ಭ್ರಷ್ಟವ್ಯೂಹ ಭೇದಿಸಿದ್ದಕ್ಕಾಗಿ ಕಾಂಗ್ರೆಸ್‌ಗೆ ನನ್ನ ಕಂಡ್ರೆ ಸಿಟ್ಟು: ಪ್ರಧಾನಿ ಮೋದಿ

By Kannadaprabha News  |  First Published May 4, 2023, 12:44 PM IST

ಕಾಂಗ್ರೆಸ್‌ನ ಭ್ರಷ್ಟವ್ಯೂಹವನ್ನು ಭೇದಿಸಿದ್ದಕ್ಕಾಗಿ, ನಕಲಿ ಹೆಸರಿನಲ್ಲಿ ನಡೆಯುತ್ತಿದ್ದ ಸಹಾಯಧನ ಲೂಟಿ ತಡೆದು ಅರ್ಹರಿಗೆ ಸರ್ಕಾರಿ ಸೌಲಭ್ಯ ಸಿಗುವಂತೆ ಮಾಡಿದ್ದಕ್ಕಾಗಿ ಕಾಂಗ್ರೆಸ್ಸಿಗರಿಗೆ ನನ್ನನ್ನು ಕಂಡರೆ ಕೋಪ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.


ಮಂಗಳೂರು/ಅಂಕೋಲಾ/ಬೈಲಹೊಂಗಲ (ಮೇ.04): ಕಾಂಗ್ರೆಸ್‌ನ ಭ್ರಷ್ಟವ್ಯೂಹವನ್ನು ಭೇದಿಸಿದ್ದಕ್ಕಾಗಿ, ನಕಲಿ ಹೆಸರಿನಲ್ಲಿ ನಡೆಯುತ್ತಿದ್ದ ಸಹಾಯಧನ ಲೂಟಿ ತಡೆದು ಅರ್ಹರಿಗೆ ಸರ್ಕಾರಿ ಸೌಲಭ್ಯ ಸಿಗುವಂತೆ ಮಾಡಿದ್ದಕ್ಕಾಗಿ ಕಾಂಗ್ರೆಸ್ಸಿಗರಿಗೆ ನನ್ನನ್ನು ಕಂಡರೆ ಕೋಪ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ದ.ಕ. ಜಿಲ್ಲೆಯ ಮೂಲ್ಕಿ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮತ್ತು ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಬುಧವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ನಕಲಿ ಖಾತೆ ಮೂಲಕ ಸರ್ಕಾರದ ಸಹಾಯಧನ ಭ್ರಷ್ಟರ ಪಾಲಾಗುತ್ತಿತ್ತು. ಕಾಂಗ್ರೆಸ್‌ನ ಈ ಭ್ರಷ್ಟವ್ಯೂಹವನ್ನು ಭೇದಿಸಿದ್ದಕ್ಕಾಗಿ ಆಕ್ರೋಶಗೊಂಡು ನನ್ನ ಮೇಲೆ ಬೈಗುಳಗಳ ಸುರಿಮಳೆ ಮಾಡುತ್ತಿದ್ದಾರೆ. 

ಒಂದು ಲಕ್ಷ ನಕಲಿ ಖಾತೆಗೆ ಸಿಲಿಂಡರ್‌ ಸಬ್ಸಿಡಿ, 30 ಲಕ್ಷ ನಕಲಿ ಖಾತೆಗೆ ಶಿಕ್ಷಣ ಸಹಾಯಧನದ ಸಬ್ಸಿಡಿ, ಒಂದು ಕೋಟಿ ನಕಲಿ ಖಾತೆಗೆ ವಿಧವಾ ವೇತನ ಸೇರಿ ನಾಲ್ಕು ಕೋಟಿ ನಕಲಿ ಖಾತೆಗೆ ಸರ್ಕಾರದ ವಿವಿಧ ಸಹಾಯಧನ ಹೋಗುತ್ತಿತ್ತು. ಈ ಹಣ ಕಾಂಗ್ರೆಸ್‌ನ ಕೆಳಹಂತದ ನಾಯಕರಿಂದ ಮೇಲ್ಮಟ್ಟದ ನಾಯಕರ ತನಕ ಸಂದಾಯವಾಗುತ್ತಿತ್ತು ಎಂದು ದೂರಿದರು. ಸುಳ್ಳು ಆರೋಪವೇ ಕಾಂಗ್ರೆಸ್‌ ಪಾಲಿಗೆ ಆಸರೆಯಾಗಿದೆ. ದೆಹಲಿಯಿಂದ ಒಂದು ರು. ಕಳುಹಿಸಿದರೆ ಜನರ ಕೈಗೆ ಸಿಗುವಾಗ 15 ಪೈಸೆ ದೊರೆಯುತ್ತದೆ ಎಂದು ಕಾಂಗ್ರೆಸ್‌ನ ಹಿಂದಿನ ಪ್ರಧಾನಿ ಹೇಳಿದ್ದರು. ಹಾಗಿದ್ದರೆ ಉಳಿದ 85 ಪರ್ಸೆಂಟ್‌ ಹಣ ತಿಂತಿದ್ದವರು ಯಾರು ಎಂದು ಪ್ರಶ್ನಿಸಿದ ಮೋದಿ, ಇಂದಿಗೂ ಕಾಂಗ್ರೆಸ್‌ 85 ಪರ್ಸೆಂಟ್‌ ಕಮಿಷನ್‌ ತಿನ್ನಲು ತಯಾರಾಗಿ ನಿಂತಿದೆ ಎಂದು ವ್ಯಂಗ್ಯವಾಡಿದರು.

Tap to resize

Latest Videos

ಕಾಂಗ್ರೆಸ್ ಪಕ್ಷ ಎಸ್‌ಡಿಪಿಐ-ಪಿಎಫ್ಐ ಕಪಿಮುಷ್ಟಿಯಲ್ಲಿದೆ: ಸಿಎಂ ಬೊಮ್ಮಾಯಿ

ರಿಮೋಟ್‌ ಕಂಟ್ರೋಲ್‌: ದೆಹಲಿಯಲ್ಲಿ ಕುಳಿತ ಕಾಂಗ್ರೆಸ್‌ ನೇತಾರರು ಇಲ್ಲಿರುವ (ಕರ್ನಾಟಕ) ನಾಯಕರನ್ನು ರಿಮೋಟ್‌ ಕಂಟ್ರೋಲ್‌ನಂತೆ ನಿಯಂತ್ರಿಸುತ್ತಾರೆ. ದೆಹಲಿಯಲ್ಲಿರುವ ಕುಟುಂಬದ ಸೇವೆಯೊಂದೇ ರಾಜ್ಯದಲ್ಲಿರುವ ಕಾಂಗ್ರೆಸ್‌ ನಾಯಕರ ಗುರಿ. ಇನ್ನು ಜೆಡಿಎಸ್‌ ಪರಿವಾರ ಒಂದು ಪ್ರೈ. ಲಿ ಕಂಪನಿಯಾಗಿದೆ. ಆ ಪಕ್ಷದಲ್ಲಿ ಒಂದೇ ಕುಟುಂಬದ ಬಳಿ ಅಧಿಕಾರ ಇದೆ. ಆದರೆ ನಾನು ನಿಮ್ಮ ಸೇವಕ. ಯಾರದ್ದೋ ರಿಮೋಟ್‌ ಕಂಟ್ರೋಲ್‌ ನಾನಲ್ಲ. ಈ ದೇಶದ 140 ಕೋಟಿ ಜನರ ಅಣತಿಯಂತೆ ನಾನು ನಡೆಯುತ್ತೇನೆ ಎಂದು ಹೇಳಿದರು.

ಗ್ಯಾರಂಟಿ ವಿರುದ್ಧ ಆಕ್ರೋಶ: ಜನರ ವಿಶ್ವಾಸವನ್ನು ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಈಗ ಸುಳ್ಳು ಹೇಳುವ ಒಂದೇ ಮಾರ್ಗ ಉಳಿದುಕೊಂಡಿದೆ. ಹೀಗಾಗಿಯೇ ಅದು ಗ್ಯಾರಂಟಿಗಳನ್ನು ಕೊಡಲು ಮುಂದಾಗಿದೆ ಎಂದು ಆರೋಪಿಸಿದ ಮೋದಿ, 2009ರ ವೇಳೆಗೆ ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರವೇ ಅಸ್ತಿತ್ವದಲ್ಲಿತ್ತು. ಆಗ 3 ವರ್ಷಗಳಲ್ಲಿ ದೇಶದ ಎಲ್ಲ ಗ್ರಾಮಗಳಲ್ಲಿ ಬ್ರಾಡ್‌ಬ್ಯಾಂಡ್‌ ಕೊಡುವುದಾಗಿ ಗ್ಯಾರಂಟಿ ನೀಡಿತ್ತು. ಆ ಗ್ಯಾರಂಟಿಯನ್ನು ಕಾಂಗ್ರೆಸ್‌ ಈಡೇರಿಸಿತೆ? ಇದಕ್ಕೂ ಮೊದಲು ಅಂದರೆ 2004ರಲ್ಲಿಯೂ ಕಾಂಗ್ರೆಸ್‌ ಸರ್ಕಾರವೇ ಇತ್ತು. ಆಗಲೂ 3-4 ವರ್ಷಗಳಲ್ಲಿ ದೇಶದ ಪ್ರತಿಯೊಂದು ಭಾಗಕ್ಕೂ ವಿದ್ಯುತ್‌ ಪೂರೈಸುತ್ತೇವೆ ಎಂದು ಆಶ್ವಾಸನೆ ಕೂಡ ಕೊಟ್ಟಿತ್ತು.  ಅದಾದ 10 ವರ್ಷಗಳ ಬಳಿಕ ಅಂದರೆ 2014ರವರೆಗೂ ಆ ಗ್ಯಾರಂಟಿಯನ್ನು ಕಾಂಗ್ರೆಸ್‌ ಈಡೇರಿಸಲಿಲ್ಲ. ಕಾಂಗ್ರೆಸ್‌ ಗ್ಯಾರಂಟಿ ಹೆಸರಿನಲ್ಲಿ ಸುಳ್ಳು ಹೇಳುತ್ತಿದೆ. 

ಬಜರಂಗ ದಳ ನಿಷೇಧ ಭರವಸೆಗೆ ಕಾಂಗ್ರೆಸ್‌ ಬದ್ಧ: ಡಿ.ಕೆ.ಶಿವಕುಮಾರ್‌

2014ರಲ್ಲಿ ನಾನು ಪ್ರಧಾನಿಯಾಗಿ ದೆಹಲಿಗೆ ತೆರಳಿದಾಗ ದೇಶದ 2.5 ಕೋಟಿ ಜನರ ಮನೆಗಳಿಗೆ ವಿದ್ಯುತ್‌ ಸಂಪರ್ಕ ಇರಲಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ 40 ಸಾವಿರ ಜನರು ಕತ್ತಲಲ್ಲಿಯೇ ಕಾಲ ಕಳೆಯುತ್ತಿದ್ದರು. ಎಲ್ಲರ ಮನೆಗೆ ಈಗ ನಾವು ವಿದ್ಯುತ್‌ ಸಂಪರ್ಕ ನೀಡಿದ್ದೇವೆ ಎಂದರು. ಮೀನುಗಾರರ ದುಡಿಮೆಯನ್ನು ಹಿಂದಿನ ಸರ್ಕಾರಗಳು ಗೌರವಿಸಲಿಲ್ಲ. ನಾನು ಅಧಿಕಾರಕ್ಕೆ ಬಂದ ಬಳಿಕ ಮೀನುಗಾರಿಕೆಗಾಗಿಯೇ ಪ್ರತ್ಯೇಕ ಖಾತೆ ರಚಿಸಲಾಯಿತು. ಮೀನುಗಾರರ ಅಭಿವೃದ್ಧಿಗೆ ಮತ್ಸ್ಯ ಸಂಪದ ಯೋಜನೆ ಜಾರಿಗೊಳಿಸಲಾಗಿದೆ. .4 ಸಾವಿರ ಕೋಟಿ ರು. ನೇರವಾಗಿ ಮೀನುಗಾರರ ಖಾತೆಗೆ ಹಣ ಜಮಾವಣೆಯಾಗಿದೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!