
ಹಾವೇರಿ (ಏ.08): ಕುಸ್ತಿ ಪಟ್ಟುಗಳು ನಿಮ್ದು ಏನಿದೆ ಸ್ವಲ್ಪ ತಾಲೀಮು ಮಾಡಿಕೊಂಡು ಬರ್ರಿ, ಯಾರ ಕಣಕ್ಕೆ ಬರ್ತೀರಿ ಬರ್ರಿ. ಯಾರ ಬೇಕಾದರೂ ಕಣಕ್ಕೆ ಬರ್ರಿ, ಸೆಡ್ಡು ಹೊಡಿತೀವಿ... ಹೀಗೆ ಅಪ್ಪಟ ಉತ್ತರ ಕರ್ನಾಟಕ ಶೈಲಿಯಲ್ಲಿ ಸ್ವಕ್ಷೇತ್ರ ಶಿಗ್ಗಾಂವಿ ನೆಲದಲ್ಲಿ ನಿಂತು ಎದುರಾಳಿಗಳಿಗೆ ಪಂಥಾಹ್ವಾನ ನೀಡಿದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಸಭೆ ಹಾಗೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುವವರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಗ್ಗಾಂವಿ ಕ್ಷೇತ್ರದಲ್ಲಿ ಎಸ್. ನಿಜಲಿಂಗಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವ ಇತಿಹಾಸವಿದೆ.
ಆದರೆ, ನನಗೆ ಅವಿರೋಧ ಆಯ್ಕೆ ಬೇಡ. ಕುಸ್ತಿನೇ ಬೇಕು. ಅಂದಾಗಲೇ ಯಾರ ಶಕ್ತಿ ಎಷ್ಟಿದೆ ಎನ್ನುವುದು ತಿಳಿಯಲಿದೆ. ಯಾಕೆಂದರೆ ನಮ್ಮ ಕುಸ್ತಿ ಹೊಸ ಪಟ್ಟುಗಳ ಮೇಲಿರುತ್ತದೆ. ನಿಮಗೆ ಗೊತ್ತಾಗಲ್ಲ, ನಾವು ಎಲ್ಲದಕ್ಕೂ ತಯಾರಿದ್ದೇವೆ. ಜನ ಶಕ್ತಿಯೇ ನನ್ನ ಶಕ್ತಿ, ಜನರ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಸದಾಕಾಲ ಜನರ ಮಧ್ಯ ಇರುವುದರಿಂದ ನನಗೆ ಯಾವುದೂ ವ್ಯತ್ಯಾಸ ಆಗುತ್ತಿಲ್ಲ ಎಂದರು. ಕೆಲವರು ಬೆಂಗಳೂರು, ದಿಲ್ಲಿಯಲ್ಲಿ ಕುಳಿತು ಬೊಮ್ಮಾಯಿ ಹೇಗೆ ಸೋಲಿಸಬೇಕು ಎಂಬ ಪ್ಲ್ಯಾನ್ ಮಾಡುತ್ತಿದ್ದಾರೆ. ಆದರೆ, ನಾನು ಅದಾವುದಕ್ಕೂ ತಲೆ ಕಡೆಸಿಕೊಂಡಿಲ್ಲ. ಅದಕ್ಕೆ ಸಮಯವನ್ನೂ ಹಾಳು ಮಾಡಿಲ್ಲ. ನನಗೆ ನನ್ನ ಜನರು, ತಾಯಂದಿರು, ಯುವರಕು, ರೈತರ ಮೇಲೆ ವಿಶ್ವಾಸವಿದೆ.
ಏ.9 ಅಥವಾ 10ಕ್ಕೆ ಜೆಡಿಎಸ್ ಅಂತಿಮ ಪಟ್ಟಿ ಬಿಡುಗಡೆ: ಎಚ್.ಡಿ.ಕುಮಾರಸ್ವಾಮಿ
ನೀವು ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೀರ ಎಂದು ಪತ್ರಕರ್ತರು ಹಲವಾರು ಬಾರಿ ಪ್ರಶ್ನಿಸಿದ್ದಾರೆ. ಅದಕ್ಕೆ ನಾನು ಯಾಂವ್ ಹೇಳಿದವ ನಿಂಗ ಎಂಬ ಉತ್ತರ ಕೊಟ್ಟಿದ್ದೇನೆ. ಇದು ನನ್ನ ಆತ್ಮವಿಶ್ವಾಸ. ಈ ಕ್ಷೇತ್ರದ ಜನರ ಆಶೀರ್ವಾದರಿಂದ ಹಲವಾರು ಸ್ಥಾನಗಳನ್ನು ಪಡೆದು ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಶಿಗ್ಗಾಂವಿಯಲ್ಲೇ ನನ್ನ ಸ್ಪರ್ಧೆ: ನನಗೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಹ್ವಾನ ಇದ್ದರೂ ಸಹ ನಾನು ನನ್ನ ದುಡಿಮೆ ಎಲ್ಲಿದೆ, ನನಗೆ ಎಲ್ಲಿ ಪ್ರೀತಿ, ವಿಶ್ವಾಸವಿದೆ, ಅಲ್ಲೇ ನನ್ನ ಪರೀಕ್ಷೆ ಆಗಬೇಕು ಎಂದು ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಬೇರೆ ಪಕ್ಷದ ನಾಯಕರು ಯಾವ ರೀತಿ ಕ್ಷೇತ್ರ ಹುಡುಕಾಡುತ್ತಿದ್ದಾರೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಒಂದು ಕ್ಷೇತ್ರದ ಜನರ ವಿಶ್ವಾಸಗಳಿಸದಿದ್ದರೆ ರಾಜ್ಯದ ಜನರ ವಿಶ್ವಾಸಗಳಿಸಲು ಸಾಧ್ಯವೇ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.
ಎಲ್ಲರೂ ಮೀಸಲಾತಿ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದರು. ನಾವು ಮೀಸಲಾತಿ ನಿರ್ಣಯ ಮಾಡಿದಾಗ ವಿಪಕ್ಷಗಳು ತಲೆ ಮೇಲೆ ಕೈ ಹೊತ್ತು ಕುಳಿತರು. ಲಿಂಗಾಯತ, ಒಕ್ಕಲಿಗರು ಸೇರಿದಂತೆ ಸಣ್ಣ ಹಿಂದುಳಿದ ವರ್ಗಗಳಿಗೆ ನಾವು ನ್ಯಾಯ ಕೊಟ್ಟಿದ್ದೇವೆ. ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಿಸುವ ಸಾಹಸ ಮಾಡಿ ಸಾಮಾಜಿಕ ನ್ಯಾಯ ಕೊಟ್ಟಿದ್ದೇವೆ. ನೀವು ಅದರ ಪರವಾಗಿ ಇದ್ದಿರೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಉತ್ತರಿಸಬೇಕು ಎಂದು ಕಾಂಗ್ರೆಸ್ಸಿಗೆ ಸವಾಲು ಹಾಕಿದರು. ಮೀಸಲಾತಿ ನೀಡುವಾಗ ಸರ್ವಪಕ್ಷ ಸಭೆ ಕರೆದಾಗ ಎಲ್ಲರೂ ಒಪ್ಪಿಗೆ ಸೂಚಿಸಿದರು. ಈಗ ದಿಲ್ಲಿಯಿಂದ ಬಂದಿರುವ ಕಾಂಗ್ರೆಸ್ ನಾಯಕ ಇದು ಸಂವಿಧಾನ ವಿರೋಧಿ ಎನ್ನುತ್ತಿದ್ದಾರೆ. ಅಂದರೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಹೇಳಿದ್ದು ಸರಿಯಾ. ಈಗ ನೀವು ಹೇಳ್ತಿರೋದು ಸರಿಯಾ..? ಎಂದು ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಬಂಡಾಯ ತೀವ್ರ: 2ನೇ ಟಿಕೆಟ್ ಪಟ್ಟಿ ಪ್ರಕಟ ಬೆನ್ನಲ್ಲೇ ತಲೆನೋವು
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿಧಾನಸಭೆಯಲ್ಲಿ ಕಾನೂನು ಪಾಸ್ ಮಾಡಿದ್ದೇವೆ. ಅಂದು ನೀವು ವಿರೋಧ ಮಾಡಬೇಕಿತ್ತು. ಆದರೆ, ಈಗ ಮಾಡುತ್ತಿದ್ದೀರಿ. ಇದು ದ್ವಿಮುಖ ನೀತಿ. ಸಿದ್ದರಾಮಯ್ಯನವರು ಒಂದೆಡೆ ನಾವು ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಯಾವ ಕಾಲಕ್ಕೂ ಅದನ್ನು ಜಾರಿ ಮಾಡಲ್ಲ ಎಂದಿದ್ದಾರೆ. ಇದರಲ್ಲಿ ಯಾವುದು ಸತ್ಯ. ಎರಡು ವಿಡಿಯೋಗಳು ಜನರ ಮುಂದಿವೆ. ಜನರನ್ನು ಮರಳು ಮಾಡಿ ಇಷ್ಟುವರ್ಷ ಆಳ್ವಿಕೆ ಮಾಡಿದ್ದೀರಿ. ಜನ ಜಾಗೃತರಾಗಿದ್ದಾರೆ. ಇನ್ನು ಮುಂದೆ ಇಂಥ ಆಟ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.