ಕೃಷ್ಣಾ ಮೇಲ್ದಂಡೆಗೆ ನೀವು ಹಣ ನೀಡಲಿಲ್ಲ, ಈಗ ಕೇಳ್ತಿದ್ದೀರಾ?: ಬಿಎಸ್‌ವೈ ತಿರುಗೇಟು

By Kannadaprabha News  |  First Published Mar 10, 2020, 8:35 AM IST

ಕೃಷ್ಣಾ ಮೇಲ್ದಂಡೆಗೆ ನೀವು ಹಣ ನೀಡದೆ ಈಗ ಕೇಳ್ತಿದ್ದೀರಾ: ಸಿಎಂ| ಕಾಂಗ್ರೆಸ್‌, ಜೆಡಿಎಸ್‌ಗೆ ತಿರುಗೇಟು ನೀಡಿದ ಯಡಿಯೂರಪ್ಪ| ಆರೂವರೆ ವರ್ಷ ಸಿಎಂ ಆಗಿದ್ದ ಸಿದ್ದು, ಎಚ್‌ಡಿಕೆ ಹಣ ನೀಡಿಲ್ಲ


ಬೆಂಗಳೂರು[ಮಾ.10]: ರಾಜ್ಯದಲ್ಲಿ ಕಳೆದ ಆರೂವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸರ್ಕಾರಗಳು ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ಅನುದಾನ ಮೀಸಲಿಡದೇ ಈಗ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಯೋಜನೆಗೆ ಹಣ ನೀಡುವಂತೆ ಸಲಹೆಗಳನ್ನು ನೀಡುತ್ತಿವೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ, ನಂತರ ಕುಮಾರಸ್ವಾಮಿ ನೇತೃತ್ವದಲ್ಲಿ ಒಂದೂವರೆ ವರ್ಷ ಕಾಲ ರಾಜ್ಯದಲ್ಲಿ ಅಧಿಕಾರ ನಡೆಸಿದ್ದಾರೆ. ಆದರೆ, ಈ ಅವಧಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಅನುದಾನ ಮೀಸಲಿಡಲಿಲ್ಲ. ಇದೀಗ ಅನುದಾನ ನೀಡುವಂತೆ ಸಲಹೆ ನೀಡುತ್ತಿರುವುದಕ್ಕೆ ಏನೆಂದು ಉತ್ತರಿಸಬೇಕು ಎಂದರು.

Latest Videos

undefined

10 ಸಾವಿರ ಕೋಟಿ ನಿಗದಿ:

ಕೃಷ್ಣಾ ಮೇಲ್ದಂಡೆಯ ಮೂರನೇ ಹಂತದ ಕಾಮಗಾರಿಗೆ ಪ್ರಸಕ್ತ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿರಲಿಲ್ಲ. ಆದರೂ, ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ 10 ಸಾವಿರ ಕೋಟಿ ರು.ಗಳನ್ನು ಮೀಸಲಿಡಲಾಗಿದೆ. ಅಲ್ಲದೆ, ಹಂತ ಹಂತವಾಗಿ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು 20 ಹಳ್ಳಿಗಳನ್ನು ಸ್ಥಳಾಂತರ ಮಾಡಬೇಕಾಗಿದ್ದು, ಇದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದರು.

ರಾಜ್ಯದ ರೈತರ ಸರ್ವೋತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್‌ನಲ್ಲಿ ನೀರಾವರಿ ಮತ್ತು ಕೃಷಿಗೆ ಆದ್ಯತೆ ನೀಡಲಾಗಿದೆ. ಅಲ್ಲದೇ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಯಡಿಯೂರಪ್ಪ ವಿವರಿಸಿದರು.

ಇದೇ ವೇಳೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ಸರ್ಕಾರ ಕೈಗೊಂಡ ವಿವಿಧ ಪರಿಹಾರಗಳ ಬಗ್ಗೆ ಅಂಕಿ-ಅಂಶಗಳ ಸಹಿತ ವಿವರಿಸಿದರು.

click me!