ಜನರ ಆಶೋತ್ತರಕ್ಕೆ ಸ್ಪಂದಿಸದ ಅಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ: ಸಿಎಂ ಸಿದ್ದರಾಮಯ್ಯ

By Kannadaprabha News  |  First Published Jun 6, 2023, 2:40 AM IST

ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಜಡ್ಡುಗಟ್ಟಿದ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸವನ್ನು ಜಿಲ್ಲಾಮಟ್ಟದ ಅಧಿಕಾರಿಗಳು ಪರಿಣಾಮಕಾರಿಯಾಗಿ ಮಾಡಬೇಕು. ಜನರ ಆಶೋತ್ತರಕ್ಕೆ ಸ್ಪಂದಿಸದ ಅಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ. 


ದಾವಣಗೆರೆ (ಜೂ.06): ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಜಡ್ಡುಗಟ್ಟಿದ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸವನ್ನು ಜಿಲ್ಲಾಮಟ್ಟದ ಅಧಿಕಾರಿಗಳು ಪರಿಣಾಮಕಾರಿಯಾಗಿ ಮಾಡಬೇಕು. ಜನರ ಆಶೋತ್ತರಕ್ಕೆ ಸ್ಪಂದಿಸದ ಅಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಜನಸ್ನೇಹಿ ಆಡಳಿತ ಜಿಲ್ಲಾಮಟ್ಟದಿಂದಲೇ ಆಗಬೇಕು. ಜನಪ್ರತಿನಿಧಿಗಳು ಯಾವುದೇ ಸಮಸ್ಯೆ ಬಗ್ಗೆ ನಿಮ್ಮ ಗಮನಕ್ಕೆ ತಂದಾಗ ತಕ್ಷಣ ಸ್ಪಂದಿಸಬೇಕು. ಜನರು ಸರ್ಕಾರಿ ಕಚೇರಿಗಳಿಗೆ ಬಂದಾಗ ಅಧಿಕಾರಿಗಳು, ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸಬೇಕು. ಜನರ ಆಶೋತ್ತರಕ್ಕೆ ಸ್ಪಂದಿಸದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.

Tap to resize

Latest Videos

ಪ್ರಕೃತಿ ನಡುವಿನ ಸಂಘರ್ಷದಲ್ಲಿ ನಾವು ಸೋತರೆ ಬದುಕುತ್ತೇವೆ: ರಿಷಬ್‌ ಶೆಟ್ಟಿ

ಬಳಿಕ, ನಗರದ ಬಾಪೂಜಿ ಎಂಬಿಎ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಕಾಲಿಕ ಮಳೆಯಿಂದಾಗಿ ರಾಜ್ಯಾದ್ಯಂತ ಸುಮಾರು 20 ಸಾವಿರ ಹೆಕ್ಟೇರ್‌ ಬೆಳೆ ನಷ್ಟಸಂಭವಿಸಿದ ಬಗ್ಗೆ ವರದಿ ಬಂದಿದೆ. ತಕ್ಷಣವೇ ಸಮೀಕ್ಷೆ ಕೈಗೊಂಡು, ಸರ್ಕಾರದ ನಿಯಮಾನುಸಾರ ಪರಿಹಾರ ನೀಡುತ್ತೇವೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಪೂರೈಕೆಯಲ್ಲಿ ಯಾವುದೇ ಲೋಪವಾಗದಂತೆ, ವಿಳಂಬವಾಗದಂತೆ ಹಾಗೂ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ವೀಡಿಯೋ ಸಂವಾದ ನಡೆಸಿ, ಸೂಚನೆ ನೀಡಿದ್ದೇವೆ ಎಂದು ಹೇಳಿದರು.

ದಾವಣಗೆರೆಯಲ್ಲಿ ನನ್ನ 75ನೇ ವರ್ಷದ ಜನ್ಮದಿನವನ್ನು ಆಚರಿಸಲಾಗಿತ್ತು. ಇದೀಗ ಮುಖ್ಯಮಂತ್ರಿಯಾಗಿ ಇದೇ ದಾವಣಗೆರೆಯೊಂದಿಗೆ ಅಧಿಕೃತವಾಗಿ ಹೊರ ಜಿಲ್ಲೆಗೆ ಭೇಟಿ ನೀಡುತ್ತಿದ್ದೇನೆ ಎಂದರು. ಇದಕ್ಕೂ ಮೊದಲು, ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಸಿದ್ದರಾಮಯ್ಯಗೆ ಪೊಲೀಸ್‌ ಇಲಾಖೆಯಿಂದ ಗೌರವ ರಕ್ಷೆ ನೀಡಲಾಯಿತು.

ಇಂದಿರಾ ಕ್ಯಾಂಟೀನ್‌ ನೌಕರರಿಗೆ ಸ್ಪಂದನೆ: ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ. ದಾವಣಗೆರೆ ಸೇರಿ ರಾಜ್ಯದ ವಿವಿಧೆಡೆ ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವವರಿಗೆ ಸರಿಯಾಗಿ ವೇತನ ಸಿಗುತ್ತಿಲ್ಲವೆಂಬ ದೂರು ಕೇಳಿ ಬರುತ್ತಿದೆ. ಯಾವ್ಯಾವ ಜಿಲ್ಲೆ, ಊರುಗಳಲ್ಲಿ ಇಂದಿರಾ ಕ್ಯಾಂಟೀನ್‌ ನೌಕರರ ವೇತನ ತಡೆ ಹಿಡಿದಿದ್ದಾರೆ, ಎಲ್ಲೆಲ್ಲಿ ಸಮಸ್ಯೆ ಇದೆ ಅದನ್ನೆಲ್ಲಾ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.

ವಿದ್ಯುತ್‌ ದರ ನಾವು ಹೆಚ್ಚಿಸಿದ್ದಲ್ಲ: ರಾಜ್ಯದಲ್ಲಿ ವಿದ್ಯುತ್‌ ದರವನ್ನು ನಾವು ಏರಿಕೆ ಮಾಡಿಲ್ಲ. ಕೆಆರ್‌ಇಸಿ ಹಿಂದೆಯೇ ವಿದ್ಯುತ್‌ ದರ ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದು, ಅದು ಹಿಂದಿನ ಸರ್ಕಾರದ ಅವಧಿಯಲ್ಲೇ ಆಗಿದೆ. ನಾವಂತೂ ವಿದ್ಯುತ್‌ ದರ ಏರಿಕೆ ಮಾಡಿಲ್ಲ. ನಮ್ಮ ಸರ್ಕಾರ ಬರುವ ಮುಂಚೆಯೇ ಕೆಆರ್‌ಇಸಿ ಪ್ರಕಾರ ಹಿಂದಿನ ಸರ್ಕಾರ ವಿದ್ಯುತ್‌ ದರ ಪರಿಷ್ಕರಣೆ ಮಾಡಿದೆ ಎಂದರು.

ಎಸ್ಸೆಸ್ಸೆಂಗೆ ಜಿಲ್ಲಾ ಉಸ್ತುವಾರಿ: ನಾನು ಮುಖ್ಯಮಂತ್ರಿ ಆದ ನಂತರ ಇದೇ ಮೊದಲ ಬಾರಿಗೆ ಪ್ರಥಮ ಜಿಲ್ಲೆಯಾಗಿ ದಾವಣಗೆರೆಗೆ ಬಂದು, ಇಲ್ಲಿಯೇ ಸಭೆ ನಡೆಸುತ್ತಿದ್ದೇನೆ. ಖಾಸಗಿ ಕಾರ್ಯಕ್ರಮಕ್ಕೆಂದು ಇಲ್ಲಿಗೆ ಬಂದಿದ್ದು, ಸುದೀರ್ಘವಾಗಿ ಪರಿಶೀಲನಾ ಸಭೆ ಮಾಡುವುದಿಲ್ಲ. ಎಸ್ಸೆಸ್‌ ಮಲ್ಲಿಕಾರ್ಜುನ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುತ್ತಾರೆ. ಕೆಡಿಪಿ ಸಭೆಯಲ್ಲಿ ಸುದೀರ್ಘ ಸಭೆ ಮಾಡುತ್ತಾರೆ ಎಂದರು.

‘ಆರ್‌ ಯೂ ಎಸ್ಪಿ’ ಅಂತಾ ಗರಂ ಆದ ಸಿಎಂ: ದಾವಣಗೆರೆ ಜಿಪಂ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿದ್ದರಾಮಯ್ಯ, ಸಭೆ ಮುಗಿಸುತ್ತಿದ್ದಂತೆಯೇ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಡಾ.ಕೆ.ಅರುಣ್‌ ಅವರು ಮುಖ್ಯಮಂತ್ರಿಯವರು ಹೊರಡಲು ಸಿದ್ಧತೆ ನೋಡಿಕೊಳ್ಳಲು ಸಿದ್ದರಾಮಯ್ಯನವರಿಗಿಂತ ಮುಂಚೆಯೇ ಎದ್ದು ನಿಂತರು. ಅದನ್ನು ಗಮನಿಸಿದ ಸಿದ್ದರಾಮಯ್ಯ, ‘ಹೇ ನೀವು ನನಗಿಂತ ಮೊದಲೇ ಎದ್ದು ನಿಲ್ಲುತ್ತೀರೇನ್ರಿ?. ಆರ್‌ ಯು ಎಸ್ಪಿ’ ಎಂಬುದಾಗಿ ಗರಂ ಆದರು. ಜಿಲ್ಲೆಯಲ್ಲಿ ಕಾನೂನು, ಸುವ್ಯವಸ್ಥೆ ಹದಗೆಡದಂತೆ ಎಚ್ಚರ ವಹಿಸಿ ಎಂಬುದಾಗಿ ಸೂಚಿಸಿ, ಸಭಾಂಗಣದಿಂದ ಹೊರ ನಡೆದರು.

ಸಂವಿಧಾನದ ಪ್ರಕಾರ ಕೆಲಸ ಮಾಡದಿದ್ದರೆ ಬಾರುಕೋಲಿನಿಂದ ಬಾರಿಸುತ್ತೇನೆ: ಸಚಿವ ಮಹದೇವಪ್ಪ

ಜು.7ಕ್ಕೆ ರಾಜ್ಯ ಬಜೆಟ್‌: ಜುಲೈ 3ರಿಂದ ರಾಜ್ಯ ವಿಧಾನಮಂಡಲದ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಜುಲೈ 7ರಂದು ರಾಜ್ಯ ಬಜೆಟ್‌ ಮಂಡನೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಚುನಾವಣಾ ಪೂರ್ವದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಬಜೆಟ್‌ನಲ್ಲಿ ಜಾರಿಗೊಳಿಸಲಿದ್ದೇವೆ. ಬಜೆಟ್‌ ಹಿನ್ನೆಲೆಯಲ್ಲಿ ಇದೇ ಶುಕ್ರವಾರದಿಂದ (ಜೂನ್‌ 9) ವಿವಿಧ ಹಂತದ ಸಭೆಗಳು ಆರಂಭವಾಗಲಿವೆ. ಕ್ಯಾಬಿನೆಟ್‌ನಲ್ಲಿ ಚರ್ಚಿಸಿ, ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಸಭೆಗಳನ್ನು ನಡೆಸಲಿದ್ದೇವೆ ಎಂದರು. ಬಜೆಟ್‌ ಗಾತ್ರ ಕುರಿತ ಸುದ್ದಿಗಾರರ ಪ್ರಶ್ನೆಗೆ, ಹಿಂದಿನ ಬಿಜೆಪಿ ಸರ್ಕಾರದ ಬಜೆಟ್‌ ಚುನಾವಣೆ ಬಜೆಟ್‌ ಆಗಿತ್ತು. ನಾವು ಬಜೆಟ್‌ ಪೂರ್ವಭಾವಿ ಸಭೆಗಳನ್ನು ನಡೆಸಿ, ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸುತ್ತೇವೆ. ಬಜೆಟ್‌ ಗಾತ್ರ ಆನಂತರವೇ ನಿರ್ಧಾರವಾಗುತ್ತದೆ ಎಂದರು.

click me!