
ಸೋಮರಡ್ಡಿ ಅಳವಂಡಿ
ಕೊಪ್ಪಳ (ಮೇ.5) : ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥ ಮಾಡುವಂತೆ ಆಗ್ರಹಿಸಿ ಬಹಿಷ್ಕಾರಕ್ಕೆ ಮುಂದಾಗಿದ್ದ ಬಿಸರಳ್ಳಿ ಗ್ರಾಮಸ್ಥರಿಗೆ ಜಿಲ್ಲಾಡಳಿತ 8 ದಿನಗಳೊಳಗಾಗಿ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಹೇಳಿತ್ತು. ಹದಿನೈದು ದಿನಗಳು ಕಳೆದರೂ ಸಮಸ್ಯೆ ಇತ್ಯರ್ಥವಾಗದ ಹಿನ್ನೆಲೆ ಮತ್ತೆ ಬಹಿಷ್ಕಾರ ಹಾಕಲು ಗ್ರಾಮಸ್ಥರು ಪಕ್ಷಾತೀತವಾಗಿ ನಿರ್ಧರಿಸಿದ್ದಾರೆ.
ಅಚ್ಚರಿ ಎಂದರೆ ಗ್ರಾಪಂ ಅಧ್ಯಕ್ಷ ಮರಿಶಾಂತವೀರಸ್ವಾಮಿಗಳ ನೇತೃತ್ವದಲ್ಲಿ ಗ್ರಾಮದ ಎಲ್ಲ ಸದಸ್ಯರು ತೀರ್ಮಾನ ಮಾಡಿದ್ದಾರೆ.
ರಸ್ತೆಗಾಗಿ ಚುನಾವಣೆ ಬಹಿಷ್ಕರಿಸಲು ನಿರ್ಧಾರ, ಅಭ್ಯರ್ಥಿಗಳಿಗೆ ಹೊಡೆತ!
ಜಿಲ್ಲಾಡಳಿತವೇ ನೀಡಿದ ಭರವಸೆಯಂತೆ ನಾವು ಕಾದು ನೋಡಿದೆವು. ತಹಸೀಲ್ದಾರ ಅಮರೇಶ ಬಿರಾದಾರ ತಾವೇ ಖುದ್ದು ಸಭೆ ನಡೆಸಿ, 8ದಿನಗಳೊಳಗಾಗಿ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಹೇಳಿದ್ದರು. ಆದರೆ, ಈಗ ಹದಿನೈದು ದಿನಗಳು ಕಳೆದಿದೆ. ಸಮಸ್ಯೆ ಇದ್ದಲ್ಲಿಯೇ ಇದೆ. ಈ ಸಮಸ್ಯೆ ನೀಗಿಸಲು ಖುದ್ದು ಜಿಪಂ ಸಿಇಓ ಗ್ರಾಮಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು.ಆದರೆ,ಇದುವರೆಗೂ ಯಾರು ಸಹ ಗ್ರಾಮಕ್ಕೆ ಬಂದಿಲ್ಲ ಮತ್ತು ಸಮಸ್ಯೆ ನೀಗಿಸುವ ಪ್ರಯತ್ನವೂ ಆಗುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಚಾರಕ್ಕೂ ಇಲ್ಲ ಅವಕಾಶ:
ಈಗಾಗಲೇ ಗ್ರಾಮಸ್ಥರು ಪಕ್ಷಾತೀತವಾಗಿ ಯಾರೊಬ್ಬರಿಗೂ ಪ್ರಚಾರಕ್ಕೂ ಅವಕಾಶ ನೀಡಿಲ್ಲ. ಗ್ರಾಮದಲ್ಲಿ ಇದುವರೆಗೂ ಚುನಾವಣೆ ಪ್ರಚಾರವೂ ನಡೆದಿಲ್ಲ ಮತ್ತು ನಡೆಯುವುದಕ್ಕೆ ಅವಕಾಶ ನೀಡಿಲ್ಲ. ಈಗಲೂ ಸಮಸ್ಯೆ ಇತ್ಯರ್ಥವಾಗದೆ ಇರುವುದರಿಂದ ನಾವು ಪ್ರಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಮೇ 8ವರೆಗೂ ಬಹಿರಂಗ ಪ್ರಚಾರ ಇದ್ದು, ಅಲ್ಲಿಯವರೆಗೂ ನಾವು ಯಾವೊಬ್ಬ ಅಭ್ಯರ್ಥಿಗೂ ಪ್ರಚಾರಕ್ಕೆ ಅವಕಾಶ ನೀಡುವುದಿಲ್ಲ. ಮತ್ತೆ ಸಮಸ್ಯೆ ಇತ್ಯರ್ಥವಾಗದಿದ್ದರೆ ಮತದಾನ ಬಹಿಷ್ಕಾರ ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ ಗ್ರಾಮಸ್ಥರು.
ಜೆಸ್ಕಾಂ ನಿರ್ಲಕ್ಷ್ಯ :
ಪೈಪಲೈನ್ ಇದೆಯಾದರೂ ಪಂಪ್‌ಸೆಟ್ ಪ್ರಾರಂಭಿಸಲು ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದನ್ನು ಸರಿಪಡಿಸುವಂತೆ ಮೇಲಾಧಿಕಾರಿಗಳು ಸೂಚಿಸಿದ್ದರೂ ಜೆಸ್ಕಾಂ ಅಧಿಕಾರಿಗಳು ಕೇಳುತ್ತಲೇ ಇಲ್ಲ. ಅಲ್ಲದೆ ಪೈಪಲೈನ್ ಕಾಮಗಾರಿ ಪರಿಶೀಲನೆ ಮಾಡಬೇಕಾದ ಗುತ್ತಿಗೆದಾರರು ಇದುವರೆಗೂ ಗ್ರಾಮಕ್ಕೆ ಬಂದಿಲ್ಲ ಮತ್ತು ಸಮಸ್ಯೆ ಆಲಿಸಿಲ್ಲ. ಹೀಗಾಗಿ, ನಾವು ಅನಿವಾರ್ಯವಾಗಿ ಹೋರಾಟ ಮಾಡಲು ಮುಂದಾಗಬೇಕಾಗಿದೆ ಎನ್ನುತ್ತಾರೆ.
ಕಾಕಬಾಳ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಕಿಡಿ
ನಾವು ಈಗಾಗಲೇ ಬಹಿಷ್ಕಾರ ಹಾಕುವುದಾಗಿ ಹೇಳಿದಾಗ ಅಧಿಕಾರಿಗಳು 8 ದಿನಗಳೊಳಗಾಗಿ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಹೇಳಿದ್ದರು.ಆದರೆ, ಇದುವರೆಗೂ ಕಾರ್ಯ ಪ್ರಗತಿ ಕಂಡಿಲ್ಲ. ಹದಿನೈದು ದಿನಗಳಾದರೂ ಯಾರು ಸ್ಪಂದಿಸುತ್ತಿಲ್ಲ. ಹೀಗಾಗಿ, ಈಗ ನಮ್ಮೂರೊಳಗೆ ಯಾರಿಗೂ ಪ್ರಚಾರಕ್ಕೂ ಅವಕಾಶ ನೀಡುವುದಿಲ್ಲ ಮತ್ತು ಮತದಾನ ಬಹಿಷ್ಕಾರ ಮಾಡುವುದು ಅನಿವಾರ್ಯವಾಗುತ್ತದೆ.ಗ್ರಾಮಸ್ಥರೆಲ್ಲರೂ ಸೇರಿಯೇ ಪಕ್ಷಾತೀತವಾಗಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ.
ಮರಿಶಾಂತವೀರಸ್ವಾಮಿ ಚಕ್ಕಡಿ ಅಧ್ಯಕ್ಷರು ಗ್ರಾಪಂ ಬಿಸರಳ್ಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.