ಕರ್ನಾಟಕಕ್ಕೆ ಮೋದಿಗಿಂತ ಮನಮೋಹನ್‌ ಸಿಂಗ್‌ರಿಂದ ಹೆಚ್ಚು ಅನುದಾನ: ಸಿದ್ದರಾಮಯ್ಯ

By Kannadaprabha NewsFirst Published Feb 28, 2023, 10:58 AM IST
Highlights

ಕರ್ನಾಟಕದಲ್ಲಿ ಈರುಳ್ಳಿ, ಅರಿಶಿನ, ತೆಂಗು, ಅಡಿಕೆ, ಮೆಣಸು, ತೊಗರಿ, ಭತ್ತ, ರಾಗಿ, ಜೋಳ ಮತ್ತಿತರ ಬೆಳೆ ಬೆಳೆಯುವ ರೈತರು ಬೆಲೆಯಿಲ್ಲದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣ ಸೂಕ್ತ ಪರಿಹಾರದ ಪ್ಯಾಕೇಜ್‌ ಘೋಷಿಸಬೇಕು: ಸಿದ್ದರಾಮಯ್ಯ 

ಬೆಂಗಳೂರು(ಫೆ.28): ‘ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರಕ್ಕಿಂತ ನಾವು ಕರ್ನಾಟಕಕ್ಕೆ ಹೆಚ್ಚು ಅನುದಾನ ನೀಡಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿದ್ದು ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಬಗ್ಗೆ ಅಂಕಿ-ಅಂಶಗಳ ಸಮೇತ ಹೇಳಿಕೆ ನೀಡಿರುವ ಅವರು, 2005 ರಿಂದ 2014 ರವರೆಗೆ ಕೇಂದ್ರದ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಕರ್ನಾಟಕದಲ್ಲಿ 2334 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿತ್ತು. ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2014 ರಿಂದ 2022 ರವರೆಗೆ ಕೇವಲ 1479 ಕಿ.ಮೀ. ಮಾತ್ರ ನಿರ್ಮಿಸಿದೆ. ಆದರೆ ಗುಜರಾತ್‌ನಲ್ಲಿ 3191 ಕಿ.ಮೀ., ಉತ್ತರ ಪ್ರದೇಶದಲ್ಲಿ 4259, ಮಹಾರಾಷ್ಟ್ರದಲ್ಲಿ 12069 ಕಿ.ಮೀ. ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಇಷ್ಟುಅನ್ಯಾಯ ಮಾಡಿದ್ದರೂ ಕರ್ನಾಟಕಕ್ಕೆ ಕಿರೀಟ ತೊಡಿಸಿದ್ದೇವೆ ಎಂದು ಸುಳ್ಳು ಹೇಳುವುದು ನಿಮ್ಮ ಹುದ್ದೆಗೆ ಶೋಭೆ ತರುವುದೇ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿದ್ದು ಬಿಎಸ್‌ವೈ: ಅನ್ನ ಹಳಸಿತ್ತು; ನಾಯಿ ಕಾದಿತ್ತು ಎಂದ ಸಿದ್ದರಾಮಯ್ಯ

ಯುಪಿಎ ಸರ್ಕಾರ ರಾಜ್ಯದಲ್ಲಿ 301 ಕಿ.ಮೀ. ರೈಲ್ವೆ ಮಾರ್ಗ ನಿರ್ಮಿಸಿದ್ದರೆ, ಮೋದಿ ಸರ್ಕಾರ 291 ಕಿ.ಮೀ. ಮಾತ್ರ ನಿರ್ಮಿಸಿದೆ. 1.3 ಲಕ್ಷ ಕೋಟಿ ರು. ಜಿಎಸ್‌ಟಿ ಮತ್ತು ನೇರ ತೆರಿಗೆ ಸಂಗ್ರಹಿಸುವ ಉತ್ತರ ಪ್ರದೇಶಕ್ಕೆ 1.83 ಲಕ್ಷ ಕೋಟಿ ರು. ತೆರಿಗೆ ಪಾಲು ಕೊಡಲಾಗುತ್ತಿದೆ. 3.72 ಲಕ್ಷ ಕೋಟಿ ತೆರಿಗೆ ಪಾವತಿಸುವ ಕರ್ನಾಟಕಕ್ಕೆ ಕೇವಲ 37 ಸಾವಿರ ಕೋಟಿ ರು. ಪಾಲು ಕೊಡುತ್ತೇವೆ ಎನ್ನುತ್ತೀರಿ. ಹಸು ಹಾಲು ಕೊಡುತ್ತದೆಂದು ಕೆಚ್ಚಲು ಕೊಯ್ದು ರಕ್ತ ಹೀರುವ ರಾಕ್ಷಸ ಕೆಲಸವನ್ನು ಕರ್ನಾಟಕದ ಕುರಿತು ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ತೆರಿಗೆ-ಅನುದಾನಕ್ಕೂ ಸಂಬಂಧವೇ ಇಲ್ಲ

ಕೇಂದ್ರ ಸರ್ಕಾರ ನಮ್ಮಿಂದ ದೋಚುವ ತೆರಿಗೆ, ಮೇಲ್ತೆರಿಗೆಗಳಿಗೂ ಮತ್ತು ನಮಗೆ ಹಂಚಿಕೆ ಮಾಡುತ್ತಿರುವ ಅನುದಾನಗಳಿಗೂ ಸಂಬಂಧವೇ ಇಲ್ಲ. 2013-14 ರಲ್ಲಿ ಕೇಂದ್ರದ ಬಜೆಟ್‌ ಗಾತ್ರ 16.65 ಲಕ್ಷ ಕೋಟಿ ರು. ಇತ್ತು. ಆಗ ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳು ಸೇರಿ ಒಟ್ಟು 30310 ಕೋಟಿ ರು. ಅನುದಾನ ಬಂದಿತ್ತು. 2023-24 ರಲ್ಲಿ ಕೇಂದ್ರದ ಬಜೆಟ್‌ ಗಾತ್ರ 45.01 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆದರೆ ರಾಜ್ಯಕ್ಕೆ ಬರಬಹುದೆಂದು ಅಂದಾಜು ಮಾಡಿರುವುದು 49 ಸಾವಿರ ಕೋಟಿ ಮಾತ್ರ. ಈ ಲೆಕ್ಕದಲ್ಲಿ ರಾಜ್ಯಕ್ಕೆ 85-90 ಸಾವಿರ ಕೋಟಿ ಬರಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಈರುಳ್ಳಿ, ಅರಿಶಿನ, ತೆಂಗು, ಅಡಿಕೆ, ಮೆಣಸು, ತೊಗರಿ, ಭತ್ತ, ರಾಗಿ, ಜೋಳ ಮತ್ತಿತರ ಬೆಳೆ ಬೆಳೆಯುವ ರೈತರು ಬೆಲೆಯಿಲ್ಲದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣ ಸೂಕ್ತ ಪರಿಹಾರದ ಪ್ಯಾಕೇಜ್‌ ಘೋಷಿಸಬೇಕು. ರಾಜ್ಯದ ರಸ್ತೆಗಳ ಟೋಲ್‌ ದರಗಳು ಕೆಲವೇ ದಿನಗಳಲ್ಲಿ ಎರಡ್ಮೂರು ಪಟ್ಟು ಹೆಚ್ಚಾಗಿದ್ದು ಕೂಡಲೇ ರದ್ದು ಮಾಡಬೇಕು. ರಾಜ್ಯ ಸರ್ಕಾರದ ಭ್ರಷ್ಟಾಚಾರ ತೀವ್ರವಾಗಿದ್ದು ಸೂಕ್ತ ತನಿಖೆಗೆ ವಹಿಸಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

click me!