ಎಲ್ಲ ಕೆರೆಗೂ ಇನ್ನು 30 ಮೀ. ಬಫರ್‌ ಜೋನಿಲ್ಲ, ವಿಸ್ತೀರ್ಣ ಆಧರಿಸಿ ನಿಗದಿ: ವಿಧಾನಸಭೆಯ ಮನ್ನಣೆ

Published : Aug 20, 2025, 09:47 AM IST
Vidhan soudha

ಸಾರಾಂಶ

ಉಡುಪಿ ಮತ್ತು ಮಂಗಳೂರು ಪ್ರದೇಶದ ನಗರದ ಅತಿ ಸಣ್ಣ ಕೆರೆಗಳಿಗೂ 30 ಮೀಟರ್‌ ಬಫರ್‌ ಜೋನ್‌ ನಿಗದಿಗೊಳಿಸಿರುವುದರಿಂದ ಸಮಸ್ಯೆ ಉಂಟಾಗಿರುವ ಬಗ್ಗೆ ಆ ಭಾಗದ ಶಾಸಕರು ಮನವಿ ಮಾಡಿದ್ದರು.

ವಿಧಾನಸಭೆ (ಆ.20): ಕೆರೆಗಳ ವಿಸ್ತೀರ್ಣ ಆಧರಿಸಿ ಬಫರ್‌ ಜೋನ್‌ ನಿಗದಿಗೊಳಿಸುವ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ(ತಿದ್ದುಪಡಿ) ವಿಧೇಯಕ 2025’ ಅನ್ನು ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಯಿತು. ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು ಈ ತಿದ್ದುಪಡಿ ವಿಧೇಯಕ ಕುರಿತು ಮಾತನಾಡಿ, ರಾಜ್ಯದಲ್ಲಿ 41,849 ಜಲಮೂಲಗಳಿವೆ. ನಗರಾಭಿವೃದ್ಧಿ ಇಲಾಖೆಯ 2019ರ ಅಧಿಸೂಚನೆ ಪ್ರಕಾರ, ಕೆರೆಗಳಿಗೆ 30 ಮೀಟರ್‌ ಬಫರ್‌ ಜೋನ್‌ ನಿಗದಿಗೊಳಿಸಲಾಗಿದೆ.

ಆದರೆ, ಉಡುಪಿ ಮತ್ತು ಮಂಗಳೂರು ಪ್ರದೇಶದ ನಗರದ ಅತಿ ಸಣ್ಣ ಕೆರೆಗಳಿಗೂ 30 ಮೀಟರ್‌ ಬಫರ್‌ ಜೋನ್‌ ನಿಗದಿಗೊಳಿಸಿರುವುದರಿಂದ ಸಮಸ್ಯೆ ಉಂಟಾಗಿರುವ ಬಗ್ಗೆ ಆ ಭಾಗದ ಶಾಸಕರು ಮನವಿ ಮಾಡಿದ್ದರು. ಹೀಗಾಗಿ ಕೆರೆಗಳ ವಿಸ್ತೀರ್ಣವಾರು ಬಫರ್‌ ಜೋನ್‌ ನಿಗದಿಪಡಿಸುವ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಹಲವು ಬಾರಿ ಸಭೆ ನಡೆಸಿ ಚರ್ಚಿಸಿ, ದೇಶದ ಬೇರೆ ರಾಜ್ಯಗಳ ಕೆರೆಗಳ ಬಫರ್‌ ಜೋನ್‌ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಈ ತಿದ್ದುಪಡಿ ವಿಧೇಯಕ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಸ್ತೀರ್ಣ ಆಧರಿಸಿ ಬಫರ್‌ ಜೋನ್‌ ನಿಗದಿ: ಈ ತಿದ್ದುಪಡಿ ವಿಧೇಯಕದ ಮುಖಾಂತರ ಕೆರೆಗಳ ವಿಸ್ತೀರ್ಣ ಆಧರಿಸಿ ಕೆರೆಯ ಗಡಿಯಿಂದ ಬಫರ್‌ ಜೋನ್ ನಿಗದಿಗೊಳಿಸಲಾಗಿದೆ. 5-10 ಗುಂಟೆ ವಿಸ್ತೀರ್ಣದ ಕೆರೆಗೆ 1 ಮೀಟರ್‌ ಬಫರ್‌ ಜೋನ್‌, 10 ಗುಂಟೆಯಿಂದ 1 ಎಕರೆ ವಿಸ್ತೀರ್ಣದ ಕೆರೆಗೆ 3 ಮೀ., 1 ಎಕರೆಯಿಂದ 10 ಎಕರೆ ವಿಸ್ತೀರ್ಣದ ಕೆರೆಗೆ 6 ಮೀ., 10 ಎಕರೆಯಿಂದ 25 ಎಕರೆ ವಿಸ್ತೀರ್ಣದ ಕೆರೆಗೆ 12 ಮೀ., 25 ಎಕರೆಯಿಂದ 100 ಎಕರೆ ವಿಸ್ತೀರ್ಣದ ಕೆರೆಗೆ 24 ಮೀ. ಹಾಗೂ 100 ಎಕರೆಗಿಂತ ಹೆಚ್ಚಿನ ವಿಸ್ತೀರ್ಣದ ಕೆರೆಗೆ 30 ಮೀ. ಬಫರ್‌ ಜೋನ್‌ ನಿಗದಿಗೊಳಿಸಲಾಗಿದೆ ಎಂದು ತಿಳಿಸಿದರು.

ರಿಯಲ್‌ ಎಸ್ಟೇಟ್‌ ಲಾಬಿಗೆ ಶರಣು- ಸುರೇಶ್‌ಕುಮಾರ್‌: ಬಿಜೆಪಿ ಸದಸ್ಯ ಎಸ್‌.ಸುರೇಶ್‌ ಕುಮಾರ್‌ ಮಾತನಾಡಿ, ಈ ತಿದ್ದುಪಡಿ ವಿಧೇಯಕಕ್ಕೂ ಸಚಿವರ ಉತ್ತರಕ್ಕೂ ಸಂಬಂಧವೇ ಇಲ್ಲ. ಕೆರೆಗಳ ಸಂರಕ್ಷಣೆ ಎಂದರೇನು? ಬಫರ್‌ ಜೋನ್‌ನಲ್ಲಿ ಕೈಗಾರಿಕಾ ಚಟುವಟಿಕೆಗಳು, ಮನರಂಜನಾತ್ಮಕ ಮತ್ತು ವಾಣಿಜ್ಯ ಸೇರಿ ಸಾರ್ವಜನಿಕ ಉಪಯುಕ್ತ ಚಟುವಟಿಕೆಗಳಿಗೆ ಅನುಮತಿ ನೀಡುವುದಾಗಿ ವಿಧೇಯಕದ ಉದ್ದೇಶ ಮತ್ತು ಕಾರಣದಲ್ಲಿ ಹೇಳಿರುವಿರಿ. ಇಲ್ಲಿ ಕೆರೆಗಳ ಸಂರಕ್ಷಣೆ ಎಲ್ಲಿ ಬಂತು ಎಂದು ಪ್ರಶ್ನಿಸಿದ ಅವರು, ಭವಿಷ್ಯದಲ್ಲಿ ಮಕ್ಕಳಿಗೆ ಮ್ಯಾಪ್‌ನಲ್ಲಿ ಕೆರೆಗಳನ್ನು ತೋರಿಸುವ ಸ್ಥಿತಿ ಬರಲಿದೆ ಎಂದು ಅಸಮಾಧಾನ ಹೊರಹಾಕಿದರು.

ಬೆಂಗಳೂರು ನಗರ ಕೆರೆಗಳ ನಗರವಾಗಿತ್ತು. ಕೆ.ಬಿ.ಕೋಳಿವಾಡ ಸಮಿತಿಯ ವರದಿಯಲ್ಲಿ ನಗರದಲ್ಲಿ 389 ಕೆರೆಗಳು ಇರುವುದಾಗಿ ಹೇಳಲಾಗಿತ್ತು. ಹೊಸ ಕೆರೆಗಳ ನಿರ್ಮಾಣ ಸಾಧ್ಯವಿಲ್ಲ. ಇರುವ ಕೆರೆಗಳನ್ನಾದರೂ ಉಳಿಸಿಕೊಳ್ಳಬೇಕು. ಬ್ರಾಂಡ್‌ ಬೆಂಗಳೂರು ಮಾಡುವಾಗ ವಿದೇಶಗಳ ಮಾದರಿಯಲ್ಲಿ ಕೆರೆಗಳನ್ನು ಸಂರಕ್ಷಿಸಬೇಕು. ಇಲ್ಲಿ ಸರ್ಕಾರ ರಿಯಲ್‌ ಎಸ್ಟೇಟ್‌ ಲಾಬಿಗೆ ಶರಣಾಗಿ ಕೆರೆಗಳ ಬಫರ್‌ ಜೋನ್‌ ಕಡಿಮೆ ಮಾಡಿದೆ. ಈ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ಹೀಗಾಗಿ ಸದನ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು. ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಬಿಜೆಪಿ ಸದಸ್ಯ ಎಸ್‌.ಆರ್‌.ವಿಶ್ವನಾಥ್‌ ಸಹ ಸದನ ಸಮಿತಿ ರಚಿಸುವಂತೆ ಒತ್ತಾಯಿಸಿದರು.

ಇದಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿ, ನಾವು ಪ್ರಾಕ್ಟಿಕಲ್‌ ಆಗಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಯಾವುದೇ ಬಿಲ್ಡರ್ಸ್‌ ನಮ್ಮನ್ನು ಸಂಪರ್ಕಿಸಿಲ್ಲ. ಹೊರರಾಜ್ಯಗಳ ಕೆರೆಗಳ ಬಫರ್‌ ಜೋನ್‌ಗಳ ಬಗ್ಗೆ ಅಧ್ಯಯನ ನಡೆಸಿ, ಚರ್ಚಿಸಿ ತಿದ್ದುಪಡಿ ಮಾಡಲಾಗಿದೆ. ಇದರಿಂದ ಬಫರ್‌ ಜೋನ್‌ಗಳಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಅಡ್ಡಿಯಾಗಲ್ಲ. ಮುಂದಾಲೋಚನೆ ಮಾಡಿಯೇ ಈ ತಿದ್ದುಪಡಿ ಮಾಡಿದ್ದೇವೆ ಎಂದರು.

ಬಿಜೆಪಿ ಸಭಾತ್ಯಾಗ: ಸಚಿವ ಬೋಸರಾಜು ಮಾತನಾಡಿ, ಈ ಬಫರ್‌ ಜೋನ್‌ನಲ್ಲಿ ಸಾರ್ವಜನಿಕ ರಸ್ತೆ, ಒಳಚರಂಡಿ, ಎಸ್‌ಟಿಪಿ ಸೇರಿದಂತೆ ಸಾರ್ವಜನಿಕ ಕೆಲಸಗಳಿಗೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿಯವರಿಗೆ ಅವಕಾಶವಿಲ್ಲ. ಕೆರೆಗಳ ಅಂಗಳ ಕಡಿಮೆಯಾಗಲ್ಲ. ತಿದ್ದುಪಡಿ ವಿಧೇಯಕದ ಉದ್ದೇಶ-ಕಾರಣಗಳಲ್ಲಿ ತಪ್ಪಾಗಿದೆ. ಅದನ್ನು ತಿದ್ದುಪಡಿ ಮಾಡುತ್ತೇವೆ. ಹೀಗಾಗಿ ವಿಧೇಯಕವನ್ನು ಅಂಗೀಕರಿಸುವಂತೆ ಮನವಿ ಮಾಡಿದರು. ಸದನ ಸಮಿತಿ ರಚನೆಗೆ ಒಪ್ಪದ ಸರ್ಕಾರದ ಧೋರಣೆಯನ್ನು ಖಂಡಿಸಿ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು. ಬಳಿಕ ಸ್ಪೀಕರ್‌ ಖಾದರ್‌ ಧ್ವನಿಮತದ ಮೂಲಕ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

17 ವರ್ಷಗಳ ಬಳಿಕ ತಾರಿಕ್ ರೆಹಮಾನ್ ಬಾಂಗ್ಲಾಕ್ಕೆ ಎಂಟ್ರಿ; ಭುಗಿಲೆದ್ದ ರಾಜಕೀಯ ಸಂಘರ್ಷ, ಯೂನಸ್ ಸರ್ಕಾರಕ್ಕೆ ಭಾರೀ ಹಿನ್ನಡೆ
ಅಧಿಕಾರ ಶಾಶ್ವತವಲ್ಲ: ಸಿಎಂ ಬದಲಾವಣೆ ಬಗ್ಗೆ ಮೌನ ಮುರಿದ ಯತೀಂದ್ರ ! ಡಿಕೆಶಿ ಹೇಳಿಕೆಗೆ ನೀಡಿದ ಉತ್ತರವೇನು?