ಕೊಟ್ಟ ಮಾತು ಉಳಿಸಿಕೊಳ್ಳದೇ ಮೋಸ ಮಾಡಿದ ನಾಯಕರು: ಟಿಕೆಟ್ ಕೈತಪ್ಪಿದ್ದಕ್ಕೆ ಲಕ್ಷ್ಮಣ ಸವದಿ ಕಣ್ಣೀರು!

By Ravi Janekal  |  First Published Apr 12, 2023, 1:59 AM IST

ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಸುದ್ದಿ ಹರಡಿದೆ. ಈ ಮಧ್ಯೆ, ಮಂಗಳವಾರ ಸಂಜೆ ಅಥಣಿಯಲ್ಲಿ ನಡೆದ ಬಣಜಿಗರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸವದಿ, ಟಿಕೆಟ್‌ ಕೈತಪ್ಪಿದ್ದಕ್ಕೆ ದು:ಖಿತರಾಗಿ ಕಣ್ಣೀರು ಹಾಕಿದರು.


ಅಥಣಿ/ಕೊಪ್ಪಳ (ಏ.12) : ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಸುದ್ದಿ ಹರಡಿದೆ. ಈ ಮಧ್ಯೆ, ಮಂಗಳವಾರ ಸಂಜೆ ಅಥಣಿಯಲ್ಲಿ ನಡೆದ ಬಣಜಿಗರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸವದಿ, ಟಿಕೆಟ್‌ ಕೈತಪ್ಪಿದ್ದಕ್ಕೆ ದು:ಖಿತರಾಗಿ ಕಣ್ಣೀರು ಹಾಕಿದರು.

ಅಥಣಿಯಲ್ಲಿ ಮಹೇಶ್‌ ಕುಮಟ್ಟಳ್ಳಿ(Mahesh kumatahalli) ಹಾಗೂ ಲಕ್ಷ್ಮಣ ಸವದಿ(Laxman savadi) ಮಧ್ಯೆ ಟಿಕೆಟ್‌ಗೆ ತೀವ್ರ ಪೈಪೋಟಿಯಿತ್ತು. ಮಹೇಶ್‌ ಕುಮಟ್ಟಳ್ಳಿಗೆ ಬಿಜೆಪಿಯಿಂದ ಟಿಕೆಟ್‌ ನೀಡಲಾಗಿದೆ. ಹೀಗಾಗಿ, ಅಸಮಾಧಾನಗೊಂಡಿರುವ ಸವದಿ ಕಾಂಗ್ರೆಸ್‌(Congress) ಸೇರಲಿದ್ದಾರೆ. ಸವದಿ ಹಾಗೂ ಕಾಂಗ್ರೆಸ್‌ನ ಮಾಜಿ ಸಚಿವ ಬಸವರಾಜ ರಾಯರಡ್ಡಿ(Basavaraj Rayareddy) ಅವರು ಇತ್ತೀಚೆಗೆ ಸಂಬಂಧಿಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸವದಿಯವರು ಬಸವರಾಜ ರಾಯರಡ್ಡಿ ಅವರೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯ ಮುಂದುವರಿದ ಭಾಗವಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರ(Koppal assembly constituency)ದ ಕಾಂಗ್ರೆಸ್‌ ನಿಯೋಜಿತ ಅಭ್ಯರ್ಥಿ ಹಾಗೂ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ(Raghavendra hitnal) ಅವರು ದೆಹಲಿಯಲ್ಲಿ ಸಿದ್ದರಾಮಯ್ಯ(Siddaramaiah) ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Latest Videos

undefined

 

ಬಿಜೆಪಿ ಟಿಕೆಟ್‌ಗಾಗಿ ರಮೇಶ್ ಜಾರಕಿಹೊಳಿ-ಲಕ್ಷ್ಮಣ್ ಸವದಿ ಪೈಪೋಟಿ: ಅಥಣಿ ಧಣಿ ಯಾರು?

ಈ ಮಧ್ಯೆ, ರಾಘವೇಂದ್ರ ಹಿಟ್ನಾಳ ಅವರು ದಿಢೀರ್‌ ಆಗಿ ದೆಹಲಿಗೆ ತೆರಳಿರುವುದು ಈ ವರದಿಗೆ ಮತ್ತಷ್ಟುಬಲ ಬಂದಿದೆ.

ಕೊಟ್ಟು ಮಾತು ಉಳಿಸಿಕೊಳ್ಳದೇ ಮೋಸ ಮಾಡಿದ ನಾಯಕರು

ಅಥಣಿ:  ಭಾರತೀಯ ಜನತಾ ಪಕ್ಷವನ್ನು ನನ್ನ ರಾಜಕೀಯ ಜೀವನದಲ್ಲಿ ತಾಯಿ ಸ್ವರೂಪವಾಗಿ ನೋಡಿದ್ದೇನೆ. ನನ್ನ ತಾಯಿ ನನಗೆ ಮೋಸ ಮಾಡುವುದಿಲ್ಲ ಎಂದು ನಂಬಿದ್ದೆ. ಆದರೆ, ರಾಜ್ಯ ರಾಜಕೀಯ ನಾಯಕರು ನನಗೆ ಕೊಟ್ಟು ಮಾತು ಉಳಿಸಿಕೊಳ್ಳದೇ ಮೋಸ ಮಾಡಿದರು ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಅಸಮಾಧಾನ ಹೊರಹಾಕಿದರು.

ಪಟ್ಟಣದ ಶಿವಣಗಿ ಸಂಸ್ಕೃತಿಕ ಭವನದಲ್ಲಿ ಮಂಗಳವಾರ ಆದಿಬಣಜಿಗ ಸಮುದಾಯದ ಸಮಾವೇಶದಲ್ಲಿ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಒಬ್ಬ ನಿಷ್ಠಾವಂತ ಕಾರ್ಯಕರ್ತರ ಪಕ್ಷಕ್ಕೆ ನಿಷ್ಠೆಯಾಗಿ ದುಡಿದರೆ ಎತ್ತರ ಮಟ್ಟದ ಸ್ಥಾನಗಳಲ್ಲಿ ಹೋಗಬಹುದು ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೆ. ಇದು ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ ಸಾಧ್ಯ. ಪಕ್ಷ ಒಳ್ಳೆಯದೇ ಇದೆ. ಆದರೆ, ಕೆಲವು ನಾಯಕರು ಪಕ್ಷ ನಿಷ್ಠೆಯನ್ನು ಮರೆತು ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ನನ್ನ ತಂದೆಯನ್ನು ಕಳೆದುಕೊಂಡ ನಂತರ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ನನ್ನ ತಂದೆಗೆ ಸ್ವರೂಪದಲ್ಲಿ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೆ. ಅವರು ನನಗೆ ಕಳೆದ ಉಪಚುನಾವಣೆಯಲ್ಲಿ ಕೊಟ್ಟಮಾತಿನಂತೆ 2023ರ ಈ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್‌ ನೀಡುತ್ತೇನೆ ಎಂದು ಹೇಳಿ ಕೊಟ್ಟಮಾತಿನಂತೆ ನಡೆದುಕೊಳ್ಳದೇ ವಚನ ಭ್ರಷ್ಟರಾಗಿದ್ದಾರೆ. ಶ್ರೀಧರ್ಮಸ್ಥಳದ ಮಂಜುನಾಥನ ಸಾಕ್ಷಿಯಾಗಿ ಯಡಿಯೂರಪ್ಪ, ಈಶ್ವರಪ್ಪ ಮತ್ತು ಜಗದೀಶ್‌ ಶೆಟ್ಟರ್‌ 3 ನಾಯಕರು ಕೂಡಿಕೊಂಡು ನನಗೆ ಈ ಮಾತು ನೀಡಿದ್ದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ವಚನಭ್ರಷ್ಟರು ಎಂದು ಹೇಳುವ ಯಡಿಯೂರಪ್ಪನವರು ಇಂದು ಆತ್ಮಾವಲೋಕನ ಮಾಡಿಕೊಂಡು ಕೊಟ್ಟಮಾತು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಅಸಮಧಾನ ವ್ಯಕ್ತಪಡಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ(CM Basavaraj bommai) ಅವರು ನನಗೆ ಆತ್ಮೀಯ ಸ್ನೇಹಿತರು. ನನ್ನ ಗೆಳೆಯ ಮುಖ್ಯಮಂತ್ರಿ ಆಗಿದ್ದಾನೆ ಎಂಬ ಹೆಮ್ಮೆ ನನಗೆ ಇತ್ತು. ಆದರೆ, ಅದೇ ಸ್ನೇಹಿತ ಅದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವತ್ತು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಣ ಸವದಿ ಅವರಿಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಹೇಳಿರುವುದು ನನ್ನ ಮನಸ್ಸಿಗೆ ಬೇಸರ ತಂದಿತು. ಸಿಎಂ ಬಸವರಾಜ ಬೊಮ್ಮಾಯಿ ಅವರು ನಾನು ವಿಧಾನ ಪರಿಷತ್‌ ಸದಸ್ಯ ಅವಧಿ ಮುಗಿದ ಬಳಿಕ ಮುಂದುವರಿಯುವ ಬಗ್ಗೆ ಅಭಿಪ್ರಾಯ ಕೇಳಿದರು. ಇದರಲ್ಲಿ ನನಗೆ ಇಚ್ಚೆ ಇಲ್ಲ ಎಂದು ಹೇಳಿದ್ದೆ. ಆಗ ಅವರೇ ಇನ್ನೂ 5 ವರ್ಷ ಅವಧಿ ಇದೆ ಮುಂದುವರೆಯಿರಿ, 2023ರ ವಿಧಾನಸಭಾ ಚುನಾವಣೆ ಬಂದ ನಂತರ ಉಳಿದ ಅವಧಿಯನ್ನು ಮಹೇಶ್‌ ಕುಮಟಳ್ಳಿ ಅವರಿಗೆ ನೀಡಿ ನಿಮಗೆ ಸ್ಪರ್ಧಿಸಲು ಅವಕಾಶ ನೀಡುವ ವ್ಯವಸ್ಥೆ ಮಾಡೋಣ ಎಂದು ಹೇಳಿದರು. ಆದರೆ, ಮುಖ್ಯಮಂತ್ರಿಗಳು ಇಂದು ಹಾಗೆ ಮಾಡಲಿಲ್ಲ ಎಂದು ನೋವು ವ್ಯಕ್ತಪಡಿಸಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಮುಂದಿನ ರಾಜಕೀಯ ಜೀವನಕ್ಕೆ ಶುಭ ಹಾರೈಸಿದರು.

ಕಳೆದ 30 ವರ್ಷಗಳಿಂದ ನನಗೆ ಆಶೀರ್ವಾದ ಮಾಡಿದ ಅಥಣಿ ಮತಕ್ಷೇತ್ರದ ಜನತೆಗೆ ಯಾವತ್ತೂ ನಾನು ಚಿರಋುಣಿಯಾಗಿದ್ದೇನೆ. ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕರಾಗಿ, ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದೇನೆ. ಇಂದು ನನ್ನ ರಾಜಕೀಯ ಜೀವನಕ್ಕೆ ಸಂಕಷ್ಟಎದುರಾಗಿದೆ. ನಿಮ್ಮೆಲ್ಲರ ಅಭಿಪ್ರಾಯ ನನಗೆ ಅವಶ್ಯಕತೆ ಇದೆ. ವಿವಿಧ ಸಮುದಾಯಗಳ ಅಭಿಪ್ರಾಯವನ್ನು ಈಗಾಗಲೇ ನಾನು ಸಂಗ್ರಹಿಸಿದ್ದೇನೆ. ಎಲ್ಲ ಸಮುದಾಯಗಳು ಬೆಂಬಲವನ್ನು ಸೂಚಿಸಿದ್ದೀರಿ. ನಿಮ್ಮೆಲ್ಲರ ಬೆಂಬಲಕ್ಕೆ ನಾನು ಚಿರಋುಣಿಯಾಗಿದ್ದೇನೆ ಎಂದರು.

ಸಮಾರಂಭದಲ್ಲಿ ಆದಿ ಬಣಜಿಗ ಸಮುದಾಯದ ಮುಖಂಡರಾದ ಅಜ್ಜಪ್ಪಣ್ಣ ನಾಗರಾಳೆ, ಚಂದ್ರಶೇಖರ ಬಳ್ಳೊಳ್ಳಿ, ಸಿ.ಎಸ್‌.ನೇಮಗೌಡ, ಸೈಬಣ್ಣ ಕಮತಗಿ, ಮಲ್ಲು ಡಂಗಿ, ಶಂಕರ್‌ ಪೂಜಾರಿ, ಮಹದೇವ್‌ ಬಿರಾದಾರ್‌, ಲಕ್ಷ್ಮಣ ಮಗದುಮ…, ಗುರುಪಾದ ಚೌಗುಲ, ಈರಗೌಡ ಪಾಟೀಲ…, ರಾಜು ಅಲಬಾಳ, ಆರ್‌.ಆರ್‌.ತೆಲಸಂಗ, ಕುಮಾರ ಗೊಟ್ಟಿ, ರವಿ ಕೋಟಿ, ಗೀತಾ ತೋರಿ, ಸತೀಶ್‌ ಪಾಟೀಲ…, ಅಪ್ಪಾಸಾಬ ಪಾಟೀಲ, ವಿಜಯ ಹುದ್ದಾರ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಅಮುಲ್‌ನಂಥ 10 ಸಂಸ್ಥೆಗಳು ಬಂದ್ರೂ ಕೆಎಂಎಫ್‌ಗೆ ಪೈಪೋಟಿ ಸಾಧ್ಯವಿಲ್ಲ: ಬಾಲಚಂದ್ರ ಜಾರಕಿಹೊಳಿ

ಏ.13ರಂದು ಸಂಜೆ 4 ಗಂಟೆಗೆ ಅಥಣಿ ಪಟ್ಟಣದ ಶಿವಯೋಗಿಗಳ ಪಾವನ ಕ್ಷೇತ್ರ ವಿದ್ಯಾಪೀಠ ಶಾಲೆಯ ಆವರಣದಲ್ಲಿ ಮತಕ್ಷೇತ್ರದ ಜನತೆಯ ಅಭಿಪ್ರಾಯ ಸಂಗ್ರಹಿಸಿ ರಾಜಕೀಯ ದಿಕ್ಕು ಕಂಡುಕೊಳ್ಳಲು ಬಯಸಿದ್ದೇನೆ. ಮತಕ್ಷೇತ್ರದ ಎಲ್ಲ ಸಮುದಾಯಗಳ ನಾಯಕರು ಮತ್ತು ಸಾರ್ವಜನಿಕರು ಅಂದಿನ ಮುಕ್ತ ಸಭೆಗೆ ಆಗಮಿಸಿ ನನಗೆ ಈ ಸೂಕ್ತವಾದ ಸಲಹೆಗಳನ್ನು ನೀಡಬೇಕು. ರಾಜಕೀಯವಾಗಿ ಮುಂದುವರಿಯಬೇಕೋ ಅಥವಾ ಬೇಡವೋ. ಮುಂದುವರಿಯಬೇಕಾದರೆ ತಾವು ತೋರಿಸುವ ದಿಕ್ಕಿನತ್ತ ನಾನು ಸಾಗುತ್ತೇನೆ. ಆದ್ದರಿಂದ ಕ್ಷೇತ್ರದ ಮತದಾರರು ನನಗೆ ಸೂಕ್ತ ಮಾರ್ಗದರ್ಶನ ನೀಡಬೇಕು.

ಲಕ್ಷ್ಮಣ ಸವದಿ, ಮಾಜಿ ಡಿಸಿಎಂ.

click me!