂ ವಿರುದ್ಧ ಕಾಂಗ್ರೆಸ್ ಹೋರಾಟ ಬರೀ ಜನರ ದಿಕ್ಕು ತಪ್ಪಿಸಲು, ಅಪಪ್ರಚಾರ ಮಾಡಲು ಮತ್ತು ಅವರದೇ ಆದ ನಿರೂಪಣೆ ಸೃಷ್ಟಿಸಲು ಮಾಡಿರುವ ಪ್ರಯತ್ನ. ಕೆಲ ಕಡೆ ಕಾಂಗ್ರೆಸ್ ಮತ್ತು ಮಿತ್ರಪಕ್ಷದವರು ಕೂಡ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅದೇ ರೀತಿ ದೇಶದ ಹಲವೆಡೆ ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್ ಪಕ್ಷದ ನಾಯಕರು ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಒಡೆಯರ್ ಹೇಳಿದರು.

ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾಗಿ, ಸಂಘರ್ಷವಾಗಿದೆ: ಕಾಡಿನ ಸುರಕ್ಷೆತೆಯತ್ತ ಹೆಚ್ಚು ಒತ್ತು ಕೊಟ್ಟಿರುವ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಮಾನವ ಮತ್ತು ಪ್ರಾಣಿ ಸಂಘರ್ಷ ಹೆಚ್ಚಾಗಿದೆ ಎಂದು ತಿಳಿಸಿದರು. ರಾಜ್ಯದ ಅರಣ್ಯದ ಗಡಿ ಭಾಗಗಳಲ್ಲಿ ಸಾವಿರಾರು ಕಿ.ಮೀ. ರೈಲ್ವೇ ಬ್ಯಾರಿಕೇಡ್ ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ. ಯೋಜನೆ ರೂಪುಗೊಂಡ ಬಳಿಕ ಅನುಷ್ಠಾನದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು ಎಂದರು. ಪ್ರಧಾನಿಯವರ ಕಾರ್ಯಕ್ರಮಗಳು ಮತ್ತು ಅವರ ಅಭಿವೃದ್ಧಿ ಕೆಲಸಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಕೂಡ ತಲುಪುತ್ತಿವೆ. ಅದಕ್ಕೆ ನಿದರ್ಶನ ಎಂಬಂತೆ ಇಂದು ನಡೆದ ಕಾರ್ಯಕ್ರಮವೇ ಸಾಕ್ಷಿ ಎಂದರು.

ನಾಗರಹೊಳೆ ಅರಣ್ಯದಲ್ಲಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಚಾರ. ದೇಶದ ಕಟ್ಟ ಕಡೆಯ ವ್ಯಕ್ತಿಗೂ ಮೋದಿ ಅವರ ಅಭಿವೃದ್ಧಿ ಸಂದೇಶ ರವಾನಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು ಅದರಂತೆ ಸಾಕಾರಗೊಂಡಿದೆ ಎಂದು ಅವರು ಹೇಳಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕಂಬ್ರಳ್ಳಿ ಸುಬ್ಬಣ್ಣ ಮಾತನಾಡಿ, ಎಚ್.ಡಿ. ಕೋಟೆ ತಾಲ್ಲೂಕಿನ ಮಾನಿಮೂಲೆ ಹಾಡಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ನಮಗೆ ಹಲವು ಸಮಸ್ಯೆಗಳು ಎದುರಾದವು, ಆ ಸಮಸ್ಯೆಗಳಿಗೆ ಪರಿಹಾರ‌ಕಂಡುಕೊಂಡು ಕಾರ್ಯಕ್ರಮವನ್ನು ಹಾಡಿಯಲ್ಲಿ ಆಯೋಜನೆ ಮಾಡಿದ್ದೇವೆ. ಜೊತೆಗೆ ಇಲ್ಲಿನ ಸಮಸ್ಯೆ ಗುರುತಿಸಿ ಸಂಸದರಿಗೆ ಮಾಹಿತಿ ನೀಡಲಾಗಿದ್ದು, ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!