ನೀವು ಕರೆಂಟ್‌ ಕಳ್ಳರೆಂದ ಕಾಂಗ್ರೆಸ್: ಪರೀಕ್ಷೆ ಮಾಡಲಷ್ಟೇ ಲೈನ್‌ ಹಾಕಿದ್ದೇವೆಂದ ಕುಮಾರಸ್ವಾಮಿ

By Sathish Kumar KH  |  First Published Nov 14, 2023, 1:48 PM IST

ದೀಪಾವಳಿ ಹಬ್ಬದ ಅಂಗವಾಗಿ ಮನೆಗೆ ವಿದ್ಯುತ್‌ ದೀಪಾಲಂಕಾರ ಮಾಡುವುದಕ್ಕೆ ಖಾಸಗಿ ಡೆಕೋರೇಟರ್ಸ್‌ಗೆ ಹೇಳಿದಾಗ, ಆತ ಪರೀಕ್ಷೆ ಮಾಡಲು ಪಕ್ಕದಲ್ಲಿದ್ದ ವಿದ್ಯುತ್‌ ಕಂಬಕ್ಕೆ ಲೈನ್‌ ಎಳೆದಿದ್ದಾನೆ.


ಬೆಂಗಳೂರು (ನ.14): ನಮ್ಮ ಮನೆಗೆ ದೀಪಾವಳಿ ಹಬ್ಬದ ಅಂಗವಾಗಿ ವಿದ್ಯುತ್‌ ದೀಪಾಲಂಕಾರ ಮಾಡುವುದಕ್ಕೆ ಖಾಸಗಿ ಡೆಕೋರೇಟರ್ಸ್‌ಗೆ ಹೇಳಿದಾಗ, ಆತ ಪರೀಕ್ಷೆ ಮಾಡಲು ಪಕ್ಕದಲ್ಲಿದ್ದ ವಿದ್ಯುತ್‌ ಕಂಬಕ್ಕೆ ಲೈನ್‌ ಎಳೆದಿದ್ದಾನೆ. ಆದರೆ, ಕಾಂಗ್ರೆಸ್‌ ಇದನ್ನೇ ದೊಡ್ಡದು ಮಾಡಿ ಪ್ರಚಾರ ಗಿಟ್ಟಿಸುವ ಕೆಲಸ ಮಾಡುತ್ತಿದೆ. ಆ ಪಕ್ಷದ ಕ್ಷುಲ್ಲಕ ಮನಃಸ್ಥಿತಿಯ ಬಗ್ಗೆ ನನಗೆ ಮರುಕ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ದೀಪಾವಳಿ ಹಬ್ಬಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ಮನೆಗೆ ವಿದ್ಯುತ್‌ ಲೈಟಿಂಗ್ಸ್‌ ಹಾಕಲು ಖಾಸಗಿ ಡೆಕೋರೇಟರ್ಸ್‌ಗೆ ಹೇಳಿದ್ದಾರೆ. ಆದರೆ, ಮನೆಗೆ ಅಲಂಕಾರ ಮಾಡಿದ್ದ ಲೈಟಿಂಗ್ಸ್‌ಗೆ ಕಂಬದಿಂದ ನೇರವಾಗಿ ಲೈನ್‌ ಎಳೆದು ವಿದ್ಯುತ್‌ ಸಂಪರ್ಕ ಮಾಡಿದ್ದಾರೆ. ಇದನ್ನಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಾಂಗ್ರೆಸ್‌ ಭಾರಿ ದೊಡ್ಡ ಪ್ರಮಾಣದಲ್ಲಿ ಟೀಕೆಯನ್ನು ಮಾಡಿದೆ. ಕಾಂಗ್ರೆಸ್‌ ಮೇಲೆ ನಿರಂತರವಾಗಿ ವಾಗ್ದಾಳಿ ಮಾಡುತ್ತಿದ್ದ ಕುಮಾರಸ್ವಾಮಿ ಅವರಿಗೆ ಕಟುವಾಗಿಯೇ ಈಟಿಯನ್ನು ತಿವಿದಿದೆ.

Tap to resize

Latest Videos

ಕಾಂಗ್ರೆಸ್‌ ಟ್ವೀಟ್‌:
'ಜಗತ್ತಿನ ಏಕೈಕ ಮಹಾಪ್ರಾಮಾಣಿಕ ಹೆಚ್.ಡಿ ಕುಮಾರಸ್ವಾಮಿಯವರ ಜೆ ಪಿ ನಗರದ ನಿವಾಸದ ದೀಪಾವಳಿಯ ದೀಪಾಲಂಕಾರಕ್ಕೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ! ಹೆಚ್.ಡಿ. ಕುಮಾರಸ್ವಾಮಿ ಅವರೇ ನಮ್ಮ ಸರ್ಕಾರ ಗೃಹಜ್ಯೋತಿಯಲ್ಲಿ 200 ಯೂನಿಟ್ ಉಚಿತ ಕೊಡುತ್ತಿದೆಯೇ ಹೊರತು 2000 ಯೂನಿಟ್ ಅಲ್ಲ! ತಮಗೆ ಅಷ್ಟೊಂದು ದಾರಿದ್ರ್ಯ ಬಂದಿದ್ದರೆ ಗೃಹಜ್ಯೋತಿ ಯೋಜನೆಗೆ ಒಂದು ಅರ್ಜಿ ಹಾಕಬಹುದಿತ್ತಲ್ಲ. ಒಹ್, ತಿಳಿದಿರಲಿಲ್ಲ ಗೃಹಜ್ಯೋತಿಯಲ್ಲಿ ಒಬ್ಬರಿಗೆ ಒಂದೇ ಮೀಟರ್ ಗೆ ಅವಕಾಶವಿದೆ, ತಮ್ಮ ಹೆಸರಲ್ಲಿ ಹಲವು ಮೀಟರ್ ಗಳಿವೆಯಲ್ಲವೇ! ಎಂದು ಕಿಡಿಕಾರಿದೆ.

ಕನ್ನಡ ನಾಡಿಗೆ 10 ವರ್ಷಗಳ ಬಳಿಕ ಮತ್ತೆ ವಕ್ಕರಿಸಿದ ನಕ್ಸಲರಿಂದ ಪೊಲೀಸರ ಮೇಲೆ ಗುಂಡಿನ ದಾಳಿ

ರಾಜ್ಯದ ವಿದ್ಯುತ್ ಕೊರತೆಯ ನಡುವೆಯೂ ರೈತರಿಗೆ 7 ಗಂಟೆ ವಿದ್ಯುತ್ ಕೊಡುವ ಕ್ರಮ ಕೈಗೊಂಡಿದ್ದರೂ ಪುಂಖಾನುಪುಂಕವಾಗಿ ಮಾತಾನಾಡುವ ತಾವು ಇಂತಹ ಚೀಪ್ ಕಳ್ಳತನಕ್ಕೆ ಇಳಿಯುವಷ್ಟು 'ಬರ' ಎದುರಿಸುತ್ತಿದ್ದೀರಾ? ಅದೇನೋ ಪತ್ರಿಕಾಗೋಷ್ಠಿ ನಡೆಸಿ “ಕರ್ನಾಟಕ ಕತ್ತಲಲ್ಲಿದೆ“ ಎನ್ನುತ್ತಾ ಬಡಬಡಿಸಿದ್ದಿರಲ್ಲವೇ, ಈಗ ಕದ್ದ ವಿದ್ಯುತ್ತಿನಲ್ಲಿ ನಿಮ್ಮ ಮನೆಗೆ ಬೆಳಕು ಮಾಡಿಕೊಂಡಿದ್ದೀರಿ, ನಿಮ್ಮ ಮನೆ ಹೀಗೆ ಜಗಮಗ ಹೊಳೆಯುತ್ತಿರುವಾಗ ಅದ್ಯಾವ ಬಾಯಲ್ಲಿ ಕರ್ನಾಟಕ ಕತ್ತಲಲ್ಲಿದೆ ಎನ್ನುವಿರಿ ಸ್ವಾಮಿ? ಎಂದು ಕಿಡಿಕಾರಿದ್ದಾರೆ.

ನಿಮ್ಮದೇ ಶೈಲಿಯ ಪ್ರಶ್ನೆ ಕೇಳಬೇಕೆಂದರೆ, ರಾಜ್ಯ ಬರ ಎದುರಿಸುತ್ತಿರುವಾಗ ನಿಮ್ಮ ಮನೆ ಮಾತ್ರ ಜಗಮಗಿಸಬೇಕೆ? ರೈತರ ಪಾಲಿನ ವಿದ್ಯುತ್ ಕಳ್ಳತನ ಮಾಡಿ ಮೋಜು ಮಾಡಬೇಕೆ? ನಿಮ್ಮ ಮನೆಯ ದೀಪಾವಳಿಗೆ ರಾಜ್ಯದ ಜನರ 'ದಿವಾಳಿ' ಯನ್ನು ಬಯಸುತ್ತಿದ್ದೀರಾ? ವಿದ್ಯುತ್ತನ್ನೇ ಬಿಡದೆ ಲೂಟಿ ಮಾಡುವ ತಾವು ರಾಜ್ಯವನ್ನು ಇನ್ನೆಷ್ಟು ಲೂಟಿ ಮಾಡಿರಬಹುದು? ಎಂದು ಪ್ರಶ್ನೆ ಮಾಡಲಾಗಿದೆ.

ಪರೀಕ್ಷೆ ಮಾಡಲಷ್ಟೇ ಲೈನ್‌ ಎಳೆಯಲಾಗಿತ್ತು: ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, 'ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್ ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ' ಎಂದು ಹೇಳಿದ್ದಾರೆ.

ಮತ್ತೆ ಮೋದಿ ಗೆಲ್ಲಿಸಲು ಪ್ರಯತ್ನಿಸೋಣ: ಸಂಸದ ಪ್ರಜ್ವಲ್‌ ರೇವಣ್ಣ

ಅಚಾತುರ್ಯವನ್ನೇ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಕಾಂಗ್ರೆಸ್‌:
ಮುಂದುವರೆದು 'ಈ ಅಚಾತುರ್ಯಕ್ಕೆ ನನ್ನ ವಿಷಾದವಿದೆ. ಬೆಸ್ಕಾಂ ಅಧಿಕಾರಿಗಳು ಬಂದು ಪರೀಕ್ಷೆ ಮಾಡಿ ನೋಟಿಸ್ ನೀಡಲಿ. ದಂಡ ಕಟ್ಟುತ್ತೇನೆ. ಇದನ್ನೇ ಕಾಂಗ್ರೆಸ್‌ ದೊಡ್ಡದು ಮಾಡಿ ಪ್ರಚಾರ ಗಿಟ್ಟಿಸುವ ಕೆಲಸ ಮಾಡುತ್ತಿದೆ. ಆ ಪಕ್ಷದ ಕ್ಷುಲ್ಲಕ ಮನಃಸ್ಥಿತಿಯ ಬಗ್ಗೆ ನನಗೆ ಮರುಕ ಇದೆ. ನಾನೇನು ರಾಜ್ಯದ ಆಸ್ತಿ ಕಬಳಿಸಿಲ್ಲ. ಕಂಡವರ ಭೂಮಿಗೆ ಬೇಲಿ ಹಾಕಿಲ್ಲ. ಇನ್ನೊಬ್ಬರ ರಕ್ತ ಕುಡಿದು ಧನದಾಹ ತೀರಿಸಿಕೊಂಡಿಲ್ಲ. ಕುಮಾರಸ್ವಾಮಿ ವಿದ್ಯುತ್ ಕಳ್ಳತನ ಮಾಡಿದ್ದಾರೆ, ಬೆಸ್ಕಾಂ ಕ್ರಮ ಕೈಗೊಳ್ಳಲಿ ಎಂದು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಾನು ಮನೆಯಲ್ಲೇ ಇದ್ದೇನೆ. ಬೆಸ್ಕಾಂ ಅಧಿಕಾರಿಗಳು ಬರಲಿ. ಅವರ ಯಾವುದೇ ಕ್ರಮಕ್ಕೆ ನಾನು ಸಿದ್ಧನಿದ್ದೇನೆ ಎಂದು ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.

click me!