ಹೋರಾಟ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಿಜೆಪಿ ನಾಯಕರು ಹಾಗೂ ಬೆಂಬಲಿಗರ ವಿರುದ್ಧ ದಾಖಲಾದ ಕೇಸ್ ವಾಪಸ್ ಪಡೆಯಲು ಆದೇಶಿಸಿದ್ದ ಸರ್ಕಾರಕ್ಕೆ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ.
ಬೆಂಗಳೂರು, (ಡಿ.21): ರಾಜ್ಯದ 62 ಬಿಜೆಪಿ ಶಾಸಕರು ಮತ್ತು ಸಚಿವರ ವಿರುದ್ಧದ ಪ್ರಕರಣಗಳನ್ನು ಕೈ ಬಿಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ 321ನೇ ಪ್ರಕರಣದ ಡಿ.321ರ ಅನ್ವಯ ಪ್ರಾಸಿಕ್ಯೂಷನ್ ಪ್ರಕರಣಗಳನ್ನು ಹಿಂಪಡೆಯಲು ಅನುಮತಿ ನೀಡಿದ್ದ ಯಡಿಯೂರಪ್ಪ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್, ಕರ್ನಾಟಕ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತ್ತು.
undefined
ಅರ್ಜಿ ವಿಚಾರಣೆ ನಡೆಸಿದ, ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಆಕ್ಷೇಪಣೆಗಳನ್ನು ಜನವರಿ 22, 2021ರೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, 2020ರ ಆಗಸ್ಟ್ 31ರ ಆದೇಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೇ ಮುಂದಿನ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿದೆ.
ಗಪ್ ಚುಪ್ ಇರುವಂತೆ ಬಿಜೆಪಿ ನಾಯಕರಿಗೆ ಸಿಎಂ ಬಿಎಸ್‌ವೈ ಖಡಕ್ ಸೂಚನೆ..!
ಹೋರಾಟ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಿಜೆಪಿ ನಾಯಕರು ಹಾಗೂ ಬೆಂಬಲಿಗರ ವಿರುದ್ಧ ದಾಖಲಾದ ಗಂಭೀರ ಸ್ವರೂಪದ ಪ್ರಕರಣಗಳನ್ನು ವಾಪಾಸು ಪಡೆಯಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ 31ರಂದು ಆದೇಶ ಹೊರಡಿಸಿದ್ದ ಸರ್ಕಾರ, 62 ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದಿತ್ತು.
ವೈಯಕ್ತಿಕ ಪ್ರಕರಣಗಳು ಹಾಗೂ ಗಂಭೀರ ಸ್ವರೂಪದ ಮೊಕದ್ದಮೆಗಳನ್ನು ರದ್ದು ಮಾಡಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡುವ ಮೂಲಕ, ತನ್ನ ಆದೇಶವನ್ನು ಸಮರ್ಥಿಸಿಕೊಂಡಿತ್ತು. ಇದರಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ, ರೇಣುಕಾಚಾರ್ಯ ಅವರ ಬೆಂಬಲಿಗರ ಕೇಸ್, ಸಚಿವ ಬಿ.ಸಿ.ಪಾಟೀಲ್ ಸೇರಿದಂತೆ ಅನೇಕ ನಾಯಕರು ಹಾಗೂ ಅವರ ಬೆಂಬಲಿಗರ ಕೇಸ್ಗಳು ಸೇರಿದ್ದವು. ಉಪ ಸಮಿತಿ ಅಧ್ಯಕ್ಷರಾಗಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಶಿಫಾರಸ್ಸಿನ ಮೇರೆಗೆ 2020ರ ಆಗಸ್ಟ್ 31ರಂದು ಯಡಿಯೂರಪ್ಪ ಸರಕಾರ ಕಾನೂನು, ಪ್ರವಾಸೋದ್ಯಮ, ಕೃಷಿ ಸಚಿವರು ಸೇರಿದಂತೆ ಹಲವು ಹಾಲಿ ಸಚಿವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿತ್ತು.
2017ರಂದು ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಪ್ರಯುಕ್ತ ಮೈಸೂರು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ 114 ನಿಷೇಧಾಜ್ಞೆ ಇದ್ದರೂ ಮೆರವಣಿಗೆ ನಡೆಸಲಾಗಿತ್ತು. ಈ ವೇಳೆ ಪ್ರತಾಪ್ ಸಿಂಹ ಬ್ಯಾರಿಕೇಡ್ ಮೇಲೆ ಕಾರನ್ನು ವೇಗವಾಗಿ ನುಗ್ಗಿಸಿದ ಆರೋಪಕ್ಕೊಳಗಾಗಿದ್ದರು. ಆದ್ದರಿಂದ ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.