ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನ ಗೆದ್ದುಕೊಂಡಿದೆ. ಕಾಂಗ್ರೆಸ್ ನಾಯಕರ ಸುನಾಮಿಗೆ ಬಿಜೆಪಿ ನಾಯಕರು ಕೊಚ್ಚಿ ಹೋಗಿದ್ದಾರೆ. ಒಂದೆಡೆ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದುಕೊಂಡಿದ್ದರೆ, ಇತ್ತ ಡಿಕೆ ಶಿವಕುಮಾರ್ ಕನಕಪುರದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಡಿಕೆಶಿಗೆ ಡಿಚ್ಚಿ ನೀಡಲು ಹೋದ ಅಶೋಕ್ ಮುಖಭಂಗ ಅನುಭವಿಸಿದ್ದಾರೆ.
ಬೆಂಗಳೂರು(ಮೇ.13): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನ ಗೆದ್ದುಕೊಂಡಿದೆ. ಅಧಿಕಾರ ಉಳಿಸುಕೊಳ್ಳುವ ವಿಶ್ವಾಸದಲ್ಲಿದ್ದ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಡಿಕೆ ಶಿವಕಮಾರ್ ಸಂಭ್ರಮ ಹೇಳತೀರದು. ಒಂದೆಡೆ ಕಾಂಗ್ರೆಸ್‌ಗೆ ಅಭೂತಪೂರ್ವ ಗೆಲುವು, ಮತ್ತೊಂದು ಕನಕಪುರದಲ್ಲಿ ಭಾರಿ ಅಂತರದ ಗೆಲುವು. ಇಷ್ಟೇ ಅಲ್ಲ ಕನಕಪುರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ನಾಯಕ ಆರ್ ಅಶೋಕ್‌ಗೆ ಶಾಕ್ ನೀಡುವಲ್ಲೂ ಡಿಕೆಶಿ ಯಶಸ್ವಿಯಾಗಿದ್ದಾರೆ.
ಕನಕಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಇದು ಡಿಕೆ ಶಿವಕುಮಾರ್ ಸ್ವಕ್ಷೇತ್ರ. ಇಲ್ಲಿ ಡಿಕೆ ಶಿವಕುಮಾರ್ ಸೇರಿದಂತೆ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕನಕಪುರದಲ್ಲಿ ಡಿಕೆ ಶಿವಕುಮಾರ್ 91455 ಮತಗಳನ್ನು ಪಡೆದು ಭರ್ಜರಿ ಮುನ್ನಡೆ ಪಡದುಕೊಂಡಿದ್ದಾರೆ. ಮತ ಎಣಿಕೆ ಅಂತಿಮ ಹಂತಕ್ಕೆ ತಲುಪಿದ್ದು, ಡಿಕೆ ಶಿವಕುಮಾರ್ 1 ಲಕ್ಷ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಇತ್ತ ಬಿಜೆಪಿ ನಾಯಕ ಆರ್ ಅಶೋಕ್ 13,723 ಮತಗಳನ್ನು ಪಡೆದಿದ್ದಾರೆ. ಇನ್ನು ಇಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ನಾಗರಾಜು 15047 ಮತಗಳನ್ನು ಪಡೆದಿದ್ದಾರೆ.
undefined
Karnataka Election 2023 Live: ಬಹುಮತದ ಸರಕಾರಕ್ಕೆ ಮತ ಹಾಕಿದ ಕನ್ನಡಿಗರು
2008ರಿಂದ ಡಿಕೆ ಶಿವಕುಮಾರ್ ಕನಕಪುರ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿದ್ದಾರೆ. ಪಿಜಿಆರ್ ಸಿಂಧ್ಯಾ ಬಳಿಕ ಕನಕಪುರದಲ್ಲಿ ಹೊಸ ಸಾಮ್ರಾಜ್ಯ ಕಟ್ಟಿದ ಡಿಕೆ ಶಿವಕುಮಾರ್ 2008, 2018, 2018 ಇದೀಗ 2023ರಲ್ಲೂ ಗೆಲುವಿನ ನಗೆ ಬೀರಿದ್ದಾರೆ. ಕನಕಪುರ ಬಂಡೆ ಎಂದೇ ಖ್ಯಾತಿಗೊಂಡಿರುವ ಡಿಕೆ ಶಿವಕುಮಾರ್‌ಗೆ ಇದು ನಾಲ್ಕನೇ ಗೆಲುವು. 2018ರಲ್ಲಿ ಡಿಕೆ ಶಿವಕುಮಾರ್ 127,552ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಬರೋಬ್ಬರಿ 100,007 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದರು. 2013ರಲ್ಲಿ ಜೆಡಿಎಸ್‌ನ ಹಿರಿಯ ನಾಯಕ ಪಿಜಿಆರ್ ಸಿಂಧ್ಯಾ ವಿರುದ್ಧ ಡಿಕೆಶಿ ಗೆಲುವು ದಾಖಲಿಸಿದ್ದರು. ಪಿಜಿಆರ್ ಸಿಂದ್ಯಾ 68,583 ಮತಗಳನ್ನು ಪಡೆದಿದ್ದರು. ಇನ್ನು 2008ರಲ್ಲಿ ಡಿಕೆ ಶಿವಕುಮಾರ್ 68,096 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಡಿಂಎಂ ವಿಶ್ವನಾಥ್ 60,917 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದ್ದರು.
Karnataka Election Result 2023 ಗೆಲುವಿನ ಬೆನ್ನಲ್ಲೇ ಡಿಕೆಶಿ ಭಾವುಕ, ಜೈಲು ದಿನ ನೆನೆದು ಕಣ್ಣೀರು!
16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕಿತ್ತು.