ಕಾಮಗಾರಿ ವಿಳಂಬ: ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವ ಸೋಮಣ್ಣ

By Kannadaprabha News  |  First Published Feb 28, 2023, 6:48 AM IST

ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ವಿವಿಧ ವಸತಿ ಯೋಜನೆಗಳ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ರಾಜ್ಯ ರಾಜೀವ್‌ಗಾಂಧಿ ವಸತಿ ನಿಗಮದ ಅಧಿಕಾರಿಗಳ ವಿರುದ್ಧ ರಾಜ್ಯ ವಸತಿ ಸಚಿವ ವಿ. ಸೋಮಣ್ಣ ಕಿಡಿಕಾರಿದರು.


ಚಿಕ್ಕಮಗಳೂರು (ಫೆ.28) : ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ವಿವಿಧ ವಸತಿ ಯೋಜನೆಗಳ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ರಾಜ್ಯ ರಾಜೀವ್‌ಗಾಂಧಿ ವಸತಿ ನಿಗಮದ ಅಧಿಕಾರಿಗಳ ವಿರುದ್ಧ ರಾಜ್ಯ ವಸತಿ ಸಚಿವ ವಿ. ಸೋಮಣ್ಣ(V Somanna) ಕಿಡಿಕಾರಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಕಾಮಗಾರಿಗೆ ದುಡ್ಡು ಕೊಡ್ತಾ ಇಲ್ವಾ, ಕತ್ತೆ ಮೇಯಿಸ್ತಿದ್ದೀರಾ ಎಂದು ತರಾಟೆ ತೆಗೆದುಕೊಂಡರು.

Tap to resize

Latest Videos

ಚಿಕ್ಕಮಗಳೂರು: ಸೂರಿಗಾಗಿ ಸಮರ: ಮಾ. 9ರಂದು ವಿಧಾನಸೌಧ ಮುತ್ತಿಗೆ

ಸಭೆಯ ಆರಂಭದಲ್ಲಿ ಶಾಸಕ ಸಿ.ಟಿ. ರವಿ(CT Ravi) ಮಾತನಾಡಿ, ರಾಜೀವ್‌ಗಾಂಧಿ ವಸತಿ ನಿಗಮ(Rajiv Gandhi Housing Corporation)ಕ್ಕೆ ವಹಿಸಿರುವ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಡೆಯುತ್ತಿರುವ ಮನೆ ನಿರ್ಮಾಣದ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಹೇಳಿದರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರ ಕ್ಷೇತ್ರದಲ್ಲಿ ಈ ರೀತಿಯಲ್ಲಿ ನಡೆಯುತ್ತಿದಿಯಾ, ಕೂಡಲೇ ಸಭೆಯ ಮುಂಭಾಗದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ಅಧಿಕಾರಿಯನ್ನು ಕರೆಸಿ ನಮಗೆ ನಾಚಿಕೆಯಾಗಬೇಕು. ನಾಳೆಯೇ ಕಾಮಗಾರಿ ಆರಂಭಿಸಿ, ದುಡ್ಡು ಕೇಳಿದಾಗ ಕೊಡ್ತಾ ಇಲ್ವಾ? ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ಜಿ ಪ್ಲಸ್‌ ಟೂ 1500 ಹಾಗೂ ಡೋಂಗ್ರಿ ಘರಾಸಿಯಾ ಅವರಿಗೆ 69 ಮನೆಗಳನ್ನು ಸಮರೋಪಾದಿಯಲ್ಲಿ ನಿರ್ಮಾಣ ಮಾಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಚಿಕ್ಕಮಗಳೂರು ನಗರದಲ್ಲಿ 500 ಮನೆಗಳು ನಿರ್ಮಾಣ ಆಗಬೇಕಾಗಿದ್ದು, ಸದ್ಯ 100 ಮನೆಗಳನ್ನು ಮಾತ್ರ ನಿರ್ಮಿಸಲಾಗುತ್ತಿದೆ. ಫಲಾನುಭವಿಗಳಿಂದ ಪ್ಲೋರಿಂಗ್‌, ಚೌಕಟ್ಟಿಗಾಗಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಹಣ ವಸೂಲಿ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ ಎಂದು ಶಾಸಕ ಸಿ.ಟಿ. ರವಿ ಅವರು ಸಚಿವರ ಗಮನಕ್ಕೆ ತಂದಾಗ ಫಲಾನುಭವಿಗಳ ಹತ್ತಿರಾ ಭಿಕ್ಷೇ ಕೇಳ್ತಾ ಇದೀರಾ ನಿಮಗೆ ನಾಚಿಕೆಯಾಗಬೇಕು ಎಂದು ಸಚಿವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಕಾಮಗಾರಿ ತ್ವರಿತ ಗತಿಯಲ್ಲಿ ಮುಗಿಸಲು ನಮಗೆ ಹಣದ ಕೊರತೆ ಇಲ್ಲ, ಬಾಕಿ ಇರುವ ಹಣವನ್ನು ಕೂಡಲೇ ಮಂಜೂರು ಮಾಡಲಾಗುವುದು ಕಾಲಮಿತಿಯೊಳಗೆ ಕಾಮಗಾರಿಯನ್ನು ಮುಗಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಲಭ್ಯವಿರುವ ಖಾಲಿ ಜಾಗ, ನಿವೇಶನಕ್ಕೆ ಇರುವ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಆಗಾಗ ಸಭೆಯನ್ನು ನಡೆಸಿ ನಿವೇಶನಗಳನ್ನು ಮಂಜೂರು ಮಾಡಬೇಕೆಂದು ಸೂಚನೆ ನೀಡಿದರು.

ಶಿವಮೊಗ್ಗ: ನಿರೀಕ್ಷೆ ಮಿರಿ ವಿಮಾನ ನಿಲ್ದಾ​ಣ​ದತ್ತ ಬಂದ ಜನ​ಸಾ​ಗ​ರ

ಒಂದು ಲಕ್ಷ ಸೈಟ್‌ ಹಂಚಿಕೆ

ರಾಜ್ಯದಲ್ಲಿ ಖಾಲಿ ಜಾಗವನ್ನು ಗುರುತಿಸಿ ನಿವೇಶನ ರಹಿತರಿಗೆ ಸೈಟ್‌ ಹಂಚುವ ಪ್ರಕ್ರಿಯೆ ಮುಂದುವರೆಸಲಾಗಿದೆ ಎಂದು ಸಚಿವ ವಿ. ಸೋಮಣ್ಣ ಅವರು ಹೇಳಿದರು. ಸದ್ಯದಲ್ಲೇ ರಾಜ್ಯದಲ್ಲಿ ಒಂದು ಲಕ್ಷ ಸೈಟ್‌ಗಳನ್ನು ಹಂಚಿಕೆ ಮಾಡಲಾಗುವುದು ಎಂದರು. ಸಭೆಯಲ್ಲಿ ಶಾಸಕರಾದ ಬೆಳ್ಳಿ ಪ್ರಕಾಶ್‌, ಟಿ.ಡಿ. ರಾಜೇಗೌಡ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಉಪಸ್ಥಿತರಿದ್ದರು.

click me!