ಇಲ್ಲಿನ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವಿ.ನಾಯಕರನ್ನು ಬೆಂಬಲಿಸಿ ಭಾರಿ ಅಂತರದಿಂದ ಗೆಲ್ಲಿಸುವಂತೆ ಮತದಾರರಲ್ಲಿ ಕರುನಾಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮನವಿ ಮಾಡಿದರು.
ಮಾನ್ವಿ (ಮೇ.5): ಇಲ್ಲಿನ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವಿ.ನಾಯಕರನ್ನು ಬೆಂಬಲಿಸಿ ಭಾರಿ ಅಂತರದಿಂದ ಗೆಲ್ಲಿಸುವಂತೆ ಮತದಾರರಲ್ಲಿ ಕರುನಾಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮನವಿ ಮಾಡಿದರು.
ಮಾನ್ವಿ ವಿಧಾನಸಭೆ ಕ್ಷೇತ್ರ(Manvi assembly constituency)ದ ಬಿಜೆಪಿ ಅಭ್ಯರ್ಥಿ ಬಿ.ವಿ.ನಾಯಕ(BV Nayak BJP Candidate) ಪರ ಚುನಾವಣಾ ಪ್ರಚಾರಕ್ಕೆ ಮಾನ್ವಿಗೆ ಆಗಮಿಸಿದ್ದ ಕಿಚ್ಚ ಸುದೀಪ್ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾರ್ಲಾಪಣೆ ಸಲ್ಲಿಸಿ ನೆರದಿದ್ದ ಜನಸ್ತೋಮ ಉದ್ದೇಶಿಸಿ ಮಾತನಾಡಿದರು.
ಮಾನ್ವಿ ವಿಧಾನಸಭೆ ಕ್ಷೇತ್ರದ ಮತದಾರರು ಪ್ರಥಮ ಬಾರಿಗೆ ನೂರಕ್ಕೆ ನೂರರಷ್ಟುಬಿಜೆಪಿಯನ್ನು ಗೆಲ್ಲಿಸಲಿದ್ದಾರೆ. ನಿಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಜನತೆಗೆ ಮತ್ತು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಎಂದು ಅಭ್ಯರ್ಥಿ ಬಿ.ವಿ. ನಾಯಕಗೆ ಸುದೀಪ್ (Kichcha sudeep)ಸೂಚಿಸಿದರು.
Karnataka election 2023: ಮಾನ್ವಿಗಿಂದು ಮಾಜಿ ಸಿಎಂ ಸಿದ್ದರಾಮಯ್ಯ: ಬೋಸರಾಜು
ಮೇ 10ರಂದು ನಡೆಯುವ ಮತದಾನ ದಿನದಂದು ಬಿಜೆಪಿ ಅಭ್ಯರ್ಥಿ ಬಿ.ವಿ.ನಾಯಕರ ಚಿನ್ಹೆ ಕ್ರಮ ಸಂಖ್ಯೆ 1 ಕಮಲದ ಗುರುತು ಇರುವ ಗುಂಡಿ ಒತ್ತುವ ಮೂಲಕ ಮತ ನೀಡಿ ಆರಿಸಿ ತನ್ನಿ. ಈ ಕ್ಷೇತ್ರದಿಂದ ಬಿ.ವಿ.ನಾಯಕರು ಗೆದ್ದ ನಂತರ ಕೆಲಸ ಮಾಡದಿದ್ದಲ್ಲಿ ನನಗೆ ತಿಳಿಸಿ. ನಾನು ಅಭಿವೃದ್ಧಿ ಕೆಲಸ ಮಾಡಿಸಿಕೊಡುತ್ತೇನೆ ಎಂದು ಅಭಿಮಾನಿಗಳಿಗೆ ಹಾಗೂ ಮತದಾರರಿಗೆ ಆಶ್ವಾಸನೆಯಿತ್ತರು.
ಮಾನ್ವಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವಿ.ನಾಯಕ ಮಾತನಾಡಿ, ನಾನು ಆರಿಸಿ ಬಂದ ನಂತರ ಮಾನ್ವಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಿರಾಸೆ:
ಚುನಾವಣಾ ಪ್ರಚಾರ ಹಿನ್ನಲೆಯಲ್ಲಿ ರೋಡ್ ಶೋಗೆ ಆಗಮಿಸಿದ್ದ ಕಿಚ್ಚ ಸುದೀಪ್ ವಾಲ್ಮೀಕಿ ವೃತ್ತದಿಂದ ಬಸವ ವೃತ್ತ ಮತ್ತು ಅಂಬೇಡ್ಕರ್ ವೃತ್ತದವರಗೆ 30 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ನೆರೆದಿದ್ದರು. ಭಾರಿ ಜನಸಂದಣಿಯಿಂದಾಗಿ ರೋಡ್ ಶೋ ಮಾಡಲಾಗದೆ ರೋಡ್ ಶೋ ಅರ್ಧಕ್ಕೆ ಮೊಟಕುಗೊಳಿಸಿ ಮಸ್ಕಿಗೆ ಹೊರಟಿದ್ದರಿಂದ ಸುಮಾರು 2 ಕಿ.ಮೀ.ನಷ್ಟುದಾರಿಯುದ್ದಕ್ಕೂ ನಿಂತಿದ್ದ ಅಭಿಮಾನಿಗಳಿಗೆ ಬೇಸರ ತಂದಿತು.
ಈ ವೇಳೆ ಬಿಜೆಪಿ ಅಭ್ಯರ್ಥಿ ಬಿ.ವಿ.ನಾಯಕ, ಎಂಎಲ್‌ಸಿ ಎ.ಚಲುವಾದಿ ನಾರಾಯಣಸ್ವಾಮಿ(Chaluvadi narayanaswamy), ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರನಾಯಕ, ಮುಖಂಡ ಜೆ.ಶರಣಪ್ಪಗೌಡ ಸಿರವಾರ ಸೇರಿದಂತೆ ಪಕ್ಷದ ಅನೇಕ ಮುಖಂಡರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಲಾಠಿ ಚಾರ್ಜ್:
ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ಮಾನ್ವಿ ಹಾಗೂ ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಮತ ಪ್ರಚಾರ ಕೈಗೊಂಡರು. ಸುದೀಪ್ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ನೆಚ್ಚಿನ ನಟನ ಕಾಣಲು ಮುಗಿಬಿದ್ದ ಅಭಿಮಾನಿಗಳು ಪ್ರಚಾರದ ವೇಳೆ ಕಿಕ್ಕಿರಿದು ನೆರೆದರು. ಅಭಿಮಾನಿಗಳು ಏಕಾಏಕಿ ಹೆಲಿಪ್ಯಾಡ್‌ಗೆ ನುಗ್ಗಿದ ಘಟನೆಯೂ ದೇವದುರ್ಗದಲ್ಲಿ ನಡೆಯಿತು. ಈ ವೇಳೆ ಪೊಲೀಸರು, ಮಿಲಿಟರಿ ಪಡೆ ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು.
Karnataka election 2023: ನಾಯಕರ ನಾಡು ಮಾನ್ವಿ ಕ್ಷೇತ್ರದಲ್ಲಿ ಅರಳದ ಕಮಲ !
ದೇವದುರ್ಗದಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡನಾಯಕ ಪರ ಮತಯಾಚನೆ ಮಾಡಿ, ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬೃಹತ್ ರೋಡ್ ಶೋ ನಡೆಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಕಿಚ್ಚನಿಗೆ ಸಾಥ್ ನೀಡಿದರು.
ಬಳಿಕ, ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ರೋಡ್ ನಡೆಸಿದ ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಪರ ಮತಯಾಚನೆ ಮಾಡಿದರು. ಈ ವೇಳೆ ಸಂಸದ ರಾಜಾ ಅಮರೇಶ್ವರ ನಾಯಕ ಜೊತೆಯಾದರು.