
ವಿಧಾನಸಭೆ (ಆ.20): ಮಹದಾಯಿ, ಕಳಸಾ-ಬಂಡೂರಿ ಯೋಜನೆಗಳ ಅನುಷ್ಠಾನ ಸಂಬಂಧ ಕಾನೂನಾತ್ಮಕ ತೊಡಕುಗಳನ್ನು ಶೀಘ್ರ ಪರಿಹರಿಸಿಕೊಂಡು ಕಾಮಗಾರಿಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ಇಡೀ ರಾಜ್ಯದ ಜನ ಪಕ್ಷ ಭೇದ ಮರೆತು ಹೋರಾಟ ಮಾಡಿದ್ದಾರೆ. ನ್ಯಾಯಾಲಯದ ತೀರ್ಪು ಬಂದಿದ್ದು, ನಮ್ಮ ರಾಜ್ಯದ ಪಾಲಿನ ನೀರು ಹಂಚಿಕೆ ಮಾಡಲಾಗಿದೆ.
ಕೇಂದ್ರ ಜಲ ಆಯೋಗ ಸಹ ನಮ್ಮ ಪಾಲಿನ ನೀರು ಬಳಸಲು ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿಜಯೋತ್ಸವ ಸಹ ಆಚರಿಸಲಾಗಿತ್ತು ಎಂದರು. ಈ ನಡುವೆ 2023ರಲ್ಲಿ ಗೋವಾದ ಅಧಿಕಾರಿ ಈ ಯೋಜನೆ ಪ್ರಶ್ನಿಸಿ ನಮ್ಮ ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡಿದ್ದಾನೆ. ನೋಟಿಸ್ ಕೊಡಲು ಆತ ಯಾರು? ಕೇಂದ್ರ ಸರ್ಕಾರ ಅಥವಾ ನ್ಯಾಯಾಲಯ ನೋಟಿಸ್ ನೀಡಬಹುದು. ಆದರೆ, ಆ ಅಧಿಕಾರಿ ನೋಟಿಸ್ ನೀಡಿದ್ದಾನೆ. ಸರ್ಕಾರಕ್ಕೆ ಯಾವುದೇ ವ್ಯಕ್ತಿ ನೋಟಿಸ್ ನೀಡಲು ಸಾಧ್ಯವೇ? ಈ ನೋಟಿಸ್‌ಗೆ ಮಾನ್ಯತೆ ನೀಡದೆ ಯೋಜನೆ ಮುಂದುವರೆಸಬೇಕಿತ್ತು.
ಅಂದು ನಾನು ಅಧಿಕಾರದಲ್ಲಿ ಇದ್ದಿದ್ದರೆ ಆ ನೋಟಿಸ್‌ಗೆ ಕ್ಯಾರೇ ಎನ್ನುತ್ತಿರಲಿಲ್ಲ. ಇದಾದ ಬಳಿಕ ನಮ್ಮ ರಾಜ್ಯದವರು ನ್ಯಾಯಾಲಯ ಮೆಟ್ಟಿಲೇರಿದ್ದಾರೆ ಎಂದು ಹೇಳಿದರು. ಈ ವಿಚಾರವಾಗಿ ನಾನು ನಾಲ್ಕು ಬಾರಿ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಅವರಿಗೆ ಯಾವ ರಾಜಕೀಯ ಒತ್ತಡ ಇದೆಯೋ ಗೊತ್ತಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನೂ ಮೂರು ಬಾರಿ ಭೇಟಿಯಾಗಿದ್ದೇನೆ. ಈ ತಿಂಗಳು ಬಂದು ಭೇಟಿಯಾಗುವಂತೆ ಸಮಯ ನೀಡಿದ್ದಾರೆ. ಕಳಸಾ-ಬಂಡೂರಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಮೀಸಲಾದ ಪ್ರತಿ ಹನಿ ನೀರನ್ನೂ ಬಳಸುವ ಹಕ್ಕಿದೆ. ನಾನು ಇಲಾಖೆ ಸಚಿವನಾದ ಬಳಿಕ ಟೆಂಡರ್ ಕರೆದು ಗುತ್ತಿಗೆ ಅಂತಿಮಗೊಳಿಸಿದ್ದೇನೆ. ಕಾನೂನು ವಿಚಾರಗಳನ್ನು ಅಧ್ಯಯನ ಮಾಡುತ್ತಿದ್ದೇನೆ.
ಈ ವಿಚಾರದಲ್ಲಿ ಕಾನೂನು ತೊಡಕುಗಳು ಇದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಹಿಂಪಡೆದು ನಾವು ಯೋಜನೆ ಪ್ರಾರಂಭಿಸಬಹುದು. ಈ ಸಂಬಂಧ ರಾಜ್ಯದ ಅಡ್ವೊಕೇಟ್ ಜನರಲ್ ಜತೆಗೆ ಚರ್ಚೆ ಮಾಡುತ್ತಿದ್ದೇನೆ ಎಂದರು. ಇನ್ನು ಇದು ನಮ್ಮ ರಾಜ್ಯದ ಹಿತವಾಗಿರುವುದರಿಂದ ವಿಳಂಬವಾದರೆ ನೀರು ಸುಮ್ಮನೆ ಹರಿದು ಹೋಗುತ್ತಿರುತ್ತದೆ. ಈ ವಿಚಾರದಲ್ಲಿ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡೋಣ. ಈ ವಿಚಾರವಾಗಿ ನಾನು ಪ್ರಧಾನಮಂತ್ರಿಗಳ ಗಮನವನ್ನೂ ಸೆಳೆದಿದ್ದೇನೆ. ಶೀಘ್ರದಲ್ಲೇ ನಾನು ದಿನಾಂಕ ನಿಗದಿ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ದೆಹಲಿಗೆ ಹೋಗಿ ಈ ಯೋಜನೆ ಜಾರಿಗೆ ಆಗ್ರಹ ಮಾಡೋಣ ಎಂದು ಶಿವಕುಮಾರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.