ಸಚಿವಗಿರಿ ಎಂದರೆ ಚಮಚಾಗಿರಿಯಲ್ಲ, ಸತ್ಯದ ಪರ ನಿಲ್ಲುವ ಗಂಡಸ್ತನ ತಮಗಿಲ್ಲವೆಂದು ಒಪ್ಪಿಕೊಳ್ಳಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರು (ಜ.06): ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರನ್ನು ಸುಳ್ಳು ಆರೋಪದಡಿ (ಅರಣ್ಯದ ಮರಗಳನ್ನು ಕಡಿದ ಪ್ರಕರಣ) ಬಂಧಿಸಿ ಕ್ರಮ ಕೈಗೊಳ್ಳಲಾಲಾಗುತ್ತಿದೆ. ಆದರೆ, ಅಲ್ಲಿ ಮರ ಕಡಿಸಿದ್ದೇ ಸಿಎಂ ಸಿದ್ದರಾಮಯ್ಯ ಎಂದು ಹೇಳಿದ್ದಕ್ಕೆ, ಕುಮಾರಸ್ವಾಮಿ ಏನೇನೋ ಹೇಳುತ್ತಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಮಾಧ್ಯಮಗಳಿಗೆ ಉತ್ತರಿಸದೇ ಜಾರಿಕೊಂಡಿದ್ದಾರೆ. ಸಚಿವಗಿರಿ ಎಂದರೆ ಚಮಚಾಗಿರಿ ಅಲ್ಲ, ಎಂದುಗೂ ಸತ್ಯದ ಪರ ನಿಲ್ಲಬೇಕು. ಇಲ್ಲವಾದರೆ ಸತ್ಯದ ಪರ ನಿಲ್ಲುವ ಗಂಡಸ್ತನ ನಮಗಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, 'ಕರ್ನಾಟಕದ 'ನೀರೋ'ಗೆ ರಾಜಕೀಯ ಊಳಿಗ ಮಾಡುತ್ತಿರುವ ಗೃಹಮಂತ್ರಿ ಡಾ.ಜಿ. ಪರಮೇಶ್ವರ್ ಮತ್ತು ಸಿದ್ದಹಸ್ತರು ಹೇಳಿದ್ದಕ್ಕೆಲ್ಲ 'ಪರಿಪೂರ್ಣ ಸಹಕಾರ' ಕೊಡುವ ಹಾಸನ ಜಿಲ್ಲಾ ಉಸ್ತುವಾರಿ ಕೆ.ಎನ್.ರಾಜಣ್ಣ ಅವರು ಸಂಸದ ಪ್ರತಾಪ್ ಸಿಂಹ ಅವರ ಸಹೋದರನ ಪ್ರಕರಣಕ್ಕೆ ಸಂಬಂಧಿಸಿ ನಾನು ಕೊಟ್ಟಿರುವ ಹೇಳಿಕೆಗಳಿಗೆ ನೀಡಿದ ಪ್ರತಿಕ್ರಿಯೆ ಗಮನಿಸಿದ್ದೇನೆ.
ಹೆಚ್.ಡಿ. ದೇವೇಗೌಡರ ಶಾಪವನ್ನ ಆಶೀರ್ವಾದವೆಂದು ಸ್ವೀಕರಿಸ್ತೇನೆ: ಗುರುವಿಗೆ ತಿರುಮಂತ್ರ ಹಾಕ್ತಾರಾ ಸಿಎಂ ಸಿದ್ದರಾಮಯ್ಯ?
ಕುಮಾರಸ್ವಾಮಿ ಏನೇನೋ ಹೇಳುತ್ತಾರೆ, ಅದಕ್ಕೆಲ್ಲ ಉತ್ತರಿಸುವ ಅಗತ್ಯವಿಲ್ಲ ಎಂದು ಜಾರಿಕೊಂಡಿದ್ದಾರೆ ಈ ಸಚಿವರಿಬ್ಬರು. 'ಸಚಿವಗಿರಿ ಎಂದರೆ ಚಮಚಾಗಿರಿ ಅಲ್ಲ' ಅನ್ನುವುದನ್ನು ಇವರು ಅರ್ಥ ಮಾಡಿಕೊಳ್ಳಬೇಕು. ತಪ್ಪಿದರೆ, ಸತ್ಯದ ಪರ ನಿಲ್ಲುವ ಗಂಡಸ್ತನ ನಮಗಿಲ್ಲ ಎಂಬುದನ್ನು ಒಪ್ಪಿಕೊಳ್ಳುವ ನೈತಿಕತೆಯನ್ನಾದರೂ ತೋರಬೇಕು. ಶುಕ್ರವಾರ ಜನತಾದಳ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ನಾನು ಹೇಳಿದ್ದೆಲ್ಲವೂ ಸತ್ಯ.. ಅಪ್ಪಟ ಸತ್ಯವಾಗಿದೆ. ನಾನು ದಾಖಲೆ ಇಟ್ಟುಕೊಂಡೇ ಹೇಳಿದ್ದೇನೆ. ಆ ದಾಖಲೆಗಳನ್ನು ತೆಗೆದುಕೊಂಡು ಎಲ್ಲಿಗೆ ಬರಲಿ, ಹೇಳಿ? ಆಗ ಕ್ರಮ ಜರುಗಿಸುವ ದಮ್ಮು ತಾಕತ್ತನ್ನು ತೋರುವಿರಾ? ಅಥವಾ ಪಲಾಯನ ಮಾಡುವಿರಾ? ಬಹಿರಂಗ ಚರ್ಚೆಗೂ ನಾನು ತಯಾರು. ನೀವು ಸಿದ್ಧವೇ? ಎಲ್ಲಿ, ಯಾವಾಗ, ಎಷ್ಟೊತ್ತಿಗೆ, ನೀವು ಫಿಕ್ಸ್ ಮಾಡುತ್ತೀರಾ? ಇಲ್ಲವೇ ನಾನು ಫಿಕ್ಸ್ ಮಾಡಲಾ? ಅಲ್ಲಿ ನಾನು ಹೇಳಿದ್ದೇನೆ ಎಂಬುದರ ಬಗ್ಗೆ ಚರ್ಚಿಸೋಣ ಎಂದು ಸವಾಲು ಹಾಕಿದರು.
ವಿಕ್ರಂಸಿಂಹ ಮರ ಕಡಿದಿದ್ದರೆ ಎಫ್‌ಐಆರ್ (FIR)ನಲ್ಲಿ ಅವರ ಹೆಸರಿಲ್ಲ, ಯಾಕೆ? ಆ ಎಫ್‌ಐಆರ್ ಪ್ರತಿ ಲಗತ್ತಿಸಿದ್ದೇನೆ. ಅದನ್ನು ನೋಡಿ, ಆಮೇಲೆ ಮಾತನಾಡಿ. ದಲಿತರ ಹೆಸರಿನಲ್ಲಿ ರಾಜಕೀಯ ಬಾಳು ಕಟ್ಟಿಕೊಂಡ ಪರಮೇಶ್ವರ್, ರಾಜಣ್ಣನವರೇ.. ನಿಮ್ಮ ರೋಷಾವೇಷ ಆ ದಲಿತ ಅಧಿಕಾರಿಯನ್ನು ಅಮಾನತು ಮಾಡುವ ಕ್ಷಣದಲ್ಲಿ ಯಾರ ಬೂಟಿನ ಕೆಳಗೆ ಬಿದ್ದು ಹೊರಳಾಡುತ್ತಿತ್ತು? ಒಬ್ಬ ಗಾರ್ಡ್ ಅಮಾನತಿಗೂ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯೇ ಆದೇಶ ಹೊರಡಿಸಬೇಕೆ? ಎಂದು ಕಿಡಿಕಾರಿದರು.
ವಿಕ್ರಂ ಸಿಂಹ ಜಾಗದಲ್ಲಿ ಮರ ಕಡಿಸಿ ಹಾಕಿಸಿದ್ದೇ ಸಿಎಂ: ಎಚ್‌ಡಿಕೆ ಆರೋಪ
ಅಹಿಂದ ಅಹಿಂದ ಎಂದು ಬೆಳಗ್ಗೆ ಎದ್ದರೆ ಭಜನೆ ಮಾಡುವ ನೀವು, ಆ ಅಧಿಕಾರಿಯಿಂದ 50 ಲಕ್ಷ ರೂ. ಕಿತ್ತ ನಿಮ್ಮ ನೀತಿಗೆಟ್ಟ ಹೊಲಸು ಶಾಸಕನ ಬಗ್ಗೆ ನಿಮ್ಮ ಮೌನ ಅಸಹ್ಯ. ನಿಮ್ಮದೇ ಲಜ್ಜೆಗೆಟ್ಟ ಸರಕಾರ ಎಸಗಿದ ತಪ್ಪಿಗೆ ದಲಿತ ಅಧಿಕಾರಿಗೆ ಶಿಕ್ಷೆಯೇ? ಇದೆಲ್ಲದರ ಚಿದಂಬರ ರಹಸ್ಯ ಯಶವಂತಪುರ ಫ್ಲಾಟ್ ನಲ್ಲಿ ಅಡಗಿದೆ. ಯಾವ ತನಿಖೆ ಮಾಡುತ್ತೀರಿ? ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಅವರನ್ನು ಮುಗಿಸಲು ಹೂಡಿದ ಟರ್ಮಿನೇಟರ್ ಸಿನಿಮಾ ಇದು. ಅದರ ಹಿಂದಿರುವ ಸಿದ್ಧಸೂತ್ರದಾರನ ಕಳ್ಳಹೆಜ್ಜೆಗಳನ್ನು ನಾನು ಕಾಣದವನೇನೂ ಅಲ್ಲ. ಇಡೀ ವಿಕ್ರಂಸಿಂಹ ಅಂಕಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಿನ್ನೆಲೆ ಸಂಗೀತ, ಎಲ್ಲವೂ ಒಬ್ಬರದೇ. ಅವರೇ ಶ್ರೀಮನ್ ಸಿದ್ದರಾಮಣ್ಣ! ಎಂದು ಆಕ್ರೋಶ ಹೊರಹಾಕಿದ್ದಾರೆ.