ಅರಬಾವಿ ಹೋರಾಟ: ಬಾಲಚಂದ್ರ ಜಾರಕಿಹೊಳಿ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕುವವರಾರು?

By Kannadaprabha News  |  First Published Apr 6, 2023, 10:46 AM IST

ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಅರಬಾವಿ, ಕರದಂಟು ನಾಡು ಗೋಕಾಕದ ಪಕ್ಕದಲ್ಲಿರುವ ಕ್ಷೇತ್ರ. ಕೆಎಂಎಫ್‌ ಅಧ್ಯಕ್ಷ, ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಪ್ರತಿನಿಧಿಸುತ್ತಿರುವ ಕ್ಷೇತ್ರ ಇದು. 


ಶ್ರೀಶೈಲ ಮಠದ

ಬೆಳಗಾವಿ (ಏ.06): ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಅರಬಾವಿ, ಕರದಂಟು ನಾಡು ಗೋಕಾಕದ ಪಕ್ಕದಲ್ಲಿರುವ ಕ್ಷೇತ್ರ. ಕೆಎಂಎಫ್‌ ಅಧ್ಯಕ್ಷ, ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಪ್ರತಿನಿಧಿಸುತ್ತಿರುವ ಕ್ಷೇತ್ರ ಇದು. ಇಲ್ಲಿ ಏನಿದ್ದರೂ ಪಕ್ಷ ಗೌಣ, ವೈಯಕ್ತಿಕ ವರ್ಚಸ್ಸೇ ಮೇಲುಗೈ ಸಾಧಿಸುತ್ತ ಬಂದಿದೆ. ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿಯವರು ಈ ಕ್ಷೇತ್ರದಲ್ಲಿ ಉಪಚುನಾವಣೆ ಸೇರಿದಂತೆ ಒಟ್ಟು ಐದು ಬಾರಿ ಸತತವಾಗಿ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದ್ದಾರೆ. ಎರಡು ಬಾರಿ ಸಚಿವ ಸ್ಥಾನವನ್ನೂ ಅಲಂಕರಿಸಿದ್ದಾರೆ. ಈ ಸಲ ಆರನೇ ಬಾರಿಗೆ ತಮ್ಮ ರಾಜಕೀಯ ಅದೃಷ್ಟಪರೀಕ್ಷೆಗೆ ಮುಂದಾಗಿದ್ದು, ಚುನಾವಣಾ ಅಖಾಡಕ್ಕೆ ಇಳಿಯಲು ಉತ್ಸುಕರಾಗಿದ್ದಾರೆ.

Tap to resize

Latest Videos

ಈ ಕ್ಷೇತ್ರ ಮೊದಲು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಕಾಂಗ್ರೆಸ್‌ನ ಭದ್ರಕೋಟೆ ಛಿದ್ರಗೊಳಿಸಿ, ಮೊದಲು ಜೆಡಿಎಸ್‌ನಿಂದ ಆಯ್ಕೆಯಾದ ಬಾಲಚಂದ್ರ ಜಾರಕಿಹೊಳಿ ಅವರು, ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ. ಕ್ಷೇತ್ರದಲ್ಲಿ ತಮ್ಮ ಬಲವಾದ ಹಿಡಿತ ಹೊಂದಿದ್ದು, ಎಲ್ಲ ಸಮುದಾಯದ ಮತಗಳನ್ನು ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಲು ಕಾಂಗ್ರೆಸ್‌ ಸೇರಿದಂತೆ ಇತರ ಪಕ್ಷಗಳು ರಣತಂತ್ರ ಹೆಣೆಯುತ್ತಿವೆ. ಬಿಜೆಪಿಯಿಂದ ಈ ಬಾರಿಯೂ ಅವರಿಗೇ ಟಿಕೆಟ್‌ ಸಿಗುವ ಸಾಧ್ಯತೆಯಿದ್ದು, ಚುನಾವಣಾ ಅಖಾಡದಲ್ಲಿ ಬಾಲಚಂದ್ರ ಜಾರಕಿಹೊಳಿ ಎದುರು ಯಾರು ಸೆಣಸಲಿದ್ದಾರೆ? ಯಾವ ಪಕ್ಷದಿಂದ, ಯಾರು ಕಣಕ್ಕಿಳಿಯಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

ಪಂಚರತ್ನ ಯೋಜನೆ ಜಾರಿಯಾದರೆ ರಾಜ್ಯ ಸ್ವರ್ಗ ಸದೃಶ್ಯವಾಗಲಿದೆ: ಎಚ್‌.ಡಿ.ಕುಮಾರಸ್ವಾಮಿ

ಕಾಂಗ್ರೆಸ್‌ನಿಂದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ, ಅರವಿಂದ ದಳವಾಯಿ, ಲಖನ್‌ ಸವಸುದ್ದಿ, ಭೀಮಶಿ ಹಂದಿಗುಂದ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಕಾಂಗ್ರೆಸ್‌ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿದೆ. ಜೆಡಿಎಸ್‌ಗೆ ಇಲ್ಲಿ ಭದ್ರ ನೆಲೆ ಇಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ವಕೀಲ ಮಲ್ಲಿಕಾರ್ಜುನ ಚೌಕಾಶಿ ತಯಾರಿ ನಡೆಸಿದ್ದಾರೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬದ ನಾಲ್ವರು ಶಾಸಕರಾಗಿ ಗಮನ ಸೆಳೆದಿದ್ದಾರೆ. ಈ ಬಾರಿ ಮತ್ತೆ ಮೂವರು ಸಹೋದರರು ಚುನಾವಣಾ ಕಣಕ್ಕೆ ಧುಮುಕಿ ಅದೃಷ್ಟಪರೀಕ್ಷೆಗೆ ಮುಂದಾಗಲಿದ್ದಾರೆ.

ಆರು ಬಾರಿ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಸಭಾಪತಿ ವಿ.ಎಸ್‌.ಕೌಜಲಗಿ ನಂತರ ಅರಬಾವಿ ಕ್ಷೇತ್ರದಲ್ಲಿ ಪ್ರಭಾವಿ ನಾಯಕರಾಗಿ ಬಾಲಚಂದ್ರ ಜಾರಕಿಹೊಳಿ ಹೊರಹೊಮ್ಮಿದ್ದಾರೆ. ಈಗ ಆರನೇ ಬಾರಿಗೆ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಡಲು ಮುಂದಾಗಿದ್ದಾರೆ. ಲಿಂಗಾಯತ ಮತದಾರರೇ ಅಧಿಕವಾಗಿರುವ ಸಾಮಾನ್ಯ ಕ್ಷೇತ್ರದಲ್ಲಿ ಹಿಂದುಳಿದ ಜನಾಂಗದ ಬಾಲಚಂದ್ರರಿಗೆ ಜನ ಮಣೆ ಹಾಕಿದ್ದು ವಿಶೇಷ.

ಕ್ಷೇತ್ರದ ಹಿನ್ನೆಲೆ: ಮೊದಲು ಗೋಕಾಕ- 2 ಆಗಿದ್ದ ಕ್ಷೇತ್ರ, ಅರಬಾವಿಯಾಗಿ ಪರಿವರ್ತನೆಯಾಗಿದೆ. ಒಂದು ಉಪಚುನಾವಣೆ ಸೇರಿದಂತೆ 15 ಚುನಾವಣೆಗಳು ನಡೆದಿವೆ. 9 ಬಾರಿ ಕಾಂಗ್ರೆಸ್‌, ಒಂದು ಬಾರಿ ಜೆಎನ್‌ಪಿ, 2 ಬಾರಿ ಜೆಡಿಎಸ್‌, 3 ಬಾರಿ ಬಿಜೆಪಿ ಗೆಲುವು ಸಾಧಿಸಿವೆ. ಪ್ರಸ್ತುತ ಕ್ಷೇತ್ರದ ಶಾಸಕರಾಗಿರುವ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ, ಸತತವಾಗಿ 5 ಬಾರಿ ಗೆಲುವು ಸಾಧಿಸಿದ್ದು, ಆರನೇ ಬಾರಿಗೆ ಕಣಕ್ಕಿಳಿಯಲು ಯತ್ನ ನಡೆಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು: 16 ಶಿಕ್ಷಕರು ಸೇವೆಯಿಂದ ಅಮಾನತು

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಒಟ್ಟು 2,39,673 ಮತದಾರರಿದ್ದು, ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನಂತರದ ಸ್ಥಾನದಲ್ಲಿ ಕುರುಬ ಮತ್ತು ಉಪ್ಪಾರ ಸಮುದಾಯದ ಜನರಿದ್ದಾರೆ. ಕ್ಷೇತ್ರದಲ್ಲಿ 63,000 ಲಿಂಗಾಯತರು, 44,000 ಕುರುಬರು, 44,000 ಉಪ್ಪಾರರು, 19,000 ಮುಸ್ಲಿಮರು, 24,000 ಎಸ್ಸಿ/ಎಸ್ಟಿಸಮುದಾಯದವರು, 10,000 ರೆಡ್ಡಿ ಸಮುದಾಯದವರಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!