ಪ್ರಧಾನಿ ಮೋದಿ ಅವರೇ ಕರ್ನಾಟಕದ ಬಗ್ಗೆ ಮಾತನಾಡಿ: ರಾಹುಲ್‌ ಗಾಂಧಿ

By Kannadaprabha News  |  First Published May 3, 2023, 1:58 PM IST

ಪ್ರಧಾನಿಯವರೇ, ನಿಮ್ಮ ಬಗ್ಗೆ ನೀವೆ ಮಾತನಾಡುವುದನ್ನು ದಯವಿಟ್ಟು ನಿಲ್ಲಿಸಿ, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ್ರೆ ಏನ್‌ ಮಾಡ್ತೀವೆಂದು ಹೇಳಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಆಗ್ರಹಿಸಿದರು. 


ಚಿಕ್ಕಮಗಳೂರು (ಮೇ.03): ಪ್ರಧಾನಿಯವರೇ, ನಿಮ್ಮ ಬಗ್ಗೆ ನೀವೆ ಮಾತನಾಡುವುದನ್ನು ದಯವಿಟ್ಟು ನಿಲ್ಲಿಸಿ, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ್ರೆ ಏನ್‌ ಮಾಡ್ತೀವೆಂದು ಹೇಳಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಆಗ್ರಹಿಸಿದರು. ಚಿಕ್ಕಮಗಳೂರಿನಲ್ಲಿ ಮಂಗಳವಾರ ಕಾಂಗ್ರೆಸ್‌ ಚುನಾವಣಾ ಪ್ರಚಾರದ ಅಂಗವಾಗಿ ಹಮ್ಮಿಕೊಂಡಿದ್ದ ರೋಡ್‌ ಶೋನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಇಲ್ಲಿನ ಬಗ್ಗೆ ಮಾತನಾಡಿ ಎಂದು ಪ್ರಧಾನಿಯವರಿಗೆ ಕರೆ ನೀಡಿದರು. ಕಳೆದ ಬಾರಿ ಬಿಜೆಪಿಯವರು ನಿಮ್ಮ ಸರ್ಕಾರವನ್ನು ನಿಮ್ಮಿಂದ ಕಳ್ಳತನ ಮಾಡಿದ್ದಾರೆ. 

ಈ ಬಾರಿಯೂ ಕೂಡ ಚುನಾವಣಾ ಫಲಿತಾಂಶದ ನಂತರ ಸರ್ಕಾರವನ್ನು ಕಳ್ಳತನ ಮಾಡುವ ಪ್ರಯತ್ನ ಮಾಡ್ತಾರೆ. ಹಾಗಾಗಿ ಅವರಿಗೆ ಇಷ್ಟವಾಗಿರುವ 40 ಸ್ಥಾನಗಳನ್ನು ಕೊಡಿ ಎಂದು ಹೇಳಿದರು. ನಿಮ್ಮ ಸರ್ಕಾರ ಕಳ್ಳತನ ಆಗಬಾರದು. ಈ ಕಾರಣಕ್ಕಾಗಿ ನಾನು ರಾಜ್ಯದ ಜನತೆಗೆ ವಿನಂತಿಸುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಕನಿಷ್ಟ150 ಸೀಟ್‌ಗಳನ್ನು ಕೊಡಿ, ಬಿಜೆಪಿಯವರಿಗೆ ಪ್ರೀತಿ ಇರುವ 40 ಸ್ಥಾನಗಳನ್ನು ಮಾತ್ರ ಕೊಡಿ ಎಂದರು. ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುವ ದೇಶದ ಪ್ರಧಾನಿಗಳು ಕರ್ನಾಟಕ ಆಡಳಿತಾರೂಢ ಬಿಜೆಪಿ ಸರ್ಕಾರದ 40 ಪರ್ಸೆಂಟ್‌ ಭ್ರಷ್ಟಾಚಾರದ ಬಗ್ಗೆ ಉತ್ತರಿಸುವ ಸೌಜನ್ಯವನ್ನು ತೋರಿಸಿಲ್ಲ ಎಂದು ಆರೋಪಿಸಿದರು.

Tap to resize

Latest Videos

undefined

ತೆನೆ ಹೊಲದಲ್ಲಿ, ಕಮಲ ಕೊಳದಲ್ಲಿ, ಕಾಂಗ್ರೆಸ್‌ ಅಧಿಕಾರದಲ್ಲಿ: ಡಿ.ಕೆ.ಶಿವಕುಮಾರ್‌

ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮದೇ ಗುಣಗಾನ ಮಾಡಿಕೊಳ್ಳುತ್ತಾ ಕಾಂಗ್ರೆಸ್‌ ಪಕ್ಷ 91 ಬಾರಿ ನಿಂದಿಸಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಈ ಚುನಾವಣೆ ಪ್ರಧಾನಮಂತ್ರಿಗಳದ್ದಲ್ಲ ಇದು ಕರ್ನಾಟಕದ ಯುವಕರ, ಮಹಿಳೆಯರ, ರೈತರ, ಕಾರ್ಮಿಕರ ಚುನಾವಣೆ. ಈ ವಿಚಾರದಲ್ಲಿ ಬಿಜೆಪಿ ಮುಖಂಡರು, ನರೇಂದ್ರಮೋದಿ ಒಂದು ಶಬ್ದವನ್ನು ಮಾತನಾಡುವುದಿಲ್ಲ ಎಂದರು. ಕಳೆದ 3 ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ನಾವು ಏನು ಮಾಡಿದ್ದೇವೆ. ಮುಂದಿನ 5 ವರ್ಷಗಳ ಕಾಲ ನಾವು ಏನು ಮಾಡುತ್ತೇವೆ. ಯಾರಿಗೆ ಸಹಾಯ ಮಾಡುತ್ತೇವೆ. ಹೇಗೆ ಮಾಡುತ್ತೇ ವೆ. ಈ ವಿಚಾರದಲ್ಲಿ ಒಂದು ನುಡಿಯನ್ನು ಮಾತನಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕದ ತೆರಿಗೆ ಹಣ ಕಡಿಮೆಯಾದ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ನೆರವಿಗೆ ಬರಲಿಲ್ಲ, ಕರ್ನಾಟಕ, ಗೋವಾ, ಮಹಾರಾಷ್ಟ್ರ ನಡುವೆ ನೀರಿನ ಯೋಜನೆಗಳ ಸಮಸ್ಯೆ ಎದುರಾದಾಗ ಪ್ರಧಾನಿಗಳು ಮೌನಕ್ಕೆ ಶರಣಾಗಿದ್ದು ಏಕೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಮೊದಲನೇ ಅಧಿವೇಶನದಲ್ಲಿಯೇ ಗೃಹಲಕ್ಷ್ಮೀ, 10 ಕೆಜಿ ಉಚಿತ ಅಕ್ಕಿ, ಯುವ ನಿಧಿ, ಉಚಿತ 200 ಯೂನಿಟ್‌ ವಿದ್ಯುತ್‌, ಮಹಿಳೆಯರಿಗೆ 2000 ರುಪಾಯಿಗಳು, ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿರುವ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ರೈತರು, ತೆಂಗು, ಅಡಿಕೆ ಬೆಳೆಗಾರರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ, ಹಾಲು ಉತ್ಪಾದಕರಿಗೆ 5 ರುಪಾಯಿ ಬದಲಾಗಿ 7 ರು. ಸಬ್ಸಿಡಿ ನೀಡಲಾಗುವುದು ಎಂದು ಹೇಳಿದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಡಿ. ತಮ್ಮಯ್ಯ ಮಾತನಾಡಿ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿರುವ ಶಾಸಕ ಸಿ.ಟಿ. ರವಿ ಮತ್ತು ಅವರ ಭಾವನ ಅಂಗಡಿ ಮೇ 13ರ ನಂತರ ಬಂದ್‌ ಆಗುತ್ತದೆ ಎಂದ ಅವರು ಈ ಚುನಾವಣೆಯಲ್ಲಿ ರಾಜ್ಯದ 150 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸುಭದ್ರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಎಐಸಿಸಿ ಮಾಜಿ ಅಧ್ಯಕ್ಷರು ಹಾಗೂ ರಾಷ್ಟ್ರೀಯ ನಾಯಕರಾದ ರಾಹುಲ್‌ ಗಾಂಧಿ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ. ಕೆ.ಪಿ. ಅಂಶುಮಂತ್‌ ಮಾತನಾಡಿ, ಮುಂದಿನ 3 ದಿನಗಳಲ್ಲಿ ಜಿಲ್ಲೆಗೆ ಸಿದ್ದರಾಮಯ್ಯ ಎಂಬ ಸುನಾಮಿ ಬರಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರುವುದು ಶತಃಸಿದ್ದ ಎಂದು ಹೇಳಿದರು. ವಿಧಾನಪರಿಷತ್‌ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವ ಮೂಲಕ ಭ್ರಷ್ಟಬಿಜೆಪಿ ಸರ್ಕಾರವನ್ನು ಹೊಡೆದೋಡಿಸಲು ಪಣತೊಡಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಮೋಟಮ್ಮ, ಮೂಡಿಗೆರೆ ಕ್ಷೇತ್ರದ ಅಭ್ಯರ್ಥಿ ನಯನಾ ಮೋಟಮ್ಮ, ಕಡೂರು ಕ್ಷೇತ್ರದ ಅಭ್ಯರ್ಥಿ ಆನಂದ್‌, ತರೀಕೆರೆ ಕ್ಷೇತ್ರದ ಅಭ್ಯರ್ಥಿ ಜಿ.ಎಚ್‌. ಶ್ರೀನಿವಾಸ್‌, ಮುಖಂಡರಾದ ಸಚಿನ್‌ ಮೀಗಾ, ಎಚ್‌.ಎಚ್‌. ದೇವರಾಜ್‌, ಎ.ಎನ್‌. ಮಹೇಶ್‌, ರೇಖಾ ಹುಲಿಯಪ್ಪಗೌಡ, ಎಂ.ಎಲ್‌. ಮೂರ್ತಿ, ಡಾ. ಡಿ.ಎಲ್‌. ವಿಜಯಕುಮಾರ್‌, ಮಹಡಿ ಮನೆ ಸತೀಶ್‌, ಬಿ.ಎಚ್‌. ಹರೀಶ್‌, ಜಯರಾಜ್‌ ಅರಸ್‌, ವಕ್ತಾರ ರೂಬಿನ್‌ಮೊಸೆಸ್‌ ಹಾಜರಿದ್ದರು.

ಬಾಗಲಕೋಟೆ ಜಿಲ್ಲೆಯಲ್ಲಿ ಸುದೀಪ್‌ ಅಬ್ಬರದ ಪ್ರಚಾರ: ಕಿಚ್ಚ ನೋಡಲು ನೆರೆದ ಸಾವಿರಾರು ಅಭಿಮಾನಿಗಳು

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‌ ವೃತ್ತದವರೆಗೂ ಅಲಂಕೃತ ವಾಹನದಲ್ಲಿ ರಾಹುಲ್‌ಗಾಂಧಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ರೋಡ್‌ ಶೋ ನಡೆಸಿದರು. ಈ ರೋಡ್‌ ಶೋನಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!