ದೇಶದಲ್ಲೆಲ್ಲೂ ಕೈಗೊಳ್ಳದಷ್ಟು ಕಟ್ಟೆಚ್ಚರ ರಾಜ್ಯದಲ್ಲಿ| ಕೊರೋನಾ ವೈರಸ್ ಭೀತಿ ಹಿನ್ನೆಲೆ ಕಠಿಣ ಕ್ರಮ| 10-15 ದಿನದಲ್ಲಿ ಇನ್ನೂ ನಾಲ್ಕು ಕಡೆ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ| ರಾಜ್ಯದಲ್ಲಿ ಈಗಾಗಲೇ 87,066 ಜನರ ತಪಾಸಣೆ, 622 ಜನರ ಮೇಲೆ ನಿಗಾ| ಆತಂಕ ಪಡಬೇಕಿಲ್ಲ: ಸಚಿವ ಡಾ. ಸುಧಾಕರ್
ವಿಧಾನಸಭೆ[ಮಾ.10]: ಕೊರೋನಾ ವೈರಸ್ ಸೋಂಕನ್ನು ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ. ರಾಜ್ಯದಲ್ಲೂ ಸಾರ್ವಜನಿಕ ಆರೋಗ್ಯದ ತುರ್ತು ಪರಿಸ್ಥಿತಿ ಎಂದೇ ಪರಿಗಣಿಸಿ ಯಾವ ರಾಜ್ಯದಲ್ಲೂ ಕೈಗೊಳ್ಳದ ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ. ಮುಂದಿನ 10-15 ದಿನಗಳಲ್ಲಿ ರಾಜ್ಯದಲ್ಲಿ ನಾಲ್ಕು ಕೊರೋನಾ ಪ್ರಯೋಗಾಲಯ ಸ್ಥಾಪಿಸುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
undefined
ಸೋಮವಾರ ವಿಧಾನಸಭೆಯಲ್ಲಿ ಕೊರೋನಾ ಬಗ್ಗೆ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿಧಾನಸಭೆಗೆ ಹೇಳಿಕೆ ನೀಡಿದ ಅವರು, ಕೊರೋನಾ ಬಗ್ಗೆ ಈಗಾಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು ರಾಜ್ಯಾದ್ಯಂತ 3 ಸಾವಿರ ಪ್ರತ್ಯೇಕ ಹಾಸಿಗೆಗಳು ಮೀಸಲಿಡಲಾಗಿದೆ. ಬೆಂಗಳೂರು ಹಾಗೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವ ಎಲ್ಲಾ ವಿದೇಶಿ ಪ್ರಯಾಣಿಕರನ್ನು ದಿನದ 24 ಗಂಟೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಈವರೆಗೆ 87,066 ಮಂದಿಗೆ ಪರಿಶೀಲನೆ ನಡೆಸಿದ್ದು, ಬಾಧಿತ ಪ್ರದೇಶಗಳಿಂದ ಬಂದ 622 ಮಂದಿಗೆ ಪ್ರತ್ಯೇಕವಾಗಿಟ್ಟು ನಿಗಾ ವಹಿಸಲಾಗಿದೆ.
ಕೊರೋನಾ ಪರೀಕ್ಷೆಗೆ ಪ್ರಯೋಗಾಲಯದ ಕೊರತೆ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಜತೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕೊರೋನಾ ಪ್ರಯೋಗಾಲಯ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಹತ್ತು ದಿನದಲ್ಲಿ ಹಾಸನ, ಮೈಸೂರು, ಶಿವಮೊಗ್ಗ, ಬೆಳಗಾವಿಯಲ್ಲೂ ಪ್ರತ್ಯೇಕ ಪ್ರಯೋಗಾಲಯ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಕೊರೋನಾ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಅನುದಾನದ ಕೊರತೆ ಇಲ್ಲ. ರೋಗ ಹರಡದಂತೆ ಎಚ್ಚರವಹಿಸಿ ಎಷ್ಟುಅನುದಾನವಾದರೂ ನೀಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ಆತಂಕ ಬೇಕಿಲ್ಲ, ಎಚ್ಚರ ಅತ್ಯಗತ್ಯ:
ಕೊರೋನಾ ಹಿನ್ನೆಲೆಯಲ್ಲಿ ಆತಂಕದಿಂದ ಎಲ್ಲರೂ ಎನ್-95 ಮಾಸ್ಕ್ ಖರೀದಿಗೆ ಮುಂದಾಗಿದ್ದಾರೆ. ವೈರಾಣು ಸೋಂಕು ತಗುಲಿರುವವರು ಹಾಗೂ ಅವರನ್ನು ಉಪಚರಿಸುವ ಆಸ್ಪತ್ರೆ ಸಿಬ್ಬಂದಿಗೆ ಮಾತ್ರ ಎನ್-95 ಮಾಸ್ಕ್ ಅಗತ್ಯವಿದೆ. ಈ ಮಾಸ್ಕ್‌ಗಳು ಮುಂದಿನ ಆರು ತಿಂಗಳಿಗೆ ಅಗತ್ಯವಿರುವಷ್ಟುಈಗಾಗಲೇ ಸಂಗ್ರಹಿಸಿದ್ದೇವೆ. ಸೋಂಕು ಬಾರದಂತೆ ತಡೆಯಲು ಏನೇನು ಮಾಡಬೇಕು ಎಂಬ ಬಗ್ಗೆ ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದೆ.
ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ಮಾಡಿದ್ದಾರೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲೂ ಎಲ್ಲಾ ರೀತಿಯ ಮಾಹಿತಿ ಒದಗಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಶಂಕಿತರನ್ನು 14 ದಿನ ಪ್ರತ್ಯೇಕವಾಗಿಟ್ಟು ನಿಗಾ ವಹಿಸಲು ಹೇಳಿತ್ತು. ರಾಜ್ಯದಲ್ಲಿ 28 ದಿನಗಳ ಕಾಲ ಪ್ರತ್ಯೇಕವಾಗಿಟ್ಟು ನಿಗಾ ವಹಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲದೆ ಕಮಾಂಡೋ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಲ್ಲೂ ವ್ಯವಸ್ಥೆ ಮಾಡಿದ್ದೇವೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದವರ ಬಗ್ಗೆ ಮುನ್ನೆಚ್ಚರಿಕಾ ಕ್ರಮವಾಗಿ ದೇವನಹಳ್ಳಿಯಲ್ಲಿ 150 ಹಾಸಿಗೆ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕೈಕುಲಕಬೇಡಿ, ನಮಸ್ಕಾರ ಮಾಡಿ
ಕೊರೋನಾ ಸೋಂಕು ವೈರಸ್ ಕೈಯಲ್ಲಿರುವ ಬೆವರಿನಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇದೆ. ಹೀಗಾಗಿ ಹ್ಯಾಂಡ್‌ಶೇಕ್ ಮಾಡುವ ಬದಲು ನಮಸ್ಕಾರ ಮಾಡಿದರೆ ಉತ್ತಮ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನಾವೂ ಸಹ ನಮಸ್ಕಾರ ಮಾಡುವುದು ಹಾಗೂ ಅತಿ ಹೆಚ್ಚು ಜನ ಸೇರುವುದನ್ನು ತಪ್ಪಿಸಬೇಕಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದರು.