ರಕ್ತದಲ್ಲಿ ಬರೆದುಕೊಡುತ್ತೇನೆ ಕಾಂಗ್ರೆಸ್ ಈ ಬಾರಿ 140 ಸ್ಥಾನ ಗಳಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಡಾ.ಕೆ.ಸುಧಾಕರ್ ನಾನೂ ಅದೇ ರಕ್ತದಲ್ಲಿ ಬರೆದುಕೊಡುತ್ತೇನೆ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಸರ್ಕಾರ ರಚನೆ ಮಾಡಲ್ಲ.
ಚಿಕ್ಕಬಳ್ಳಾಪುರ (ಏ.27): ರಕ್ತದಲ್ಲಿ ಬರೆದುಕೊಡುತ್ತೇನೆ ಕಾಂಗ್ರೆಸ್ ಈ ಬಾರಿ 140 ಸ್ಥಾನ ಗಳಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಡಾ.ಕೆ. ಸುಧಾಕರ್ ನಾನೂ ಅದೇ ರಕ್ತದಲ್ಲಿ ಬರೆದುಕೊಡುತ್ತೇನೆ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಸರ್ಕಾರ ರಚನೆ ಮಾಡಲ್ಲ, ಅಧಿಕಾರಕ್ಕೆ ಬರುವುದಿಲ್ಲ, ಬದಲಿಗೆ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬುಧವಾರ ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಚುನಾವಣಾ ಪ್ರಚಾರದ ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಚುನಾವಣೆ ನಂತರ ಕಾಂಗ್ರೆಸ್ ಶಾಶ್ವತವಾಗಿ ಮುಳುಗುವ ದೋಣಿಯಾಗಲಿದೆ. ಡಿ.ಕೆ. ಶಿವಕುಮಾರ್ ಸಮೇತ ಬಿಜೆಪಿಗೆ ಬರುವ ದಿನಗಳು ದೂರವಿಲ್ಲ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ದೇಶದಲ್ಲಿ ಅವನತಿಗೆ ಬಂದಿದ್ದು, ಕರ್ನಾಟಕದಲ್ಲಿಯೂ ಅವನತಿ ಹೊಂದಲಿದೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೂ ಸಿಗುವುದಿಲ್ಲ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ನವರು ಯಾರ ಮೀಸಲಾತಿ ತೆಗೆಯುವುದಾಗಿ ನೇರವಾಗಿ ಹೇಳಲಿ, ಒಕ್ಕಲಿಗ, ಲಿಂಗಾಯಿತ, ಪರಿಶಿಷ್ಟರು ಇವರಲ್ಲಿ ಯಾರ ಮೀಸಲಾತಿ ತೆಗೆಯಲಿದ್ದೀರಾ ಎಂಬುದು ಹೇಳಿ, ನಿಮ್ಮದೇ ಸರ್ಕಾರ, ನಿಮ್ಮದೇ ಮುಖ್ಯಮಂತ್ರಿ, ನೀವೇ ಇಂಧನ ಸಚಿವರಾಗಿದ್ದರಲ್ಲ, ಆಗ ಯಾಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ ಎಂದು ಡಿಕೆಶಿಗೆ ಪ್ರಶ್ನಿಸಿದರು.
ಸಾ.ರಾ. ಆಯ್ಕೆಮಾಡಿ, ಎಚ್‌ಡಿಕೆಗೆ ಬಹುಮತ ನೀಡಿ: ಎಚ್.ಡಿ.ದೇವೇಗೌಡ
ಇದೇ ಸಮಯದಲ್ಲಿ ಗೊಲ್ಲಹಳ್ಳಿ ಗ್ರಾಮದ ರೈತ ಮಹಿಳೆಯೊಬ್ಬರು ಆರತಿ ತೆಗೆದು, ಅವರು ದುಡಿದ ಹಣವನ್ನು ಚುನಾವಣಾ ವೆಚ್ಚಕ್ಕಾಗಿ ಸಚಿವ ಡಾ.ಕೆ. ಸುಧಾಕರ್ ದೇಣಿಗೆಯಾಗಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ಜನರ ಇಂತಹ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಇದನ್ನು ಕ್ಷೇತ್ರದಲ್ಲಿ ನಾವು ಸಂಪಾದಿಸಿರುವುದು ಸಂತಸ ತಂದಿದೆ ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದ ಶಾಸಕನಾಗಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದೇನೆ ಹೀಗಾಗಿ ಮಹಿಳೆಯರು ನನ್ನನ್ನು ಸಹೋದರ ನಂತೆ ಮನೆಯ ಮಗನಂತೆ ಕಾಣುತ್ತಾರೆ ಎಂದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.
ಆರೋಗ್ಯದಲ್ಲಿ ಕ್ರಾಂತಿಕಾರ ಯೋಜನೆ: ಡಬಲ್ ಎಂಜಿನ್ ಸರ್ಕಾರ ಯಾಕೆ ಬೇಕು ಎಂದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ. ಪ್ರತಿಯೊಂದು ಕುಟುಂಬದ ಬಗ್ಗೆ ಅವರು ಕಾಳಜಿ ವಹಿಸಿದ್ದಾರೆ. ಆಯುಷ್ಮಾನ್ ಭಾರತ್ ಮೂಲಕ ಪ್ರತಿ ಕುಟುಂಬಕ್ಕೆ 5 ಲಕ್ಷ ರುಪಾಯಿ ಆರೋಗ್ಯ ವಿಮೆ ನೀಡಲಾಗುತ್ತಿದೆ. ಇಂತಹ ಆರೋಗ್ಯ ಭದ್ರತೆ ನೀಡಿದ ಸರ್ಕಾರ ವಿಶ್ವದಲ್ಲಿಯೇ ಎಲ್ಲಿಯೂ ಇಲ್ಲ ಎಂದರು.
ಕಾಂಗ್ರೆಸ್ ಪರಿಶಿಷ್ಟರಿಗೆ ಮೀಸಲಾತಿ ನೀಡಲಿಲ್ಲ: ಅನೇಕ ವರ್ಷಗಳಿಂದ ಕಾಂಗ್ರೆಸ್ ಮೊಸಳೆ ಕಣ್ಣೀರು ಹಾಕುವುದು, ಸುಳ್ಳು ಮಾತುಗಳನ್ನು ಹೇಳಿ ಮತ ಪಡೆಯುತ್ತಿತ್ತು. ಆದರೆ ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಲಿಲ್ಲ, ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ, ಒಳ ಮೀಸಲಾತಿ ನೀಡಿದ್ದು ಬಿಜೆಪಿ. ಬಲಿಜ ಸಮುದಾಯಕ್ಕೆ ಇದ್ದ 2ಎ ಮೀಸಲಾತಿ ತೆಗೆದಿದ್ದು ಕಾಂಗ್ರೆಸ್, ಆದರೆ ಬಿಜೆಪಿ ಸರ್ಕಾರ 2ಎ ಶೈಕ್ಷಣಿಕ ಮೀಸಲಾತಿ ನೀಡಿದೆ. 2ಸಿ ಮೀಸಲಾತಿಯಡಿ ಉದ್ಯೋಗಕ್ಕೆ ಶೇ.4ರಿಂದ 6ಕ್ಕೆ ಹೆಚ್ಚಿಸಲಾಗಿದೆ ಎಂದರು.
ನನಗೆ ಆರೋಗ್ಯಕ್ಕಿಂತ ಅಭ್ಯರ್ಥಿಗಳ ಗೆಲುವು ಮುಖ್ಯ: ಎಚ್.ಡಿ.ಕುಮಾರಸ್ವಾಮಿ
ಅನ್ನದಾತರಾದ ಒಕ್ಕಲಿಗರಿಗೆ ಜೆಡಿಎಸ್ ಮೀಸಲಾತಿ ಹೆಚ್ಚಿಸಲಿಲ್ಲ, ಪ್ರತಿ ವರ್ಗದ ಜನರಿಗೆ ನ್ಯಾಯ ಕೊಟ್ಟಿದ್ದು ಬಿಜೆಪಿ. ತಮಗೆ ಮತ ನೀಡಿದರೆ ಮೋದಿ ಅವರಿಗೆ ಶಕ್ತಿ ನೀಡಿದಂತಾಗುತ್ತದೆ. ಪುರುಷರಿಗೆ ಸಮಾನವಾಗಿ ಮಹಿಳೆಯರಿಗೆ ಕಲ್ಪಿಸಲು 10 ವರ್ಷ ಶ್ರಮಿಸಲಾಗಿದೆ ಎಂದರು. ತಾವೇ ಸುಧಾಕರ್ ಎಂದು ಕ್ಷೇತ್ರದ ಪ್ರತಿ ಮನೆಗೆ ಭೇಟಿ ನೀಡಿ ಕಾರ್ಯಕರ್ತರೇ ಮತ ಯಾಚನೆ ಮಾಡಬೇಕು. ಚುನಾವಣೆ ನಂತರ ಪ್ರತಿ ಗ್ರಾಮಕ್ಕೆ ಬಂದು ಮಾತನಾಡಿಸಲಾಗುವುದು. ಮೂರು ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷ ಸೂಚಿಸಿದೆ. ಹಾಗಾಗಿ ತಾವು ಕ್ಷೇತ್ರದಲ್ಲಿ ಹೆಚ್ಚು ಪ್ರಚಾರದಲ್ಲಿ ತೊಡಗಲು ಸಾಧ್ಯವಿಲ್ಲ. ಇಂದಿನಿಂದ ತಮ್ಮ ಪರವಾಗಿ ನೀವೇ ಮತಯಾಚನೆ ಮಾಡಬೇಕು ಎಂದು ಮನವಿ ಮಾಡಿದರು.