* ದೆಹಲಿ ಸಂದೇಶ ಇಂದು ಬರುತ್ತಾ? ಏನು ಬರುತ್ತೆ?
* ರಾಜ್ಯದಲ್ಲಿ ಗರಿಗೆದರಿದೆ ಭಾರೀ ಕುತೂಹಲ
* ಹೈಕಮಾಂಡ್‌ನಿಂದ ಸೂಚನೆ ಬಂದರೆ ಸೂಚಿಸಿದರೆ ನಾಳೆಯೇ ಯಡಿಯೂರಪ್ಪ ರಾಜೀನಾಮೆ?
* ಇಲ್ಲವಾದಲ್ಲಿ ಆಷಾಢ ಮುಗಿಯುವವರೆಗೆ ಬಿಎಸ್‌ವೈ ಹಂಗಾಮಿ?
ಬೆಂಗಳೂರು(ಜು.25): ಮುಖ್ಯಮಂತ್ರಿಯಾಗಿ ಎರಡು ವರ್ಷಗಳನ್ನು ಪೂರೈಸುತ್ತಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಭಾನುವಾರ ಹೈಕಮಾಂಡ್‌ನಿಂದ ಸಾಂಕೇತಿಕವಾಗಿ ಸಂದೇಶ ರವಾನೆಯಾಗಲಿದ್ದು, ಬಹುತೇಕ ಸೋಮವಾರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ.
ಸೋಮವಾರ ರಾಜೀನಾಮೆ ಸಲ್ಲಿಸಿದರೂ ಕೆಲವು ದಿನಗಳ ಕಾಲ ಅಂದರೆ, ಆಷಾಢ ಮಾಸ ಮುಗಿಯುವವರೆಗೆ ಯಡಿಯೂರಪ್ಪ ಅವರನ್ನೇ ಹಂಗಾಮಿ ಮುಖ್ಯಮಂತ್ರಿಯನ್ನಾಗಿ ಮುಂದುವರೆಸಲು ಉದ್ದೇಶಿಸಲಾಗಿದೆ. ಅಷ್ಟರೊಳಗಾಗಿ ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಟ್ಟಿನಲ್ಲಿ ಶ್ರಾವಣ ಮಾಸದ ವೇಳೆಗೆ ಹೊಸ ಮುಖ್ಯಮಂತ್ರಿ ನೇಮಕವಾಗುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಆದರೆ, ರಾಜ್ಯದಲ್ಲಿ ತೀವ್ರ ಮಳೆಯಾಗುತ್ತಿರುವುದರಿಂದ ಪರಿಸ್ಥಿತಿ ನಿಭಾಯಿಸಲು ಯಡಿಯೂರಪ್ಪ ಅವರು ಇನ್ನೂ ಕೆಲವು ದಿನಗಳ ಕಾಲ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾಗಿಯೇ ಮುಂದುವರೆಯಲಿ ಎಂಬ ನಿಲುವಿಗೆ ಬಿಜೆಪಿ ವರಿಷ್ಠರು ಬಂದರೆ ಮಾತ್ರ ಸೋಮವಾರ ರಾಜೀನಾಮೆ ನೀಡುವ ಪ್ರಕ್ರಿಯೆ ಇರುವುದಿಲ್ಲ ಎಂದು ತಿಳಿದು ಬಂದಿದೆ.
ಪಕ್ಷದ ಒಂದು ಮೂಲದ ಪ್ರಕಾರ, ಸೋಮವಾರ ರಾಜೀನಾಮೆ ನೀಡುವಂತೆ ವರಿಷ್ಠರಿಂದ ಸಂದೇಶ ಬರುವ ಅಗತ್ಯವಿಲ್ಲ. ರಾಜೀನಾಮೆ ನೀಡುವುದು ಈಗಾಗಲೇ ನಿರ್ಧಾರವಾಗಿರುವ ವಿಷಯ. ಒಂದು ವೇಳೆ ರಾಜೀನಾಮೆ ನೀಡುವುದು ಬೇಡ ಎಂದಾದರೆ, ಭಾನುವಾರ ಸಂಜೆ ವರಿಷ್ಠರ ಸಭೆ ದೆಹಲಿಯಲ್ಲಿ ನಿಗದಿಯಾಗಿದ್ದು ಅದಾದ ಬಳಿಕ ಸಂದೇಶ ರವಾನಿಸಬಹುದು. ಇಲ್ಲದಿದ್ದರೆ ಕಳೆದ ವಾರ ದೆಹಲಿಯಲ್ಲಿ ನಡೆದ ಮಾತುಕತೆಯಂತೆ ಸೋಮವಾರ ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕಾಗುತ್ತದೆ.
ಹೀಗಾಗಿಯೇ ಯಡಿಯೂರಪ್ಪ ಅವರು ಸೋಮವಾರ ನಗರದಲ್ಲಿ ಇರುವಂತೆ ಪಕ್ಷದ ಅನೇಕ ಶಾಸಕರಿಗೆ ಮಾಹಿತಿ ನೀಡಿದ್ದಾರೆ. ಬಿಜೆಪಿ ಸರ್ಕಾರ ಎರಡು ವರ್ಷಗಳನ್ನು ಪೂರೈಸುತ್ತಿರುವುದರಿಂದ ಅಂದು ಸರ್ಕಾರದ ಸಾಧನೆಗಳ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅದಾದ ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ನೀಡಬಹುದು ಎನ್ನಲಾಗಿದೆ.
ಉತ್ತರಾಧಿಕಾರಿ ಆಯ್ಕೆ ಕಗ್ಗಂಟು
ಈ ನಡುವೆ ಮುಂದಿನ ಮುಖ್ಯಮಂತ್ರಿ ಆಯ್ಕೆ ಮಾಡುವ ವಿಷಯ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಕಗ್ಗಂಟಾಗಿ ಪರಿಣಮಿಸಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಬಿ.ಎಸ್.ಯಡಿಯೂರಪ್ಪ ಅವರ ನಿರ್ಗಮನದಿಂದ ಆಗುವ ನಷ್ಟಭರಿಸಲು ಅದೇ ಸಮುದಾಯಕ್ಕೆ ಸೇರಿದವರೊಬ್ಬರಿಗೆ ಮುಖ್ಯಮಂತ್ರಿ ಪಟ್ಟಕಟ್ಟಬೇಕು. ಇಲ್ಲದಿದ್ದರೆ ಸಮುದಾಯ ಪಕ್ಷದಿಂದ ದೂರ ಸರಿಯಬಹುದು ಎಂಬ ಆತಂಕದ ಬಗ್ಗೆ ಸಮಾಲೋಚನೆ ನಡೆದಿದೆ. ಆದರೆ, ಯಡಿಯೂರಪ್ಪ ಸ್ಥಾನವನ್ನು ಒಂದಿಷ್ಟಾದರೂ ಸರಿದೂಗುವಂಥ ಲಿಂಗಾಯತ ಮುಖಂಡರಿಗಾಗಿ ಶೋಧ ಮುಂದುವರೆದಿದೆ ಎನ್ನಲಾಗಿದೆ.