Karnataka Election 2023: 'ಚಾಲೆಂಜ್ ಓಟ್' ಮಾಡಿದ 95ರ ವೃದ್ಧೆ! 5 ದಿನದ ಬಾಣಂತಿಯಿಂದ ಮತದಾನ

By Sathish Kumar KH  |  First Published May 10, 2023, 8:06 PM IST

ಮತದಾನಕ್ಕೆಂದು ಮತಗಟ್ಟೆಗೆ ಬಂದ 95 ವರ್ಷದ ವಯೋವೃದ್ಧೆಯೊಬ್ಬರು ತಮ್ಮ ಮತ ಬೇರೊಬ್ಬರು ಹಾಕಿದ್ದನ್ನು ಕಂಡು ಆಘಾತಕ್ಕೊಳಗಾದರಲ್ಲದೆ, ಚಾಲೆಂಜ್ ಓಟ್ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. 


ಯಾದಗಿರಿ (ಮೇ 10): ಮತದಾನಕ್ಕೆಂದು ಮತಗಟ್ಟೆಗೆ ಬಂದ 95 ವರ್ಷದ ವಯೋವೃದ್ಧೆಯೊಬ್ಬರು ತಮ್ಮ ಮತ ಬೇರೊಬ್ಬರು ಹಾಕಿದ್ದನ್ನು ಕಂಡು ಆಘಾತಕ್ಕೊಳಗಾದರಲ್ಲದೆ, ಚಾಲೆಂಜ್ ಓಟ್ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದ ಘಟನೆ ಯಾದಗಿರಿ ನಗರದಲ್ಲಿ ನಡೆದಿದೆ. 

ಯಾದಗಿರಿ ನಗರದ ಸ್ಟೇಷನ್ ಬಜಾರ್ ಶಾಲೆಯ ಎಂಪಿಎಸ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 72 ರಲ್ಲಿ ನಡೆದ ಇಂತಹ ಪ್ರಕರಣ, ಮತದಾನದ ಹಕ್ಕಿನಿಂದ ವಂಚಿತರಾದವರಿಗೆ ಹೊಸ ಆಶಾಭಾವ ಮೂಡಿಸಿತ್ತು.  ಯಾದಗಿರಿ ನಗರದ ಮದನಪುರಗಲ್ಲಿಯ ನಿವಾಸಿ ಮೆಹಬೂಬ್ ಬೀ (95) ಅವರು ಮತದಾನಕ್ಕೆಂದು ಮಧ್ಯಾಹ್ನ ಮತಗಟ್ಟೆಗೆ ಬಂದಿದ್ದರು. ಆದರೆ, ನಿಮ್ಮ ಮತ ಈಗಾಗಲೇ ಚಲಾವಣೆಯಾಗಿದೆ ಎಂದು ಚುನಾವಣಾ ಸಿಬ್ಬಂದಿಗಳ ಉತ್ತರದಿಂದ ಕಂಗಾಲಾದ ಅವರು ಆಘಾತಕ್ಕೊಳಗಾದರು. 

Tap to resize

Latest Videos

undefined

Karnataka Elections 2023 LIVE: ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಅತಂತ್ರ ಸರ್ಕಾರದ ಸೂಚನೆ...

ಬ್ಯಾಲೆಟ್‌ ಪೇಪರ್‌ ಮೂಲಕ ಮತದಾನ ಹಕ್ಕು:  ಸಂಬಂಧಿಕರು ಚಾಲೆಂಜ್ ಓಟ್‌ಗೆ ಮೆಹಬೂಬ್ ಬೀ ಅವಕಾಶ ಕೋರಿದಾಗ, ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದ ನಂತರ, ಒಂದು ಗಂಟೆಯ ತರುವಾಯ ಎಲ್ಲ ವಿವರಗಳ ಪರಿಶೀಲಿಸಿ ಬ್ಯಾಲೆಟ್ ಪೇಪರ್‌ದಲ್ಲಿ ಮತದಾನದ ಅವಕಾಶ ನೀಡಲಾಯಿತು. ಈ ಮೊದಲು ಇವರ ಹೆಸರಿನಲ್ಲಿ ಚಲಾವಣೆಯಾಗಿದ್ದ ಮತವನ್ನು ಪರಿಶೀಲಿಸಿ ಡಿಲೀಟ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರೆಂದು ಮೆಹಬೂಬ್ ಸಂಬಂಧಿಕರು ಪ್ರತಿಕ್ರಿಯಿಸಿದರು. ಕೊನೆಗೂ ಮತದಾನದ ಮಾಡಿದ ಮೆಹಬೂಬ್ ಬೀ ಮೊಗದಲ್ಲಿ ಮಂದಹಾಸ ಮೂಡಿತ್ತು.

ವಾದಕ್ಕಿಳಿದು ಮತದಾನ ಹಕ್ಕು ಪಡೆದೆ: 
ಓಟ್ ಹಾಕಲು ಬಂದಾಗ ನಿಮ್ಮೆ ಮತ ಹಾಕಲಾಗಿದೆ ಎಂದು ತಿಳಿಸಿದ್ದರು. ನಾನು ಹಾಕಿಯೇ ಇಲ್ಲ ಎಂದು ವಾದಕ್ಕಿಳಿದು, ಈಗ ಚಾಲೆಂಜ್ ಓಟ್ ಮೂಲಕ ಹಕ್ಕು ಚಲಾಯಿಸಿದ್ದೇನೆ. ನಕಲಿ ಮತದಾನಕ್ಕೆ ಇದು ಕಡಿವಾಣ ಹಾಕುತ್ತದೆ. 
- ಮೆಹಬೂಬ್ ಬೀ, ಚಾಲೆಂಜ್ ಓಟ್ ಮಾಡಿದ ಯಾದಗಿರಿ ನಿವಾಸಿ. 

5 ದಿನದ ಬಾಣಂತಿಯಿಂದ ಮತದಾನ:
ಮತ್ತೊಂದೆಡೆ ಯಾದಗಿರಿ ಜಿಲ್ಲೆಯಲ್ಲಿ ಮತದಾನದ ಹಕ್ಕು ಚಲಾಯಿಸಲು 5 ದಿನಗಳ ಬಾಣಂತಿಯೊಬ್ಬಳು ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ್ದಲ್ಲದೆ, ಮತದಾನದ ಮಹತ್ವ ಸಾರಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ಸಗರ ಗ್ರಾಮದಲ್ಲಿ ನಡೆದಿದೆ. 25 ವರ್ಷದ ಭಾಗ್ಯಶ್ರೀ ಅವರಿಗೆ ಶಹಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 5 ದಿನಗಳ ಹಿಂದೆ ಮೂರನೇ ಹೆರಿಗೆಯಾಗಿತ್ತು. ಹಸಿ ಬಾಣಂತಿ ಹೊರಗಡೆ ಹೋಗಬಾರದು ಎಂಬ ಮಾತುಗಳ ಮಧ್ಯೆ, ಮತದಾನ ನಮ್ಮ ಕರ್ತವ್ಯ ಎಂದು ಭಾವಿಸಿದ ಭಾಗ್ಯಶ್ರೀ ಅವರನ್ನು ಮತಗಟ್ಟೆಗೆ ಕಾಳಜಿಪೂರ್ವಕ ಕರೆದುಕೊಂಡ ಹೋದ ಪತಿ ಚಂದ್ರಶೇಖರ್ ಮತದಾನದ ಹಕ್ಕು ಚಲಾಯಿಸಲು ಸಹಕರಿಸಿದರು.

KARNATAKA ELECTION 2023: ನಿವೃತ್ತ ಎಎಸ್‌ಐ ಮತ ಹಾಕಲು ನಿರಾಕರಿಸಿದ ಚುನಾವಣಾ ಸಿಬ್ಬಂದಿ

ಐದು ವರ್ಷಕ್ಕೊಮ್ಮೆ ಬರುವ ಹಕ್ಕು ಚಲಾಯಿಸಬೇಕು: ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು. ಐದು ವರ್ಷಕ್ಕೊಮ್ಮೆ ಬರುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಇತರರಿಗೆ ಮಾದರಿ ಆಗಬೇಕು ಎಂಬ ಕಾರಣದಿಂದ ಬಾಣಂತಿ ಭಾಗ್ಯಶ್ರೀಯನ್ನು ಮತ ಚಲಾಯಿಸುವಂತೆ ಪ್ರೋತ್ಸಾಹಿಸಲಾಯಿತು ಎಂದು ಗುತ್ತಿಗೆದಾರ ಆಗಿರುವ ಚಂದ್ರಶೇಖರ್ ಕನ್ನಡಪ್ರಭಕ್ಕೆ ತಿಳಿಸಿದರು. ಎರಡು ಗಂಡು ಮಕ್ಕಳಿರುವ ಭಾಗ್ಯಶ್ರೀಗೆ ಐದು ದಿನಗಳ ಹಿಂದೆ ಹೆಣ್ಣು ಮಗು ಹುಟ್ಟಿದೆ. ಯಾದಗಿರಿ ಜಿಲ್ಲೆಯ ನಾಲ್ಕೂ ಮತಕ್ಷೇತ್ರಗಳಲ್ಲಿ ಬುಧವಾರ ನಡೆದ ಮತದಾನದಲ್ಲಿ ಮಹಿಳೆಯರು, ವಿಕಲಚೇತನರು, ಗರ್ಭಿಣಿಯರು, ಬಾಣಂತಿಯರು ಹಾಗೂ ವಯೋವೃದ್ಧರು ಉತ್ಸಾಹದಿಂದ ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸಿದ್ದುದು ಮತದಾನದಿಂದ ದೂರವಿದ್ದ ಯುವಪಡೆಯನ್ನು ನಾಚಿಸುವಂತಿತ್ತು.

click me!