ಸೊಕ್ಕಿನ ಮನುಷ್ಯ ಸೋಲು ಕಾಣಬೇಕು; ಲಕ್ಷ್ಮಣ ಸವದಿ ವಿರುದ್ಧ ಗುಡುಗಿದ ಸಾಹುಕಾರ!

By Kannadaprabha News  |  First Published Apr 22, 2023, 10:57 AM IST

ಈ ಚುನಾವಣೆಯಲ್ಲಿ ಸವದಿ ಎಷ್ಟೇ ಖರ್ಚು ಮಾಡಿದರೂ ನೀವು ಮಾತ್ರ ಅವನಿಗೆ ತಕ್ಕ ಉತ್ತರ ನೀಡಬೇಕು. ಸೊಕ್ಕಿನ ಮನುಷ್ಯ ಸೋಲು ಕಾಣಬೇಕು. ಉದ್ದ ಅಂಗಿ ಇದ್ದಿದ್ದು ಗಿಡ್ಡ ಅಂಗಿ ಆಗಬೇಕು. ಬಿಜೆಪಿ ಪಕ್ಷ ಎಂದರೆ ತಾಯಿ ಸಮಾನ ಎನ್ನುತ್ತಿದ್ದ ಸವದಿ ಇಂದು ಮೋಸ ಮಾಡಿ ಕಾಂಗ್ರೆಸ್‌ ಪಕ್ಷಕ್ಕೆ ಹೋಗಿದ್ದಾನೆ. ನಮ್ಮ ಪಕ್ಷದ ಮೇಲಿನ ಪೀಡೆ ಹೋಗಿ ಈಗ ಸ್ವಚ್ಛವಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಸವದಿ ವಿರುದ್ಧ ಏಕವಚನದಲ್ಲಿಯೇ ಗುಡುಗಿದರು.


ಅಥಣಿ (ಏ.22) : ಈ ಚುನಾವಣೆಯಲ್ಲಿ ಸವದಿ ಎಷ್ಟೇ ಖರ್ಚು ಮಾಡಿದರೂ ನೀವು ಮಾತ್ರ ಅವನಿಗೆ ತಕ್ಕ ಉತ್ತರ ನೀಡಬೇಕು. ಸೊಕ್ಕಿನ ಮನುಷ್ಯ ಸೋಲು ಕಾಣಬೇಕು. ಉದ್ದ ಅಂಗಿ ಇದ್ದಿದ್ದು ಗಿಡ್ಡ ಅಂಗಿ ಆಗಬೇಕು. ಬಿಜೆಪಿ ಪಕ್ಷ ಎಂದರೆ ತಾಯಿ ಸಮಾನ ಎನ್ನುತ್ತಿದ್ದ ಸವದಿ ಇಂದು ಮೋಸ ಮಾಡಿ ಕಾಂಗ್ರೆಸ್‌ ಪಕ್ಷಕ್ಕೆ ಹೋಗಿದ್ದಾನೆ. ನಮ್ಮ ಪಕ್ಷದ ಮೇಲಿನ ಪೀಡೆ ಹೋಗಿ ಈಗ ಸ್ವಚ್ಛವಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಸವದಿ ವಿರುದ್ಧ ಏಕವಚನದಲ್ಲಿಯೇ ಗುಡುಗಿದರು.

ಪಟ್ಟಣದ ಸಾಮಾಜಿಕ ಕಾರ್ಯಕರ್ತ, ಕನ್ನಡಪರ ಹೋರಾಟಗಾರ ರವಿ ಪೂಜಾರಿ, ಜೆಡಿಎಸ್‌ ಪಕ್ಷದ ಮುಖಂಡ ಗಿರೀಶ ಬುಟಾಳಿ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿದ್ದು ಅನೇಕ ವರ್ಷ ಅಧಿಕಾರ ಅನುಭವಿಸಿ ಇಂದು ಅನೇಕ ಸುಳ್ಳುಗಳನ್ನು ಹೇಳುವ ಲಕ್ಷ್ಮಣ ಸವದಿ ಒಬ್ಬ ಮಹಾ ಮೊಸಗಾರ, ಆತನನ್ನು ನಂಬಬೇಡಿ. ಈ ಚುನಾವಣೆಯಲ್ಲಿ ಆತನನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು. ನಾನು ಈ ವಾರದಲ್ಲಿ 5ನೇ ಸಲ ಅಥಣಿಗೆ ಭೇಟಿ ನೀಡುತ್ತಿದ್ದೇನೆ. 2018 ರಿಂದ ಎಲ್ಲ ಕಡೆ ಕೈ ಆಡಿಸುತ್ತಿದ್ದಾನೆ. ನಾವು ಗಟ್ಟಿಯಾಗಿ ನಿಂತಿದ್ದೇವೆ ಎಂದರು.

Tap to resize

Latest Videos

ಸಾಹುಕಾರ್‌ ಕೋಟೆಗೆ ಸವದಿ ಲಗ್ಗೆ: ಜಾರಕಿಹೊಳಿ ತಂತ್ರಕ್ಕೆ ಪ್ರತಿತಂತ್ರ!

ಕಳೆದ ಉಪಚುನಾವಣೆಯಲ್ಲಿ ಮಹೇಶ ಕುಮಟಳ್ಳಿ ಸ್ಪರ್ಧಿಸುವಾಗ ಪಕ್ಷದ ಹೈಕಮಾಂಡ್‌ನಲ್ಲಿ ವಲಸಿ ಬಂದ 17 ಜನರಿಗೂ 2023ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂಬುವುದು ಅವತ್ತೇ ಮಾತುಕತೆ ಆಗಿತ್ತು. ಆದರೆ, ಲಕ್ಷ್ಮಣ ಸವದಿ ಪಕ್ಷದ ನಾಯಕರು ನನಗೆ ಟಿಕೆಟ್‌ ನೀಡುತ್ತೇನೆಂದು ಮೋಸ ಮಾಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾನೆ. ನಿಜವಾಗಲೂ ಲಕ್ಷ್ಮಣ ಸವದಿ ಅವರಿಂದ ನನಗೂ ಮತ್ತು ಮಹೇಶ ಕುಮಟಳ್ಳಿಗೆ ಮೋಸವಾಗಿದೆ. ಅನೇಕ ವರ್ಷ ಅಧಿಕಾರ ಅನುಭವಿಸಿದ ಬಿಜೆಪಿ ಪಕ್ಷಕ್ಕೂ ಮೋಸ ಮಾಡಿದ್ದಾನೆ. ಇವರಿಂದ ಅನೇಕ ರಾಜಕೀಯ ನಾಯಕರಿಗೆ ಮೋಸವಾಗಿದೆ. ಬಿ.ಎಲ….ಪಾಟೀಲ…, ಲೀಲಾವತಿದೇವಿ ಆರ್‌.ಪ್ರಸಾದ್‌, ದಿ.ಉಮೇಶ ಕತ್ತಿ ಅವರಿಗೂ ಸವದಿ ಮೋಸ ಮಾಡಿದ್ದಾನೆ. ಅಲ್ಲದೆ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಸಹ ಮೋಸ ಮಾಡಿದ್ದಾನೆ ಎಂದು ಹರಿಹಾಯ್ದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳನ್ನು ತೊರೆದು ಇಂದು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ತಾವೆಲ್ಲರೂ ಒಗ್ಗಟ್ಟಿನಿಂದ ಪ್ರತಿ ವಾರ್ಡ್‌ ಮತ್ತು ಬೂತ್‌ಗಳಲ್ಲಿ ಬಿಜೆಪಿ ಸರ್ಕಾರದ ಸಾಧನೆ ಮತ್ತು ಮಹೇಶ ಕುಮಟಳ್ಳಿ ಅವರು ಮತಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಮನೆ ಮನಗಳಿಗೆ ಮನವರಿಕೆ ಮಾಡುವ ಮೂಲಕ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು. ಅವರ ಗೆದ್ದ ನಂತರ ಇನ್ನುಳಿದ ಎಲ್ಲ ಕಾಮಗಾರಿಗಳನ್ನು ಮತ್ತು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ತಾಲೂಕಿನ ಅನೇಕ ಪಿಕೆಪಿಎಸ್‌ ಸೊಸೈಟಿಗಳಲ್ಲಿ ತುಂಬಾ ಅವ್ಯವಹಾರ ಆಗಿದೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ತನಿಖೆ ಮಾಡಿಸುತ್ತೇವೆ. ಅವ್ಯವಹಾರ ಕಂಡು ಬಂದ ಸೊಸೈಟಿಗಳನ್ನು ಸೂರ್ಪ ಸೀಡ್‌ ಮಾಡಿ ಮತ್ತೆ ಚುನಾವಣೆ ಚುನಾವಣೆ ನಡೆಸುತ್ತೇವೆ. ಲಕ್ಷ್ಮಣ ಸವದಿಯನ್ನು ಡಿಸಿಸಿ ಬ್ಯಾಂಕ್‌ ಆಯ್ಕೆ ಸಂದರ್ಭ ನಾವು ಅವನನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ. ಇದರಿಂದಾಗಿ ಎಲ್ಲ ಸಹಕಾರಿ ಸಂಘಗಳಲ್ಲಿ ರೈತರಿಗೆ ಮೋಸವಾಗುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ರವಿ ಪೂಜಾರಿ ಹಾಗೂ ಜೆಡಿಎಸ್‌ ಪಕ್ಷೇತರರು ಬಿಜೆಪಿ ಸೇರ್ಪಡೆಗೊಂಡ ಗಿರೀಶ ಬುಟಾಳಿ ಅವರ ಅನೇಕ ಬೆಂಬಲಿಗರು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ರವಿ ಪೂಜಾರಿ ಮಾಜಿ ಸಚಿವ ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ, ಮಹೇಶ ಕುಮಟಳ್ಳಿ ಅವರನ್ನು ಸನ್ಮಾನಿಸಿದರು. ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ರಾಜೇಶ ನೆರ್ಲಿ, ಅಥಣಿ ಮಂಡಲ ಅಧ್ಯಕ್ಷ ಡಾ. ರವಿ ಸಂಕ, ಮುಖಂಡರಾದ ಅಪ್ಪಾಸಾಹೇಬ್‌ ಅವತಾಡೆ, ನಿಂಗಪ್ಪ ನಂದೇಶ್ವರ, ಸಿದ್ದಪ್ಪ ಮುದುಕಣ್ಣನವರ, ಪ್ರಭಾಕರ ಚವ್ಹಾಣ, ಗೀತಾ ತೋರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸಮಸ್ಯೆಗಳಿಗೆ ಸ್ಪಂದನೆ ಮಾಡುವುದು ನಮ್ಮ ಗುರಿ: ಬಾಲಚಂದ್ರ ಜಾರಕಿಹೊಳಿ

ನಾನು ಇನ್ನೂ ಕಾಂಗ್ರೆಸ್‌ ಪಕ್ಷದಲ್ಲಿದ್ದಾಗ ಲಕ್ಷ್ಮಣ ಸವದಿ ತುಂಬಾ ದೊಡ್ಡ ಮನುಷ್ಯ ಎಂದು ಭಯ ಪಟ್ಟಿದ್ದೆ. ಆದರೆ, ನಾವೆಲ್ಲರೂ ಬಿಜೆಪಿ ಪಕ್ಷಕ್ಕೆ ಬಂದ ನಂತರ ಸವದಿ ಬೋಗಸ್‌ ಇದ್ದಾನೆ ಎಂದು ಅರ್ಥವಾಯಿತು. ರಾಜ್ಯದ ಉಪಮುಖ್ಯಮಂತ್ರಿ ಸ್ಥಾನ ನೀಡಿದ ಬಿಜೆಪಿ ಪಕ್ಷವನ್ನು ತೊರೆದು ಪಕ್ಷಕ್ಕೆ ಮೋಸ ಮಾಡಿ ಲಕ್ಷ್ಮಣ ಸವದಿ ಅವರನ್ನು ನೀವೆಲ್ಲರೂ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು.

ರಮೇಶ ಜಾರಕಿಹೊಳಿ, ಮಾಜಿ ಸಚಿವ.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾಡಿರುವ ಸಾಧನೆ ಹಾಗೂ ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ನಾನು ಪಕ್ಷವನ್ನು ಸೇರುತಿದ್ದೇನೆ. ಅಥಣಿ ಮತಕ್ಷೇತ್ರದಲ್ಲಿ ಸರಳ ಸಜ್ಜನಿಕೆಯ ಶಾಸಕರಾಗಿ ಮಹೇಶ ಕುಮಟಳ್ಳಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ.

-ರವಿ ಪೂಜಾರಿ, ಬಿಜೆಪಿ ಸೇರ್ಪಡೆಗೊಂಡ ಸಾಮಾಜಿಕ ಕಾರ್ಯಕರ್ತ.

click me!