ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ. ಏ. 24ರಂದು ಹಾನಗಲ್ಲಿಗೆ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ನಡೆಸಲಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬಂದಂತಾಗಿದೆ.
ನಾರಾಯಣ ಹೆಗಡೆ
ಹಾವೇರಿ (ಏ.23) : ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ. ಏ. 24ರಂದು ಹಾನಗಲ್ಲಿಗೆ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ನಡೆಸಲಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬಂದಂತಾಗಿದೆ.
undefined
ರಾಹುಲ್ ಗಾಂಧಿ(Rahul gandhi) ಅಂದು ಸಂಜೆ 5 ಗಂಟೆಗೆ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಲಿದ್ದು, ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಇದು ಸಹಜವಾಗಿಯೇ ಆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರಲ್ಲಿ ಉತ್ಸಾಹ ತಂದಿದೆ.
ಕೆಲ ದಿನಗಳ ಹಿಂದೆ ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಮಲ ಪಡೆ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಆಗಮಿಸುತ್ತಿರುವುದು ಕೈ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚುವಂತೆ ಮಾಡಿದೆ.
ಟಿಕೆಟ್ ಹಂಚಿಕೆ ಬಳಿಕ ಎದ್ದಿದ್ದ ಬಂಡಾಯ ಒಂದು ಹಂತಕ್ಕೆ ಬಂದಿದ್ದು, ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಪಕ್ಷ ತ್ಯಜಿಸಿದ್ದರೆ, ಇನ್ನು ಕೆಲವು ಕಡೆ ರಾಜಿಯಾಗಿದ್ದಾರೆ. ಆದರೆ, ಹಾನಗಲ್ಲಿನಲ್ಲಿ ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಮುನ್ನಡೆಸಿದ್ದ ಮನೋಹರ ತಹಶೀಲ್ದಾರ್ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಇದೇ ಕ್ಷೇತ್ರಕ್ಕೆ ಏ. 24ರಂದು ರಾಹುಲ್ ಗಾಂಧಿ ಭೇಟಿ ನೀಡಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ರೋಡ್ ಶೋ ನಡೆಸುತ್ತಿರುವುದು ವಿಶೇಷ. ಹಾನಗಲ್ಲ ಕ್ಷೇತ್ರವಷ್ಟೇ ಅಲ್ಲದೇ ಜಿಲ್ಲೆಯ 6 ಕ್ಷೇತ್ರಗಳಿಗೂ ರಾಹುಲ್ ಗಾಂಧಿ ಬೇಟಿ ಟಾನಿಕ್ ಆಗುವ ನಿರೀಕ್ಷೆ ಕಾಂಗ್ರೆಸ್ಸಿಗರದು.
ಐದು ಕ್ಷೇತ್ರಗಳಲ್ಲಿ ಬಿಜೆಪಿ:
2018ರ ಚುನಾವಣೆಯಲ್ಲಿ ಜಿಲ್ಲೆಯ 6 ಕ್ಷೇತ್ರಗಳ ಪೈಕಿ ನಾಲ್ಕು ಕಡೆ ಬಿಜೆಪಿ ಗೆದ್ದಿತ್ತು. ಶಿಗ್ಗಾವಿ, ಹಾವೇರಿ, ಬ್ಯಾಡಗಿ ಮತ್ತು ಹಾನಗಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿತ್ತು. ರಾಣಿಬೆನ್ನೂರು ಕ್ಷೇತ್ರದÜಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದರೆ ಹಿರೇಕೆರೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ಬಿ.ಸಿ. ಪಾಟೀಲ ಕಾಂಗ್ರೆಸ್ಸಿನಿಂದ ಗೆದ್ದಿದ್ದ ಜಿಲ್ಲೆಯ ಏಕೈಕ ಶಾಸಕ ಎನಿಸಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ಸಿನ ಏಕೈಕ ಶಾಸಕರಾಗಿದ್ದ ಬಿ.ಸಿ. ಪಾಟೀಲ ಆ ಪಕ್ಷಕ್ಕೆ ರಾಜೀನಾಮೆ ನೀಡಿದರೆ, ರಾಣಿಬೆನ್ನೂರು ಕ್ಷೇತ್ರದಲ್ಲೂ ಆರ್. ಶಂಕರ್ ಶಾಸಕ ಸ್ಥಾನ ಕಳೆದುಕೊಂಡರು. ಇದರಿಂದ ಈ ಎರಡೂ ಕ್ಷೇತ್ರಗಳಿಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಎರಡೂ ಕಡೆ ಬಿಜೆಪಿ ಗೆಲ್ಲುವ ಮೂಲಕ ಇಡೀ ಜಿಲ್ಲೆ ಕಮಲದ ಭದ್ರ ಕೋಟೆ ಎಂಬುದನ್ನು ಸಾಬೀತು ಪಡಿಸಿತು.
ಆ ಬಳಿಕ ಹಾನಗಲ್ಲ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಸಿ.ಎಂ. ಉದಾಸಿ ನಿಧನದಿಂದ ತೆರವಾದ ಸ್ಥಾನಕ್ಕೆ 2021ರ ನವೆಂಬರ್‌ನಲ್ಲಿ ಉಪಚುನಾವಣೆ ನಡೆಯುವಂತಾಯಿತು. ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಹಾನಗಲ್ಲ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು. ಕಾಂಗ್ರೆಸ್ ಕೂಡ ಗಂಭೀರವಾಗಿ ಪರಿಗಣಿಸಿತ್ತು. ಜಿದ್ದಾಜಿದ್ದಿ ಹೋರಾಟದಲ್ಲಿ ಶ್ರೀನಿವಾಸ ಮಾನೆ ಗೆಲುವು ಜಿಲ್ಲೆಯಷ್ಟೇ ಅಲ್ಲದೇ ರಾಜ್ಯ ಕಾಂಗ್ರೆಸ್ಸಿಗೂ ಟಾನಿಕ್ ಆಗಿ ಪರಿಣಮಿಸಿತ್ತು. ಬಿಜೆಪಿ ವಶಕ್ಕೆ ಹೋಗಿದ್ದ ಎಲ್ಲ ಕ್ಷೇತ್ರಗಳಲ್ಲಿ ಒಂದನ್ನು ಮರಳಿ ಪಡೆಯುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗೆ ಇರುವ ಅಸ್ತಿತ್ವವನ್ನು ತೋರಿಸಿತ್ತು. ಈಗ 2013ರ ಫಲಿತಾಂಶ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಯತ್ನ ನಡೆಸಿದೆ.
ಕೈನಲ್ಲಿ ಉತ್ಸಾಹ:
2018ರ ಚುನಾವಣೆಗೆ ಹೋಲಿಸಿದರೆ ಈಗ ಜಿಲ್ಲೆಯಲ್ಲಿ ಕಾಂಗ್ರೆಸ್ ಚೇತರಿಸಿಕೊಂಡಿದೆ. ಆದರೂ, ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಬಳಿಕ ಎದ್ದ ಬಂಡಾಯ, ಭಿನ್ನಮತಗಳಿಂದ ಸ್ವಲ್ಪ ಹಿನ್ನಡೆಯಾಗುವಂತಾಗಿತ್ತು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದು, ಇದೇ ವೇಳೆ ರಾಹುಲ್ ಗಾಂಧಿ ಜಿಲ್ಲೆಗೆ ಆಗಮಿಸುತ್ತಿರುವುದು ಕೈ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಉಪಚುನಾವಣೆಯಲ್ಲಿ ಇಡೀ ಸರ್ಕಾರವನ್ನು ಎದುರಿಸಿ ಗೆದ್ದ ಶ್ರೀನಿವಾಸ ಮಾನೆ ಪರ ಪ್ರಚಾರಕ್ಕೆ ಆಗಮಿಸುತ್ತಿರುವುದರ ಹಿಂದೆಯೂ ಕೈ ಲೆಕ್ಕಾಚಾರ ಅಡಗಿದೆ. ಮನೋಹರ ತಹಶೀಲ್ದಾರ್ ಜೆಡಿಎಸ್‌ನಿಂದ ಸ್ಪರ್ಧಿಸಿರುವುದರಿಂದ ಆಗುವ ಹಾನಿ ತಪ್ಪಿಸಲು ರಾಹುಲ್ ಗಾಂಧಿ ಭೇಟಿ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಏ. 24ರಂದೇ ಜಿಲ್ಲೆಗೆ ರಾಹುಲ್ ಗಾಂಧಿ ಆಗಮಿಸಲಿರುವುದು ಸ್ಥಳೀಯ ಮುಖಂಡರನ್ನು ಒಗ್ಗೂಡಿಸುವ ಸಾಧ್ಯತೆಯಿದೆ.
ನಾಳೆ ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಭೇಟಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಏ. 24ರಂದು ಹಾನಗಲ್ಲಿಗೆ ಆಗಮಿಸಲಿದ್ದಾರೆ. ಅಂದು ಸಂಜೆ 5ಕ್ಕೆ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯದ ನಾಯಕರೂ ಭಾಗವಹಿಸಲಿದ್ದಾರೆ. ರಾಹುಲ್ ಭೇಟಿಯಿಂದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬರಲಿದೆ.
ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ