ಕರ ಸೇವಕರು, ರಾಮಭಕ್ತರ ಕ್ರಿಮಿನಲ್ಸ್‌ಗಳೆನ್ನುವ ಸಿದ್ದರಾಮಯ್ಯನವರೇ ನೀವು ದೇಶಭಕ್ತರ ಪರವಾಗಿದ್ದೀರೋ ಅಥವಾ ಭಯೋತ್ಪಾದಕರ ಪರವಾಗಿಯೋ ಎಂಬುದು ಸ್ಪಷ್ಟಪಡಿಸಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ದಾವಣಗೆರೆ (ಜ.06): ಕರ ಸೇವಕರು, ರಾಮಭಕ್ತರ ಕ್ರಿಮಿನಲ್ಸ್‌ಗಳೆನ್ನುವ ಸಿದ್ದರಾಮಯ್ಯನವರೇ ನೀವು ದೇಶಭಕ್ತರ ಪರವಾಗಿದ್ದೀರೋ ಅಥವಾ ಭಯೋತ್ಪಾದಕರ ಪರವಾಗಿಯೋ ಎಂಬುದು ಸ್ಪಷ್ಟಪಡಿಸಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಕ್ಕರ್ ಬಾಂಬ್ ಇಟ್ಟವರು, ಗೋವುಗಳ ಕಡಿದು ಹಾಕುವವರು, ಹಿಂದೂಗಳ ದೇವಾಲಯಗಳ ಒಡೆದು ಹಾಕುವವರ ಪರ ನೀವಿದ್ದು, ಈಗಲಾದರೂ ನಿಮ್ಮ ನಿಲುವು, ನಿರ್ಧಾರ ಏನೆಂದು ಸ್ಪಷ್ಟಪಡಿಸಿ ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಜ.22ಕ್ಕೆ ಲೋಕಾರ್ಪಣೆ ಇದೆ. ಈ ವೇಳೆಯಲ್ಲಿ ಹಿಂದೂಗಳ ಹೆದರಿಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಗೋಧ್ರಾ ಘಟನೆ ರಾಜ್ಯದಲ್ಲಿ ಮತ್ತೊಮ್ಮೆ ಮರುಕಳಿಸಲಿದೆಯೆಂದು ಬಿ.ಕೆ.ಹರಿಪ್ರಸಾದ್ ಹೇಳುತ್ತಾರೆ. ದೇಶದಲ್ಲಿ ಶಾಂತ ವಾತಾವರಣ ಇದೆ. ಅದನ್ನು ಕೆಡಿಸಲು ಕಾಂಗ್ರೆಸ್ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದರು.
ಭಾರತವನ್ನು ಹಿಂದುರಾಷ್ಟ್ರ ಮಾಡಿಯೇ ತೀರುತ್ತೇವೆ: ಪ್ರಮೋದ್ ಮುತಾಲಿಕ್
ಒಡೆದ ಮನೆಯಾದ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ, ಕುತಂತ್ರ ಹೆಚ್ಚುತ್ತಿದೆ. ಹರಿಪ್ರಸಾದ್‌ಗೆ ಕಾಂಗ್ರೆಸ್‌ನಿಂದ ಸೈಡ್ ಲೈನ್ ಮಾಡಿದ್ದು, ಇದರಿಂದ ಬೇಸತ್ತು ಒಳ ಹೊಡೆತ ನೀಡುತ್ತಿದ್ದಾರೆ. ಒಂದೆಡೆ ಸಿದ್ದರಾಮಯ್ಯ ಕೆಳಗಿಳಿಸಲು, ಮತ್ತೊಂದು ಕಡೆ ಮುಂದಿನ 2 ವರ್ಷದ ನಂತರ ಡಿ.ಕೆ.ಶಿವಕುಮಾರಗೆ ಸಿಎಂ ಸ್ಥಾನ ಬಿಟ್ಟು ಕೊಡಬೇಕಾಗುತ್ತದೆಂಬ ಕಾರಣಕ್ಕೆ ಇಂತಹ ಹೇಳಿಕೆ ನೀಡುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ವೀರೇಂದ್ರ ಪಾಟೀಲರು ಸಿಎಂ ಇದ್ದಾಗಲೂ ಇದೇ ರೀತಿ ಕೋಮು ಗಲಭೆ ಸೃಷ್ಟಿಸಿ, ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರು ಎಂದು ದೂರಿದರು.
ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಅಷ್ಟೇ ಅಲ್ಲ, ನಮ್ಮನ್ನೂ ಬಂಧಿಸಿ. ಎಷ್ಟು ಜೈಲುಗಳನ್ನು ಕಟ್ಟೀಸುತ್ತೀರೋ ನೋಡೋಣ ಬನ್ನಿ. ನಾವು ಸುಮ್ಮನೆ ಇದ್ದರೆ ವಿಧಾನಸೌಧವನ್ನು ಅಲ್ಪಸಂಖ್ಯಾತರಿಗೆ ಬರೆದು ಕೊಡುತ್ತಾರೆ. ಶ್ರೀಕಾಂತ ಮೇಲೆ 16 ಕೇಸ್ ಇವೆಯೆಂದು ಬಿಂಬಿಸಿದ್ದಾರೆ. 16ರಲ್ಲಿ 15 ಸಂಪೂರ್ಣ ಕ್ಲಾಶ್ ಆಗಿದ್ದು, ಉಳಿದಿರುವುದೊಂದೇ ಕೇಸ್. ಅದೂ ಶ್ರೀರಾಮ ಮಂದಿರ ವಿಚಾರದ್ದು. ಯಾವುದೇ ನೋಟಿಸ್ ನೀಡದೇ, ಬಂಧಿಸಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹಿರಂಗ ಸಮಾವೇಶಗಳಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಭಾರತವನ್ನು ಹಿಂದು ರಾಷ್ಟ್ರವಾಗಲು ಬಿಡಬಾರದೆನ್ನುತ್ತಾರೆ. ಯತೀಂದ್ರರಂತಹವರು ಒಂದು ಮಾತನ್ನು ತಿಳಿಯಬೇಕು. ಮುಂದಿನ ದಿನಗಳಲ್ಲಿ ಭಾರತ ಅಖಂಡ ದೇಶವಾಗಲಿದೆ. ಇದೇ ನಮ್ಮೆಲ್ಲರ ಕನಸಾಗಿದೆ ಎಂದು ಹೇಳಿದರು. ಬಿಜೆಪಿ ಮುಖಂಡರಾದ ದಾವಣಗೆರೆ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಡಾ.ಟಿ.ಜಿ.ರವಿಕುಮಾರ, ಲೋಕಿಕೆರೆ ನಾಗರಾಜ, ಬಿ.ಜೆ.ಅಜಯಕಮಾರ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ರಾಜು ವೀರಣ್ಣ, ದೊಂದೂರು ಜಯರುದ್ರಪ್ಪ, ದಯಾನಂದ, ಚಂದ್ರು ಪಾಟೀಲ್, ಆರ್.ಪ್ರತಾಪ್, ಅಣಜಿ ಬಸವರಾಜ ಇತರರಿದ್ದರು.
ಮುಸ್ಲಿಮರ ಮತಕ್ಕಾಗಿ ಓಲೈಕೆ: ರಾಜ್ಯದಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲ, ಟಿಪ್ಪು, ಔರಂಗಜೇಬ, ತಾಲಿಬಾನ್ ಮಾದರಿ ಆಡಳಿತ ನಡೆಸುತ್ತಿದೆ. ಅಲ್ಪಸಂಖ್ಯಾತರ ಮತಕ್ಕಾಗಿ ಓಲೈಕೆ, ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಬರಪೀಡಿತ ರಾಜ್ಯದ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲು ಹಣವಿಲ್ಲ. ಆದರೆ, ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರು. ಅನುದಾನ ನೀಡಲು ಸಿದ್ದರಾಮಯ್ಯ ಸರ್ಕಾರದ ಬಳಿ ಹಣ ಇದೆ ಎಂದು ರೇಣುಕಾಚಾರ್ಯ ದೂರಿದರು.
ಮುಸ್ಲಿಂ ಓಲೈಕೆಗೆ 31 ವರ್ಷದ ಕೇಸು ಓಪನ್: ರಾಜ್ಯ ಸರ್ಕಾರದ ವಿರುದ್ಧ ಬಿಎಸ್‌ವೈ ಕಿಡಿ
1990ರಿಂದ 2004ರವರೆಗೆ ನನ್ನ ಮೇಲೆ 50 ಕೇಸ್ ಹಾಕಿದ್ದರು. ಕೇಸ್ ಹಾಕಿದ ಮಾತ್ರಕ್ಕೆ ಯಾರೂ ಕ್ರಿಮಿನಲ್ ಆಗುವುದಿಲ್ಲ. ಶ್ರೀಕಾಂತ ಪೂಜಾರಿ ಕ್ರಿಮಿನಲ್ ಆಗಿದ್ದರೆ, ನೋಟಿಸ್ ನೀಡಬೇಕು. ಆದರೆ, ಬಡಪಾಯಿ ಆಟೋ ಚಾಲಕನ ಬಂಧಿಸಿದ್ದು ಖಂಡನೀಯ. ಸುಳ್ಳು ಗ್ಯಾರಂಟಿ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತಷ್ಟೇ. ಶ್ರೀರಾಮ, ಹನುಮನ ಬಗ್ಗೆ ಹಗುರ ಮಾತನಾಡಿದರೆ, ಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ.
-ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ