
ಬೆಂಗಳೂರು (ಜೂ.20): ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ನ 11 ಶಾಸಕರು ಅಡ್ಡ ಮತದಾನ ಮಾಡಿದ ಬೆನ್ನಲ್ಲೇ, ಆ ರೀತಿ ಮಾಡಿದವರು ಯಾರು ಎಂಬ ಬಗ್ಗೆ ಪಕ್ಷಗಳಲ್ಲೇ ಚರ್ಚೆ ನಡೆಯುತ್ತಿದೆ. ಹಲವು ಶಾಸಕರ ಮೇಲೆ ಅನುಮಾನ ವ್ಯಕ್ತವಾಗಿದ್ದು, ಕೆಲವು ಹೆಸರುಗಳ ಬಗ್ಗೆ ಚರ್ಚೆಯಾಗಿವೆ. ಇದರ ಬೆನ್ನಲ್ಲೇ ಹಲವು ಶಾಸಕರು ‘ನಾನವನಲ್ಲ, ನಾನವನಲ್ಲ’ ಎನ್ನುವ ಮೂಲಕ ಅಡ್ಡಮತದಾನ ಮಾಡಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.
ಬಿಜೆಪಿ ಶಾಸಕರಾದ ಹೂವಿನಹಡಗಲಿಯ ಕೃಷ್ಣ ನಾಯಕ್, ಶಿರಹಟ್ಟಿಯ ಡಾ। ಚಂದ್ರು ಲಮಾಣಿ, ಬೇಲೂರಿನ ಎಚ್.ಕೆ. ಸುರೇಶ್, ಕೆ.ಆರ್.ಪುರದ ಬೈರತಿ ಬಸವರಾಜು ಹಾಗೂ ಹನೂರು ಜೆಡಿಎಸ್ ಶಾಸಕ ಮಂಜುನಾಥ್ ಅವರು ತಾವು ಅಡ್ಡಮತದಾನ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ರಹಸ್ಯ ಮತದಾನ ಪದ್ಧತಿ ಇದೆ. ಗುರುವಾರ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಆಗಿದೆ. ಆದರೆ ಅದನ್ನು ಮಾಡಿದ್ದು ಯಾರು ಎಂಬುದರ ಪತ್ತೆ ಪಕ್ಷಗಳಿಗೂ ಕಬ್ಬಿಣದ ಕಡಲೆಯಾಗಿದೆ. ಎಲ್ಲ ಶಾಸಕರು ತಾವು ಮಾಡಿಲ್ಲ ಎಂದು ಹೇಳುತ್ತಿರುವುದರಿಂದ ಅಡ್ಡ ಮತದಾನ ಮಾಡಿದವರನ್ನು ಪತ್ತೆ ಹಚ್ಚುವುದು ಸವಾಲಾಗಿದೆ.
ಈ ನಡುವೆ, ಅಡ್ಡಮತದಾನ ಮಾಡಿದ 11 ಶಾಸಕರ ಪೈಕಿ ಪ್ರತಿಪಕ್ಷಗಳಾದ ಬಿಜೆಪಿಯ ಶಾಸಕರು ಎಷ್ಟು, ಜೆಡಿಎಸ್‌ನ ಶಾಸಕರು ಎಷ್ಟು ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.
ಈ ಬಗ್ಗೆ ಎರಡೂ ಪಕ್ಷಗಳ ನಾಯಕರು ಒಂದೊಂದು ರೀತಿಯ ಅಂಕಿ ಸಂಖ್ಯೆಯನ್ನು ನೀಡುತ್ತಿದ್ದಾರೆಯೇ ಹೊರತು ಇಷ್ಟೇ ಎಂಬ ನಿಖರ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ಒಂದಂತೂ ಸತ್ಯ. ತಮ್ಮ ಪಕ್ಷದಿಂದ ಕಡೆಮ ಅಡ್ಡ ಮತದಾನ ನಡೆದಿದೆ ಎಂಬುದನ್ನು ನಿರೂಪಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಗುರುವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದಿಂದ ಮೂರು ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಒಬ್ಬರ ಮತ ಅಸಿಂಧುವಾಗಿದೆ ಎಂದಿದ್ದರು. ಶುಕ್ರವಾರ ಮಾತನಾಡಿದ ಅವರು, ಜೆಡಿಎಸ್‌ನಿಂದ ಆರೇಳು ಅಡ್ಡ ಮತದಾನ ಆಗಿದೆ. ಬಿಜೆಪಿಯಿಂದ ನಾಲ್ಕೈದು ಅಡ್ಡ ಮತದಾನ ಆಗಿದೆ ಎಂದು ಹೇಳಿದರು.
ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ನಮ್ಮ ಪಕ್ಷದ ನಾಲ್ವರು ಶಾಸಕರು ಅಡ್ಡಮತದಾನ ಮಾಡಿದ್ದಾರೆ ಎಂದರು.
ಜೆಡಿಎಸ್‌ನ ನಾಲ್ವರು ಶಾಸಕರ ಅಡ್ಡಮತ
ಯಾರು ಅಡ್ಡ ಮತದಾನ ಮಾಡಿದ್ದಾರೆಂಬ ಮಾಹಿತಿ ನನಗಿದೆ. ನಾಲ್ವರು ಶಾಸಕರು ಪಕ್ಷಕ್ಕೆ ವಿರುದ್ಧವಾಗಿ ಮತ ಹಾಕಿದ್ದಾರೆ. ಪಕ್ಷ ಬಿಡುವ ಬಗ್ಗೆಯೂ ಅವರು ಚರ್ಚೆ ನಡೆಸಿದ್ದಾರೆ. ಆ ವಿಷಯವೂ ನನಗೆ ಗೊತ್ತಿದೆ. ಜಿ.ಟಿ. ದೇವೇಗೌಡ ಅವರು ಎರಡೂ ಕಾಲನ್ನು ಪಕ್ಷದಿಂದ ಹೊರಗಿಟ್ಟಿದ್ದಾರೆ.
- ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
ಜೆಡಿಎಸ್ ಶಾಸಕರ ಜತೆ ಎಚ್‌ಡಿಕೆ ಸಭೆ: ಜಿಟಿಡಿ ಗೈರು ಹಾಜರಿ
ಬೆಂಗಳೂರು: ವಿಧಾನಪರಿಷತ್ ಚುನಾವಣೆಯ ಮುಖಭಂಗದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಶಾಸಕರ ಸಭೆ ನಡೆಸಿ ಅಡ್ಡಮತದಾನ ಕುರಿತಂತೆ ಚರ್ಚೆ ನಡೆಸಿದರು. ಜಿ.ಟಿ. ದೇವೇಗೌಡ ಅವರನ್ನು ಹೊರತುಪಡಿಸಿ ಉಳಿದೆಲ್ಲ ಶಾಸಕರು ಹಾಜರಾಗಿದ್ದರು. ಅವರಲ್ಲಿ ಅಡ್ಡಮತದಾನ ಮಾಡಿದವರು ಯಾರೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.