
ಅರಕಲಗೂಡು (ಮಾ.30): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಸಚಿವ ಎ.ಮಂಜು ಅವರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿ ಅರಕಲಗೂಡಿನ ಮುಂದಿನ ಜೆಡಿಎಸ್ ಅಭ್ಯರ್ಥಿ ಎಂದು ಹೇಳಿದ ಬೆನ್ನಲ್ಲೇ ಹಾಲಿ ಶಾಸಕ, ಜೆಡಿಎಸ್ ಮುಖಂಡ ಎ.ಟಿ.ರಾಮಸ್ವಾಮಿ ಮತ್ತು ಅವರ ಬೆಂಬಲಿಗರು ಇದೀಗ ಬಿಜೆಪಿ ಸೇರುವ ಸಾಧ್ಯತೆ ಹೆಚ್ಚಾಗಿದೆ. ಮುಖಂಡರು ಹಾಗೂ ಆಪ್ತರೊಂದಿಗೆ ರಾಮಸ್ವಾಮಿಯವರು ಮಂಗಳವಾರ ಸಮಾಲೋಚನಾ ಸಭೆ ನಡೆಸಿದರು. ಈ ವೇಳೆ ಬಹುತೇಕರು ಬಿಜೆಪಿಯಿಂದ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಕ್ಷೇತ್ರದಲ್ಲಿ ಹಾಲಿ ಜೆಡಿಎಸ್ ಶಾಸಕರಿದ್ದರೂ ಪಕ್ಷದ ವರಿಷ್ಠರು ಎ.ಮಂಜು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಕೆಟ್ ಘೋಷಣೆ ಮಾಡಿದ್ದರು. ಹೀಗಾಗಿ ರಾಮಸ್ವಾಮಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆಂಬ ಸುದ್ದಿ ದಟ್ಟವಾಗಿ ಹರಡಿತ್ತು. ಆದರೆ ಕಾಂಗ್ರೆಸ್ ವರಿಷ್ಠರಿಂದ ರಾಮಸ್ವಾಮಿ ಅವರಿಗೆ ಟಿಕೆಟ್ ಭರವಸೆ ದೊರೆತಿಲ್ಲ ಎನ್ನಲಾಗಿದೆ. ಹೀಗಾಗಿ ಸಭೆಯಲ್ಲಿ ಬಹುತೇಕ ಮಂದಿ ಬಿಜೆಪಿಯಿಂದ ಸ್ಪರ್ಧಿಸಲು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಮತದಾರರು, ಮುಖಂಡರ ಸಭೆ ಕರೆದು ಅವರೀಗ ಚರ್ಚೆ ನಡೆಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ರಾಜಕೀಯ ಸ್ಥಿತಿ ಚಿಂತಾಜನಕ: ಸಿ.ಎಂ.ಇಬ್ರಾಹಿಂ
ಟಿಕೆಟ್‌ಗಾಗಿ ಹಣ ಕೊಡುವ ಸಂಪ್ರದಾಯ ನಾನು ರೂಢಿಸಿಕೊಂಡಿಲ್ಲ. ನನ್ನ ಮೇಲೆ ವಿಶ್ವಾಸವಿಟ್ಟು ಯಾವ ಪಕ್ಷ ಟಿಕೆಟ್ ನೀಡಲು ಮುಂದಾಗುತ್ತೋ ಅದನ್ನು ನಿಮ್ಮೆಲ್ಲರ ಒಪ್ಪಿಗೆ ಪಡೆದು ಸ್ವೀಕರಿಸುವೆ. ಇಲ್ಲವಾದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂದರೆ ಅದಕ್ಕೂ ತಲೆಬಾಗುವೆ ಎಂದು ರಾಮಸ್ವಾಮಿ ಹೇಳಿದ್ದಾರೆ. ಆಗ ಬಹುತೇಕ ಮಂದಿ ಬಿಜೆಪಿಯಿಂದ ಸ್ಪರ್ಧಿಸಲು ಸಲಹೆ ನೀಡಿದ್ದಾರೆ. ಅಲ್ಲದೆ, ಮುಂದಿನ ಎರಡ್ಮೂರು ದಿನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಿ. ಯಾವುದೇ ಪಕ್ಷದಿಂದ ಸ್ಪರ್ಧಿಸಿದರು ಬೆಂಬಲ ನೀಡುತ್ತೇವೆ ಎಂದು ಸಭೆಯಲ್ಲಿದ್ದ ಮುಖಂಡರು ಹೇಳಿದ್ದಾರೆ.
ಹಾಲಿ ಶಾಸಕ ರಾಮಸ್ವಾಮಿ ದಳದಿಂದ ದೂರ: ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಜೋತು ಬೀಳದೆ ಆಯಾ ಕಾಲಕ್ಕೆ ತಕ್ಕಂತೆ ಆಯ್ಕೆ ಮಾಡುತ್ತಾ ಬಂದಿರುವ ಅರಕಲಗೂಡು ವಿಧಾನಸಭಾ ಕ್ಷೇತ್ರದ ಜನ ಈ ಬಾರಿ ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆ. ಏಕೆಂದರೆ ಇರುವ ಇಬ್ಬರು ಪ್ರಮುಖ ನಾಯಕರ ಪೈಕಿ ಎ.ಮಂಜು ಜೆಡಿಎಸ್ ಸಖ್ಯ ಬೆಳೆಸಿದ್ದರೆ, ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಜೆಡಿಎಸ್‌ನೊಂದಿಗೆ ದೂರವುಳಿದಿದ್ದಾರೆ. ಹಾಗಾಗಿ ಎ.ಟಿ.ರಾಮಸ್ವಾಮಿ ಅವರ ನಡೆ ಈ ಕ್ಷೇತ್ರದ ಮುಂದಿನ ಶಾಸಕ ಯಾರು ಎನ್ನುವುದನ್ನು ನಿರ್ಧರಿಸುತ್ತದೆ.
ನನ್ನ ರಾಜಕೀಯ ಜೀವನ ಉತ್ತುಂಗಕ್ಕೆ ಏರಿದ್ದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ: ಸಚಿವ ಸಿ.ಸಿ.ಪಾಟೀಲ್
ಕ್ಷೇತ್ರದಲ್ಲಿ ಶಾಸಕರಾದವರು ಎ.ಮಂಜು ಮತ್ತು ಎ.ಟಿ.ರಾಮಸ್ವಾಮಿ. ಇವರನ್ನು ಹೊರತುಪಡಿಸಿ ಉಳಿದವರಾರಯರಿಗೂ ಅಧಿಪತ್ಯ ಸ್ಥಾಪಿಸಲಾಗಿಲ್ಲ. ಆದರೆ, ಇತ್ತೀಚಿನ ಬೆಳವಣಿಗೆಗಳಲ್ಲಿ ಈ ಇಬ್ಬರೂ ನಾಯಕರ ನಡೆ ಹಾಗೂ ನಿರ್ಧಾರಗಳು ಕ್ಷೇತ್ರದ ಜನರನ್ನು ಗೊಂದಲಕ್ಕೀಡು ಮಾಡಿದೆ. ಮಾಜಿ ಸಚಿವರೂ ಆಗಿದ್ದ ಎ.ಮಂಜು ಆರಂಭದಲ್ಲಿ ಬಿಜೆಪಿಯಿಂದಲೇ ತಮ್ಮ ರಾಜಕೀಯ ವೃತ್ತಿ ಜೀವನ ಅರಂಭಿಸಿದರಾದರೂ ನಂತರದಲ್ಲಿ ಸಖ್ಯ ಬೆಳೆಸಿದ್ದು ಕಾಂಗ್ರೆಸ್‌ನೊಡನೆ. ಆ ಪಕ್ಷದಲ್ಲಿದ್ದುಕೊಂಡು ಶಾಸಕರೂ ಆದರು, ಸಚಿವರೂ ಆದರು. ಅದಾದ ನಂತರ ಮತ್ತೆ ಅವರು ಮುಖ ಮಾಡಿದ್ದು ಬಿಜೆಪಿಯತ್ತ. ಆದರೆ, ಅಲ್ಲಿಯೂ ಬದ್ಧತೆ ತೋರದ ಕಾರಣ ಇದೀಗ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಹಾಗಾಗಿ ಎ.ಮಂಜು ಅವರು ಇದೀಗ ಜೆಡಿಎಸ್ ಸೇರಿದ್ದು, ಕ್ಷೇತ್ರದ ಮುಂದಿನ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.