ರಾಜ್ಯದಲ್ಲಿ ಹೃದಯಾಘಾತ ಮರಣ ಪ್ರಮಾಣ ಹೆಚ್ಚಾಗಿಲ್ಲ: ಸಚಿವ ಶರಣ ಪ್ರಕಾಶ್ ಪಾಟೀಲ್‌

Published : Aug 19, 2025, 06:49 AM IST
Dr Sharan prakash patil

ಸಾರಾಂಶ

ರಾಜ್ಯದಲ್ಲಿ ಹೃದಯಾಘಾತದಿಂದ ಮರಣ ಹೊಂದಿದವರ ಪ್ರಮಾಣ ಗಣನೀಯ ಸಂಖ್ಯೆಯಲ್ಲಿ ಹೆಚ್ಚಾಗಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್‌ ತಿಳಿಸಿದರು.

ವಿಧಾನ ಪರಿಷತ್‌ (ಆ.19): ಕಳೆದ ಐದಾರು ವರ್ಷಗಳ ಅಂಕಿ-ಅಂಶಗಳನ್ನು ಹೋಲಿಸಿದರೆ ರಾಜ್ಯದಲ್ಲಿ ಹೃದಯಾಘಾತದಿಂದ ಮರಣ ಹೊಂದಿದವರ ಪ್ರಮಾಣ ಗಣನೀಯ ಸಂಖ್ಯೆಯಲ್ಲಿ ಹೆಚ್ಚಾಗಿಲ್ಲ. ಶೇ. 5ರಿಂದ 6 ರಷ್ಟು ಇದೆ. ಹಾಗಾಗಿ ಸಾರ್ವಜನಿಕರು ಗಾಬರಿಯಾಗಬೇಕಿಲ್ಲ. ಆದರೆ ಸಾರ್ವಜನಿಕರು ಮುಂಜಾಗ್ರತೆ ದೃಷ್ಟಿಯಿಂದ ತಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್‌ ತಿಳಿಸಿದರು.

ಕಾಂಗ್ರೆಸ್ಸಿನ ದಿನೇಶ್‌ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಹೆಚ್ಚುತ್ತಿರುವ ಹೃದ್ರೋಗ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ರಾಜ್ಯದ ವಿವಿಧ ಕಡೆಗಳಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಡಿ ಉಪಘಟಕಗಳ ಶಾಖೆಗಳನ್ನು ತೆರೆಯಲಾಗಿದೆ. ಹುಬ್ಬಳ್ಳಿ ಆಸ್ಪತ್ರೆ ಕಾಮಗಾರಿ ಶೇ.80 ರಷ್ಟು ಮುಗಿದಿದ್ದು, ಇನ್ನೆಂಟು ತಿಂಗಳಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಕೊಪ್ಪಳ, ಬಳ್ಳಾರಿಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ಉದ್ದೇಶಿಸಿದ್ದು, ಬಳ್ಳಾರಿ ಆಸ್ಪತ್ರೆ ಮೂರು ತಿಂಗಳಲ್ಲಿ ಉದ್ಘಾಟನೆಯಾಗಲಿದೆ, ಬೆಳಗಾವಿಯಲ್ಲಿ ಕ್ಯಾಥ್‌ ಲ್ಯಾಬ್‌ ಸೇವೆ ಆರಂಭಿಸಲಾಗುವುದು ಎಂದರು.

ಪ್ರತಿ ಜಿಲ್ಲೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ: ರಾಜ್ಯದಲ್ಲಿ ಐದು ವರ್ಷಗಳಲ್ಲಿ ಪ್ರತಿ ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು, ಒಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನರ್ ಚಿಕಿತ್ಸಾ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್‌ ಸ್ಥಾಪಿಸುವ ಉದ್ದೇಶ ಹೊಂದಿದ್ದು, ಹಂತ ಹಂತವಾಗಿ ಇವುಗಳನ್ನು ಜಾರಿಗೆ ತರಲಾಗುವುದು ಎಂದು ಸಚಿವರು ವಿವರಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ಎಐ ಬಳಕೆ ಅವಶ್ಯ: ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ರೋಗ ನಿರ್ಣಯ ತಂತ್ರಜ್ಞಾನ, ಡಿಜಿಟಲ್ ಆರೋಗ್ಯ, ಟೆಲಿಮೆಡಿಸಿನ್‌ಗಳು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ವೈದ್ಯಕೀಯ ಸೇವೆಗಳ ಕಾರ್ಯದಕ್ಷತೆ ಹೆಚ್ಚಲು, ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ ಮತ್ತು ಹೆಚ್ಚು ನಿಖರವಾಗಿ ಗುಣಮಟ್ಟದ ಸೇವೆ ಒದಗಿಸಲು ಆಧುನಿಕ ತಂತ್ರಜ್ಞಾನದ ಬಳಕೆ ಅವಶ್ಯಕವಾಗಿದೆ. ಲಭ್ಯವಿರುವ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಜೊತೆಗೆ ನಮ್ಮ ವ್ಯವಸ್ಥೆಗೆ ಪೂರಕವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಅಳವಡಿಸಿಕೊಳ್ಳಬೇಕು ಎಂದರು.

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ವಿವರಿಸಿರುವ ಜಾಗತಿಕ ಆದ್ಯತೆಗಳ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಜನರಿಗೆ ಉತ್ತಮ ಆರೋಗ್ಯ, ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಕೇವಲ ಗುರಿಗಳಲ್ಲ. ಅವು ಪ್ರತಿಯೊಬ್ಬ ನಾಗರಿಕನ ಗೌರವಯುತ ಜೀವನಕ್ಕೆ ನೀಡಬೇಕಾದ ಮೂಲಭೂತ ಹಕ್ಕುಗಳಾಗಿವೆ. ರಾಜೀವ್ ಗಾಂಧಿ ವಿವಿಯು ನಾವೀನ್ಯತೆಗಳನ್ನು ಅಳವಡಿಸಿಕೊಳ್ಳುವ ಜೊತೆಗೆ ಸಾರ್ವಜನಿಕರ ಅಗತ್ಯತೆಗಳನ್ನು ಪೂರೈಸುತ್ತಿದೆ ಎಂದು ಶರಣಪ್ರಕಾಶ್‌ ಪಾಟೀಲ್‌ ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ