Karnataka Government Formation: ಮಂಕಾಳ ವೈದ್ಯಗೆ ಸಚಿವ ಸ್ಥಾನ ನೀಡಲು ಆಗ್ರಹ

By Kannadaprabha News  |  First Published May 20, 2023, 5:08 AM IST

ಬಿಜೆಪಿಯ ಭದ್ರ ನೆಲೆಯಾಗಿದ್ದ ಭಟ್ಕಳದಲ್ಲಿ ಅತ್ಯಂತ ಜಾಣ್ಮೆಯಿಂದ ಪಕ್ಷ ಸಂಘಟಿಸುವುದರ ಜತೆಗೆ ಪಕ್ಷಾತೀತವಾಗಿ ಬೆಂಬಲ ಗಳಿಸಿ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಅಂತರದಿಂದ ಗೆದ್ದು ದಾಖಲೆ ಬರೆದ ಮಂಕಾಳ ವೈದ್ಯರನ್ನು ಸಚಿವರನ್ನಾಗಿ ಮಾಡುವಂತೆ ತಾಲೂಕಿನ ವಿವಿಧ ಸಂಘಟನೆಗಳ ಪ್ರಮುಖರಿಂದ ಒತ್ತಾಯ ಕೇಳಿ ಬಂದಿದೆ.


ಹೊನ್ನಾವರ (ಮೇ.20) : ಬಿಜೆಪಿಯ ಭದ್ರ ನೆಲೆಯಾಗಿದ್ದ ಭಟ್ಕಳದಲ್ಲಿ ಅತ್ಯಂತ ಜಾಣ್ಮೆಯಿಂದ ಪಕ್ಷ ಸಂಘಟಿಸುವುದರ ಜತೆಗೆ ಪಕ್ಷಾತೀತವಾಗಿ ಬೆಂಬಲ ಗಳಿಸಿ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಅಂತರದಿಂದ ಗೆದ್ದು ದಾಖಲೆ ಬರೆದ ಮಂಕಾಳ ವೈದ್ಯರನ್ನು ಸಚಿವರನ್ನಾಗಿ ಮಾಡುವಂತೆ ತಾಲೂಕಿನ ವಿವಿಧ ಸಂಘಟನೆಗಳ ಪ್ರಮುಖರಿಂದ ಒತ್ತಾಯ ಕೇಳಿ ಬಂದಿದೆ.

ಕರುನಾಡ ವಿಜಯಸೇನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಒತ್ತಾಯಿಸಿ, ಕಳೆದ ಚುನಾವಣೆಯಲ್ಲಿ ನೆಲೆ ಕಳೆದುಕೊಂಡಿದ್ದ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಜೊತೆಗೆ ಎಲ್ಲ ವರ್ಗದ ಜನರನ್ನು ಗೌರವದಿಂದ ಕಾಣುವ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಮಂಕಾಳ ವೈದ್ಯರಂತಹ ಕ್ರಿಯಾಶೀಲ ವ್ಯಕ್ತಿತ್ವದವರು ಸಚಿವರಾದರೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಬಲ ನೀಡಿದಂತಾಗುತ್ತದೆ ಎಂದರು.

Tap to resize

Latest Videos

 

Karnataka election 2023: ಜನತೆಯ ಮುಂದೆ ಬಿಜೆಪಿ ಅಸಲಿ ಬಣ್ಣ ಬಯಲು ಮಾಡುತ್ತೇವೆ: ಶಾಸಕ ಮಂಕಾಳ ವೈದ್ಯ

ಮೀನುಗಾರ ಕುಟುಂಬದಿಂದ ಬಂದವರಾಗಿದ್ದು, ಕಡಲ ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಮೀನುಗಾರರ ಪ್ರತಿಯೊಂದು ಸಮಸ್ಯೆಯ ಅರಿವಿರುವ ಕಾರಣ ಸಚಿವ ಸ್ಥಾನಕ್ಕೆ ನ್ಯಾಯ ಒದಗಿಸುವ ವಿಶ್ವಾಸವಿದೆ. ಮೀನುಗಾರಿಕೆ ಸಚಿವಸ್ಥಾನ ಸಿಗದಿದ್ದರೆ ಪ್ರವಾಸೋದ್ಯಮ ಖಾತೆ ನೀಡಿದರೂ ದಕ್ಷವಾಗಿ ನಿಭಾಯಿಸಲಿದ್ದಾರೆ ಎಂದರು.

ಜಿಲ್ಲೆಯ ಬಹುದಿನದ ಬೇಡಿಕೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಬಗ್ಗೆಯೂ ಅಪಾರ ಕಾಳಜಿ ಹೊಂದಿರುವ ವೈದ್ಯರಂತಹವರು ಸಚಿವರಾದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿದೆ. ಹಾಗಾಗಿ ಈ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುಬೇಕು ಎಂದು ಒತ್ತಾಯಿಸಿದ್ದಾರೆ.

ಕರಾವಳಿ ಮೀನುಗಾರ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ರಾಜು ತಾಂಡೇಲ ಟೊಂಕಾ, ಜಿಲ್ಲೆಯಿಂದ ಮೀನುಗಾರ ಜನಾಂಗಕ್ಕೆ ಸಚಿವ ಸಂಪುಟದಲ್ಲಿ ಈವರೆಗೆ ಪ್ರಾತಿನಿಧ್ಯ ಲಭ್ಯವಾಗದೇ ಇರುವ ಹಿನ್ನೆಲೆಯಲ್ಲಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಮಂಕಾಳು ವೈದ್ಯರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಬಂದರು ಮತ್ತು ಮೀನುಗಾರಿಕಾ ಖಾತೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮೀನುಗಾರರಲ್ಲದವರು ಹೆಚ್ಚು ಅವಧಿಗೆ ಮೀನುಗಾರಿಕೆ ಸಚಿವರಾಗಿದ್ದರಿಂದ ಕಾಸರಕೋಡ ಟೊಂಕ ಮೀನುಗಾರಿಕಾ ಬಂದರಿನ ಬಹುದೊಡ್ಡ ಸಮಸ್ಯೆಯಾದ ಅಳಿವೆ ಸಮಸ್ಯೆಯೂ ಜ್ವಲಂತವಾಗಿ ಉಳಿದಿದ್ದು ಈ ಸಂಬಂಧ ಅನೇಕ ಶಾಸಕ, ಸಚಿವರಲ್ಲಿ ಕೇಳಿಕೊಂಡರೂ ಹೋರಾಟ ನಡೆಸಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಕರಾವಳಿ ತೀರಗಳ ಮೀನುಗಾರರ ಬದುಕು ಇಂದು ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತ ಹಾಗೂ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಿದ ಈ ಭಾಗದ ಮೀನುಗಾರ ಜನಾಂಗದ ಶಾಸಕ ಮಂಕಾಳ ವೈದ್ಯಗೆ ಮೀನುಗಾರಿಕಾ ಸಚಿವ ಸ್ಥಾನ ನೀಡಬೇಕು ಎನ್ನುವುದು ಮೀನುಗಾರ ಕಾರ್ಮಿಕರ ಹಕ್ಕೊತ್ತಾಯ ಎಂದಿದ್ದಾರೆ.

ಇಂದು ಸಿದ್ದರಾಮಯ್ಯ ಸರ್ಕಾರ ಪ್ರಮಾಣವಚನ: ಡಿಸಿಎಂ ಆಗಿ ಡಿಕೆಶಿ ಶಪಥ

ಮೀನುಗಾರಿಕೆ ಸಹಿತ ಈ ಭಾಗದ ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆಗಳನ್ನು ಬಗೆಹರಿಸಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಪಡಿಸಿ ಜಿಲ್ಲೆಯಲ್ಲಿ ಹೆಚ್ಚಿರುವ ನಿರುದ್ಯೋಗ ಸಮಸ್ಯೆ ಬಗೆಹರಿಸಲು ವೈದ್ಯ ಸೂಕ್ತ ವ್ಯಕ್ತಿ ಅವರಿಗೆ ಸಚಿವ ಸ್ಥಾನ ನೀಡಿ ಎಂದು ಕರವೇ ತಾಲೂಕಾಧ್ಯಕ್ಷ ಮಂಜುನಾಥ ಗೌಡ ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರನ್ನು ಆಗ್ರಹಿಸಿದ್ದಾರೆ.

click me!