
ಶಿವಮೊಗ್ಗ (ಮೇ.11): ವಿಧಾನಸಭಾ ಚುನಾವಣೆ ಮತದಾನ ಅಂತೂ ಶಾಂತಿಯುತವಾಗಿ ಮುಗಿಯಿತು. ಇನ್ನೇನಿದ್ದರೂ ಫಲಿತಾಂಶದತ್ತ ಚಿತ್ತ. ಇದರ ನಡುವೆ ನಡೆದದ್ದೇನು? ಏನೇನು ಆಗಿ ಹೋಯಿತು? ಎಲ್ಲಿ ತಪ್ಪಾಯಿತು? ಹ್ಯಾಗೆ ವರ್ಕ್ಔಟ್ ಆಯಿತು ಎಂಬೆಲ್ಲ ಲೆಕ್ಕಾಚಾರ ಶುರು! ಯಾವ್ಯಾವ ಬೂತ್‌ನಲ್ಲಿ ಯಾರಾರಯರಿಗೆ ಎಷ್ಟೆಷ್ಟುಓಟು ಬಿದ್ದಿದೆ ಎಂಬ ಅಂಕಿ ಅಂಶಗಳ ಹಿಂದೆ ಅಭ್ಯರ್ಥಿಗಳ ಹಿಂದಿನ ತಂಡ ಬೆನ್ನು ಬಿದ್ದಿದೆ. ವಾರ್ಡುವಾರುಗಳ ಸಭೆ ಕರೆಯುತ್ತಿದ್ದಾರೆ. ಪ್ರತಿ ವಾರ್ಡ್‌ಗಳ ಪ್ರಮುಖರು ತಮ್ಮ ಅಭ್ಯರ್ಥಿಗೆ ಬಿದ್ದ ಮತ, ಬೀಳದ ಮತ, ಕಾರಣಗಳ ಕುರಿತು ಮಾಹಿತಿ ಒದಗಿಸಬೇಕಿದೆ. ಹೂಡಿಕೆಯಾದ ಹಣದ ಕುರಿತು ಏನೇನು ಚರ್ಚೆ ನಡೆಯುತ್ತದೆಯೋ ಗೊತ್ತಿಲ್ಲ.
15-20 ದಿನಗಳಿಂದ ಒಂದೇ ಸಮನೆ ಮತ ಬೇಟೆಯಲ್ಲಿದ್ದ ಅಭ್ಯರ್ಥಿಗಳು, ಮುಖಂಡರು, ಪ್ರಮುಖ ಕಾರ್ಯಕರ್ತರು ವಿಶ್ರಾಂತಿಯತ್ತ ತೆರಳುವ ಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ಒಮ್ಮೆ ವಿಮರ್ಶಿಸಿ ಬಳಿಕ ವಿಶ್ರಾಂತಿಗೆ ತೆರಳುವ ಸೂಚನೆ ಮೇಲಿಂದ ಬರುತ್ತಿದೆ. ಇತ್ತ ಮಾಧ್ಯಮಗಳ ಎಕ್ಸಿಟ್ ಪೋಲ್‌ಗಳಿಗಿಂತ ಕಾರ್ಯಕರ್ತರು ನೀಡುವ ಮಾಹಿತಿ ಅಭ್ಯರ್ಥಿಗಳಿಗೆ ಮುಖ್ಯವಾಗಿ ಕಾಣುತ್ತಿದೆ. ಹೀಗಾಗಿ ಎಲ್ಲರನ್ನೂ ಸೇರಿಸುತ್ತಿದ್ದಾರೆ. ಪ್ರತಿ ಬೂತ್‌ಗಳ ಮಾಹಿತಿ ಪಡೆಯುತ್ತಿದ್ದಾರೆ. ತಪ್ಪು -ಒಪ್ಪುಗಳ ವಿಮರ್ಶೆ ಶುರುವಾಗಿದೆ. ಪ್ರತಿ ಬೂತ್‌ಗೆ ಅಭ್ಯರ್ಥಿ ಮಾಡಿದ ಖರ್ಚು, ಬಂದ ಪ್ರತಿಫಲ ಎಲ್ಲದರ ಮಾಹಿತಿ ಪಡೆಯಲಾಗುತ್ತಿದೆ. ಈಗಾಗಲೇ ಅನೇಕ ಅಭ್ಯರ್ಥಿಗಳು ಮತ್ತು ಪಕ್ಷದ ಮುಖಂಡರು ಗುರುವಾರ ಬೆಳಗ್ಗೆ ಬೂತ್ ಪ್ರಮುಖರ ಸಭೆಯನ್ನು ಕರೆದಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಶಿಕಾರಿಪುರದಲ್ಲಿ ವಿಜಯೇಂದ್ರ ಗೆಲುವು ನಿಶ್ಚಿತ: ಯಡಿಯೂರಪ್ಪ
ಮತಕ್ಕಾಗಿ ಮಂಗಳವಾರ ರಾತ್ರಿ ಹಣ-ಫಲ!: ಮಂಗಳವಾರ ರಾತ್ರಿ ನಡೆದ ಕೊನೆಯ ಪ್ರಯತ್ನದ ಕುರಿತು ಸಾಕಷ್ಟುಮಾಹಿತಿ ಹರಿದು ಬರುತ್ತಿದೆ. ಮಧ್ಯರಾತ್ರಿಯ ಬಳಿಕ ಮತದಾರನ ಮನೆಯ ಕಾಲಿಂಗ್ ಬಾರಿಸಿದೆ. ಒಳಗೆ ಬಂದವರು ಆಮಿಷಗಳ ಹೊಳೆ ಹರಿಸಿದ್ದಾರೆ. ಕೇವಲ ಭರವಸೆಯಲ್ಲ ಎಂದು ಕೈಗೆ ನೀಡಿದ್ದಾರೆ. ‘ಅವರು ನೀಡಿದ್ದಾರೆ’ ಎಂದು ಕೊಡುಗೆಯನ್ನು ಜೊತೆಗಿಟ್ಟಿದ್ದಾರೆ. ಏನೋ ಅಂದುಕೊಂಡ ಮತದಾರ ಏನೆಲ್ಲ ಆಗುತ್ತಿದೆ ಎಂದು ಕಂಗಾಲಾದ ಸಂಗತಿಯೂ ಇದೆ. ಇಷ್ಟೇನಾ ಎಂದು ಮೂಗು ಮುರಿದಿದ್ದೂ ಇದೆ. ಒಟ್ಟಾರೆಯಾಗಿ ಮಂಗಳವಾರ ರಾತ್ರಿಯಿಡೀ ಚುನಾವಣಾ ಫಲಿತಾಂಶವನ್ನು ಏರುಪೇರು ಮಾಡುವ ಎಲ್ಲ ಯತ್ನಗಳೂ ನಡೆದಿದೆ. ಆದರೆ ಮತದಾರ ಗಟ್ಟಿಯಾಗಿ ನಿಂತಿದ್ದಾನೆ ಎಂಬುದಷ್ಟೇ ಈ ಬಾರಿಯ ಸಮಾಧಾನದ ಸಂಗತಿ!
ರಾಜ್ಯದಲ್ಲಿ ಸ್ಥಿರ ಮತ್ತು ಬಹುಮತದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ: ಸಿಎಂ ಬೊಮ್ಮಾಯಿ
ಹಣದ ಹರಿವಿನ ವಾಸನೆ ಬರುತ್ತಿದೆ. ಆದರೆ ಯಾವುದಕ್ಕೂ ದಾಖಲೆಯಿಲ್ಲ. ಮತದಾರ ಹೇಳುವ ಮಾತೇ ಸಧ್ಯಕ್ಕೆ ದಾಖಲೆ. ಅವರ ಮಾತಿನ ಪ್ರಕಾರ ಹೇಳುವುದಾದರೆ ಮಂಗಳವಾರ ಮಧ್ಯರಾತ್ರಿಯ ಬಳಿಕ ಮನೆಯ ಕಾಲಿಂಗ್ ಬೆಲ್ ಸದ್ದಾಗಿದೆ. ತಮ್ಮ ಪರವಾಗಿ ಮತ ಹಾಕಲೇಬೇಕು ಎಂದು ಒತ್ತಡ ಹೇರಲಾಗಿದೆ. ಜೊತೆಗೆ ‘ಫಲ’ ನೀಡಲಾಗಿದೆ. ಆದರೂ ಮತದಾರ ಈ ಹಿಂದಿನಂತೆ ಋುಣಸಂಧಾನ ಎಂಬಿತ್ಯಾದಿ ಭಾವನೆಗಳಿಗೆ ಬೆಲೆ ನೀಡದೆ ತಾವು ಅಂದುಕೊಂಡ ಅಭ್ಯರ್ಥಿಗಳಿಗೇ ಮತ ನೀಡುವ ಸಾಧ್ಯತೆಯ ವಾಸನೆಯನ್ನು ಕೂಡ ಈ ಮುಖಂಡರು ಗ್ರಹಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.