
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.30): ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ಮರುದಿನವೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಸ್ವಸಹಾಯ ಗುಂಪುಗಳಿಗೆ ಸರ್ಕಾರದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಇಂದು ಬೆಳಗ್ಗೆ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಕೆಲ್ಲೂರು ಗ್ರಾಮದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ಎಲ್ಲ ಸ್ವಸಹಾಯ ಗುಂಪುಗಳ ಮಹಿಳೆಯರನ್ನು ಆಹ್ವಾನಿದ್ದರು. ಆದರೆ, ನೀತಿ ಸಂಹಿತೆ ಜಾರಿ ಆಗಿದ್ದರೂ ಸಾವಿರಾರು ಜನರು ಶಾಸಕರ ನಿವಾಸದಲ್ಲಿ ಜನ ಸೇರಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಚುನಾವಣಾ ಆಯೋಗದ ತಂಡ ಕೂಡಲೇ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಎಲೆಕ್ಷನ್ ಹೊತ್ತಲ್ಲಿ ಏನು ಮಾಡಿದರೆ ಅಪರಾಧ? ಏನು ಹೇಳುತ್ತೆ ನೀತಿ ಸಂಹಿತೆಯ ಕಾನೂನು?
ದೂರು ದಾಖಲಿಸಿಕೊಂಡ ಚುನಾವಣಾ ಅಧಿಕಾರಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಮೂಡಿಗೆರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮೂಡಿಗೆರೆ ತಾಲೂಕು ಚುನಾವಣಾ ಅಧಿಕಾರಿ ಪಿ.ರಾಜೇಶ್ ಅವರು ದೂರು ದಾಖಲಿಸಿದ್ದಾರೆ. ಶಾಸಕ ಕುಮಾರಸ್ವಾಮಿ ನಿವಾಸದಲ್ಲಿ ಕಾರ್ಯಕ್ರಮ ಆಯೋಜನೆ, ಚೆಕ್ ವಿತರಣೆ ಹಿನ್ನೆಲೆ ದೂರು ದಾಖಲಾಗಿದೆ. ಕಾರ್ಯಕ್ರಮವನ್ನ ಅರ್ಧಕ್ಕೆ ನಿಲ್ಲಿಸಿದ್ದ ಚುನಾವಣಾ ಅಧಿಕಾರಿಗಳು, ನೀತಿ ಸಂಹಿತೆ ಉಲ್ಲಂಘನೆಯಡಿ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಮಹಿಳೆಯರಿಗೆ ಉಪಾಹಾರ ನೀಡಿದ ವೀಡಿಯೋ ಸಂಗ್ರಹ: ಎಂ.ಪಿ.ಕುಮಾರಸ್ವಾಮಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು, ಇತ್ತೀಚೆಗೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದರು. ಇದೀಗ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಶಾಸಕರ ನಿವಾಸದಲ್ಲಿ ಚೆಕ್ ವಿತರಣೆ ಕಂಡು ಬಂದಿಲ್ಲ. ಬದಲಾಗಿ ನೂರಾರು ಮಹಿಳೆಯರಿಗೆ ಬೆಳಗ್ಗಿನ ಉಪಹಾರ ನೀಡಲಾಗುತ್ತಿತ್ತು. ಘಟನೆ ಸಂಬಂಧ ವೀಡಿಯೋ ಚಿತ್ರೀಕರಿಸಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ.
ನೀತಿ ಸಂಹಿತೆ ಹಿನ್ನೆಲೆ ತರಾತುರಿ ಉದ್ಘಾಟನೆ: ಶಾಸಕ ದಢೇಸೂಗೂರು ಜತೆ ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ
ಮೊದಲೇ ಆಯೋಜಿಸಿದ್ದ ಕಾರ್ಯಕ್ರಮ ದಿಢೀರ್ ರದ್ದು: ಮಹಿಳಾ ಸಂಘಗಳಿಗೆ ಇಂದು ಚೆಕ್ ವಿತರಣೆ ಮಾಡಬೇಕೆಂದು ಕಳೆದ 2 ದಿನದ ಹಿಂದೆ ಸಂಬಂಧಿಸಿದ ಅಧಿಕಾರಿಗಳಿಗೆ ಚೆಕ್ ತರಲು ತಿಳಿಸಿದ್ದೆ. ಆದರೆ ಧಿಡೀರ್ ಎಂಬಂತೆ ನಿನ್ನೆ ನೀತಿ ಸಂಹಿತೆ ಜಾರಿಯಾಯಿತು. ಕಾರ್ಯಕ್ರಮ ರದ್ದುಗೊಳಿಸಿರುವ ಬಗ್ಗೆ ನಿನ್ನೆಯೇ ಅನೇಕ ಸ್ವ ಸಹಾಯ ಸಂಘಗಳಿಗೆ ತಿಳಿಸಲಾಗಿತ್ತು. ಕೆಲವರಿಗೆ ಮಾಹಿತಿ ಸಿಗದೇ ಬೆಳಗ್ಗೆ ತನ್ನ ನಿವಾಸಕ್ಕೆ ಆಗಮಿಸಿದ್ದಾರೆ. ದೂರದ ಊರಿನಿಂದ ಹಸಿವಿನಿಂದ ಬಂದಿದ್ದಾರೆಂದು ತಿಂಡಿ ನೀಡಲಾಯಿತು. ಇಲ್ಲಿ ಯಾವುದೇ ಚುನಾವಣೆ ಪ್ರಚಾರ ನಡೆಸಿಲ್ಲ ಎಂದು ಶಾಸಕ ಎಂ ಪಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಉಪಾಹಾರ ಕೊಟ್ಟಿದ್ದಕ್ಕೆ ದೂರು ದಾಖಲು:
ಶಾಸಕ ಎಂ.ಪಿ.ಕುಮಾರಸ್ವಾಮಿ ನಿವಾಸದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ ಎಂದು ಮಾಹಿತಿ ದೊರೆತ ಕೂಡಲೇ ನಮ್ಮ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಿ ಯಾವುದೇ ಚೆಕ್ ದೊರೆತಿಲ್ಲ. ಉಪಹಾರ ನೀಡುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರಿಂದ ಪ್ರಕರಣ ದಾಖಲು ಮಾಡಲಾಗಿದೆ.
- ಎಚ್ ಡಿ ರಾಜೇಶ್, ಚುನಾವಣಾಧಿಕಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.