ರಾಹುಲ್ ಗಾಂಧಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮೊದಲು ನಿರುದ್ಯೋಗ ಭತ್ಯೆ ನೀಡಲಿ. ನಂತರ ರಾಜ್ಯದ ನಿರುದ್ಯೋಗಿ ಯುವಕರ ಬಗ್ಗೆ ಕಾಳಜಿ ತೋರಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗವಾಡಿದ್ದಾರೆ.
ಧಾರವಾಡ (ಮೇ.04): ರಾಹುಲ್ ಗಾಂಧಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮೊದಲು ನಿರುದ್ಯೋಗ ಭತ್ಯೆ ನೀಡಲಿ. ನಂತರ ರಾಜ್ಯದ ನಿರುದ್ಯೋಗಿ ಯುವಕರ ಬಗ್ಗೆ ಕಾಳಜಿ ತೋರಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗವಾಡಿದ್ದಾರೆ. ನಗರದ ಕಾಮನಕಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗ ಭತ್ಯೆ ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಕ್ಷೇತ್ರ ಕಳೆದುಕೊಂಡು ನಿರುದ್ಯೋಗಿ ಆಗಿರುವ ರಾಹುಲ್ ಗಾಂಧಿಗೆ ಮೊದಲು ನಿರುದ್ಯೋಗ ಭತ್ಯೆ ನೀಡಿ ಪ್ರೋತ್ಸಾಹಿಸಲಿ ಎಂದರು.
ಗರೀಬಿ ಹಠಾವೋ ಹೆಸರಿನಲ್ಲಿ ಕಾಂಗ್ರೆಸ್ 70 ವರ್ಷ ಆಡಳಿತ ನಡೆಸಿದೆ. ಆದರೆ, ಇಂದಿಗೂ ಅದನ್ನು ಅನುಷ್ಠಾನಕ್ಕೆ ತರಲಿಲ್ಲ. ಜನರಿಗೆ ಸುಳ್ಳು ಹೇಳುವುದೇ ಕಾಂಗ್ರೆಸ್‌ನ ಸಾಧನೆ. ದೇಶವನ್ನು ಬೇಕಾಬಿಟ್ಟಿಯಾಗಿ ನಡೆಸಿದ ಪರಿಣಾಮವೇ ಕಾಂಗ್ರೆಸ್ ಈಗ ಈ ದು:ಸ್ಥಿತಿ ತಲುಪಿದೆ. ಬಿಜೆಪಿ ಸರ್ಕಾರ ಇರುವವರೆಗೂ ಕಾಂಗ್ರೆಸ್ ಪಕ್ಷಕ್ಕೆ ಎಂದಿಗೂ ಅಚ್ಛೇ ದಿನ್ ಬರುವುದಿಲ್ಲ ಎಂದರು. ಜಿಲ್ಲೆಯ 358 ಹಳ್ಳಿಯ ಜನರಿಗೆ ಮಲಪ್ರಭಾ ನದಿಯ ನೀರು ಹರಿಸಲು 1,100 ಕೋಟಿಯನ್ನು ಮೋದಿಯವರು ನೀಡಿದ್ದಾರೆ. ಹೀಗಾಗಿ, ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದು ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜನರಿಗೆ ಮನವಿ ಮಾಡಿದರು.
ಥೀಮ್ ಪಾರ್ಕ್, ಫುಡ್ ಝೋನ್, ಮತ್ಸ್ಯ ಕ್ಯಾಂಟೀನ್: ಪ್ರಣಾಳಿಕೆ ಬಿಡುಗಡೆ ಮಾಡಿದ ಯಶ್ಪಾಲ್
ಜನರೇ ಕಾಂಗ್ರೆಸ್ಸನ್ನು ಬ್ಯಾನ್ ಮಾಡ್ತಾರೆ: ಬಜರಂಗ ದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿರುವುದಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ. ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿ ಅದ್ಹೇಗೆ ಚುನಾವಣೆ ಮಾಡುತ್ತಾರೆ ನೋಡುತ್ತೇವೆ. ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಅದ್ಹೇಗೆ ಹಿಂದೂಗಳ ಮತ ಕೇಳ್ತಾರೆ? ಜನರೇ ಈ ಪಕ್ಷವನ್ನೇ ಬ್ಯಾನ್ ಮಾಡಿ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಪಿಎಫ್‌ಐನ್ನು ನಿಷೇಧಿಸಿದ್ದೇವೆ. ಅದಕ್ಕಾಗಿ ಅವರು ಬಜರಂಗದಳವನ್ನು ನಿಷೇಧಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದಾರೆ. ಪಿಎಫ್‌ಐ ದೇಶದ್ರೋಹಿ ಕೆಲಸ ಮಾಡುತ್ತಿತ್ತು. ಅದಕ್ಕೆ ಬೇಕಾದಷ್ಟುಸಾಕ್ಷಿ ಇದ್ದವು. ಅದಕ್ಕಾಗಿ ಆ ಸಂಘಟನೆಯನ್ನು ನಿಷೇಧಿಸಿದ್ದೇವೆ. ಆದರೆ ಬಜರಂಗ ದಳ ದೇಶ ರಕ್ಷಣೆಯ ಕೆಲಸ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು.
ಬಿಜೆಪಿಗೇ ಅಧಿಕಾರ: ಭಜರಂಗದಳ ನಿಷೇಧ ಹಿಂದೂ ವಿರೋಧಿ ನೀತಿ. ಹಿಂದೂಗಳಿಗೆ ಮಾಡುತ್ತಿರುವ ಅವಮಾನವಿದು. ಈ ಅಜೆಂಡಾ ಇಟ್ಟುಕೊಂಡು ಅದ್ಹೇಗೆ ಚುನಾವಣೆ ನಡೆಸುತ್ತಾರೋ ನೋಡುತ್ತೇವೆ. ಅವರು ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿಯೇ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತ. ಹಿಂದೂಗಳ ಸಂಘಟನೆಯನ್ನು ನಿಷೇಧಿಸುವುದಾಗಿ ಹೇಳುವ ಕಾಂಗ್ರೆಸ್ಸನ್ನೇ ಜನರು ಈ ಚುನಾವಣೆಯಲ್ಲಿ ನಿಷೇಧಿಸುತ್ತಾರೆ ಎಂದರು. ಧರ್ಮಾಧಾರಿತ ಮೀಸಲಾತಿ ನೀಡುವುದು ಸಂವಿಧಾನ ವಿರೋಧಿಯಾಗಿದೆ ಎಂದು ಸುಪ್ರೀಂ ಕೋರ್ಚ್ ಹೇಳಿದೆ. ಆದರೆ ಕೇವಲ ಮತಬ್ಯಾಂಕ್‌ಗಾಗಿ ತುಷ್ಟೀಕರಣ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್, ಮುಸ್ಲಿಮರಿಗೆ ಮೀಸಲಾತಿ ಮರಳಿ ನೀಡುವುದಾಗಿ ಹೇಳುತ್ತಿದೆ. ಆದರೆ ಬಿಜೆಪಿ ಇದನ್ನು ವಿರೋಧಿಸಲಿದೆ ಎಂದರು.
ಭ್ರಷ್ಟವ್ಯೂಹ ಭೇದಿಸಿದ್ದಕ್ಕಾಗಿ ಕಾಂಗ್ರೆಸ್‌ಗೆ ನನ್ನ ಕಂಡ್ರೆ ಸಿಟ್ಟು: ಪ್ರಧಾನಿ ಮೋದಿ
ಕಾಂಗ್ರೆಸ್ ಮತ್ತು ಸುಳ್ಳು: ರಾಜ್ಯದಲ್ಲಿ ಈ ಹಿಂದೆ ಲೋಕಾಯುಕ್ತ ದುರ್ಬಲ ಮಾಡಿದ್ದೇ ಕಾಂಗ್ರೆಸ್. ಇದೀಗ ಲೋಕಾಯುಕ್ತವನ್ನು ಬಲಿಷ್ಠಗೊಳಿಸುವ ಮಾತು ಹೇಳುತ್ತಿದೆ. ಕಾಂಗ್ರೆಸ್ ನಾಯಕರೇ ಭ್ರಷ್ಟಾಚಾರ ಪ್ರಕರಣದಲ್ಲಿ ಬೇಲ್ ಮೇಲೆ ಹೊರಗಡೆ ಇದ್ದಾರೆ. ಕಾಂಗ್ರೆಸ್ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು. ಅವರು ಅಧಿಕಾರಕ್ಕೆ ಬರುವುದು ತಿರುಕನ ಕನಸು ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.