
ಮೈಸೂರು (ಏ.26): ಲಿಂಗಾಯತ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸಮುದಾಯದ ಪ್ರತಿನಿಧಿ ಅಲ್ಲ, ನಾಡಿನ ಪ್ರತಿನಿಧಿ. ಸಿಎಂ ಹುದ್ದೆಯನ್ನು ಜಾತಿಗೆ ಸೀಮಿತ ಮಾಡಬೇಡಿ. ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯ ಪಕ್ಷಗಳು ನಾಯಕರನ್ನು ಆಯ್ಕೆ ಮಾಡುತ್ತವೆ. ಆದರೆ, ನಾಡಿನ ಹಿತದೃಷ್ಟಿಇಟ್ಟುಕೊಂಡು ಸಿಎಂ ಕೆಲಸ ಮಾಡಬೇಕು ಎಂದರು. ಆ ಸಮುದಾಯದ ಬಗ್ಗೆ ಸಿದ್ದರಾಮಯ್ಯ ಹೇಳಿಕೆಯೂ ಸರಿಯಲ್ಲ. ಅವರು ಒಬ್ಬ ಅನುಭವಿ ರಾಜಕಾರಣಿ. ಅಂಥವರ ಬಾಯಲ್ಲಿ ಆ ಮಾತು ಯಾಕೆ ಬಂತು ಅಂತ ಗೊತ್ತಿಲ್ಲ. ಯಾವ ಅರ್ಥದಲ್ಲಿ ಆ ಮಾತು ಹೇಳಿದ್ದರೋ ಗೊತ್ತಿಲ್ಲ. ಬಹುಶಃ ಕಾಂಗ್ರೆಸ್ ಮುಗಿಸಬೇಕು ಅಂತ ಆ ರೀತಿ ಹೇಳಿರಬಹುದು. ಭ್ರಷ್ಟಾಚಾರ ವಿಚಾರ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಎಂದು ಅವರು ಹೇಳಿದರು.
ಅಮಿತ್ ಶಾ, ಪ್ರಿಯಾಂಕ ಗಾಂಧಿ ಆಟ ರಾಜ್ಯದಲ್ಲಿ ನಡೆಯದು: ಕಾಂಗ್ರೆಸ್, ಬಿಜೆಪಿಗಿಂತ ನಮ್ಮ ಜೆಡಿಎಸ್ ಸ್ಥಾನ ದೊಡ್ಡದಿರುತ್ತದೆ. ಅಮಿತ್ ಶಾ, ಪ್ರಿಯಾಂಕ ಗಾಂಧಿ ಆಟ ರಾಜ್ಯದಲ್ಲಿ ನಡೆಯುವುದಿಲ್ಲ. ಕನ್ನಡ ನಾಡಿಗೆ ಅವರ ಕೊಡುಗೆ ಏನೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾಗೆ ರಾಜ್ಯದಲ್ಲಿ ಜನ ಬೆಂಬಲ ವ್ಯಕ್ತವಾಗುತ್ತಿಲ್ಲ. ಅವರ ರಾರಯಲಿಗೆ ಹೆಚ್ಚಿನ ಜನರು ಬರುತ್ತಿಲ್ಲ.
ಹನುಮ ಮಂದಿರಕ್ಕಾಗಿ ಬಿಜೆಪಿಗೆ ಮತ ನೀಡಿ: ಸಿ.ಟಿ.ರವಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಜನ ಬೆಂಬಲ ಕಳೆದುಕೊಂಡಿದ್ದಾರೆ ಎಂದರು. ಜೆಡಿಎಸ್ ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಜೆಡಿಎಸ್‌ನ ಸ್ವತಂತ್ರ ಸರ್ಕಾರ ಬರುವುದು ನಿಶ್ಚಿತ. ಹೊಸದಾಗಿ ಪಕ್ಷಕ್ಕೆ ಬಂದಿರುವವರ ಪೈಕಿಯೇ 20 ಮಂದಿ ಗೆಲ್ಲಲಿದ್ದಾರೆ. ಜೆಡಿಎಸ್ ಇಟ್ಟಿರುವ ನಿಗದಿತ ಗುರಿ ತಲುಪಿ ಯಾರ ಹಂಗು ಇಲ್ಲದೇ ಸರ್ಕಾರ ರಚಿಸಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭ್ರಮೆ ಬೇಡ: ಅಮಿತ್ ಶಾ ಮೈಸೂರು ಭಾಗದಲ್ಲಿ ಬಂದಾಕ್ಷಣ ಲಗ್ಗೆ ಇಟ್ಟಹಾಗ? ಅದೆಲ್ಲ ಮತವಾಗಿ ಬದಲಾಗಬೇಕಲ್ಲ? ಅಮಿತ್ ಶಾ ಅವರ ಕಾರ್ಯಕ್ರಮ ನೋಡಿದ್ದೇನೆ. ನನಗೆ ಬಂದಿದ್ದ ಜನ ಅವರಿಗೆ ಬಂದಿಲ್ಲ. ಅವರು ರೋಡ್ ಶೋ ಮಾಡಿದಾಕ್ಷಣ ಭದ್ರಕೋಟೆ ಲಗ್ಗೆ ಹಾಕಿದ್ರು ಅನ್ನೋ ಭ್ರಮೆ ಬೇಡ. ನಮಗೆ ಸಿಕ್ಕ ಸ್ಪಂದನೆ ಬಿಜೆಪಿ, ಕಾಂಗ್ರೆಸ್‌ಗೆ ಸಿಕ್ಕಲ್ಲ ಎಂದರು. ಮುಂದಿನ 15 ದಿನಗಳ ಪ್ರಚಾರದಲ್ಲಿ ನಮ್ಮನ್ನು ಕುಗ್ಗಿಸಲು ಆಗಲ್ಲ. 123 ಗುರಿಯನ್ನು ತಾಯಿ ಚಾಮುಂಡೇಶ್ವರಿ ಮುಟ್ಟಿಸುತ್ತಾಳೆ. ಕೇಂದ್ರ ನಾಯಕರು ಬರ್ತಾರೆ ಹೋಗುತ್ತಾರೆ. ಅವರಿಗೂ ಕನ್ನಡ ನಾಡಿಗೂ ಸಂಬಂಧ ಏನಿದೆ?
ಕಪಿಮುಷ್ಟಿಹೇಳಿಕೆ ಹೇಳೋಕೆ ದೆಹಲಿಯಿಂದ ಅಮಿತ್ ಶಾ ಬರಬೇಕಿತ್ತಾ? ಕನ್ನಡಿಗ ಪ್ರಧಾನಿ ಯಾಕೆ ಕೆಳಗಿಳಿಸಿದ್ರಿ ಕಾಂಗ್ರೆಸ್ ಹೇಳಿಲ್ಲ. ಇವರು 140 ಸೀಟ್ ಗೆಲ್ಲಬೇಕು. ಆದರೆ, ಗೆದ್ದು ಏನು ಮಾಡುತ್ತೇವೆ ಎನ್ನುವ ಕಾರ್ಯಕ್ರಮ ಇಲ್ಲ ಎಂದು ಅವರು ಕುಟುಕಿದರು. ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಪರ ರಾಜಕೀಯ ಹೇಳಿಕೆಗಳಲ್ಲಿ ಮಗ್ನ ಆಗಿವೆ. ನನಗೆ ಪ್ರಚಾರ ಸಿಗದಿರಬಹುದು. ಆದರೆ, ಜನರ ಮನಸ್ಸಿನಲ್ಲಿ ಇದ್ದೇನೆ. ಬೆಂಗಳೂರಿನಲ್ಲಿ 9, ಬೆಳಗಾವಿ 6 ಸ್ಥಾನ ಗೆಲ್ಲುತ್ತೇನೆ. ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇನೆ ಎಂದರು.
ನನ್ನ ಹೆಸರು ದುರ್ಬಳಕೆ ನಿಲ್ಲಿಸಬೇಕು: ಕುಮಾರಸ್ವಾಮಿ ನನ್ನನ್ನು ಬೆಂಬಲಿಸಿದ್ದಾರೆಂಬ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಎಸ್.ಸಿದ್ದೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗರು ಎಚ್.ಡಿ. ದೇವೇಗೌಡ ಹಾಗೂ ಜಿ.ಟಿ. ದೇವೇಗೌಡರಿಗೆ ಮೀಸಲಿದೆ. ಒಕ್ಕಲಿಗರ ಮತ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆ ಇಲ್ಲ. ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುವುದನ್ನು ಅವರು ನಿಲ್ಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡಗೆ ನಾನ್ಯಾಕೆ ಬೆಂಬಲ ನೀಡಲಿ ಎಂದು ತಿರುಗೇಟು ನೀಡಿದರು. ಒಕ್ಕಲಿಗರು ಸಿದ್ದೇಗೌಡ ಮಾತಿಗೆ ಕಿವಿಗೊಡಬೇಡಿ.
ಅಮಿತ್ ಶಾ ಮಾತನಾಡಿದ್ರು ವಿಶ್ವಾಸ ದ್ರೋಹ ಮಾಡಿ ಶೆಟ್ಟರ್ ಹೋಗಿದ್ದಾರೆ: ಬಿ.ಎಸ್.ಯಡಿಯೂರಪ್ಪ
ಸುಳ್ಳು ಹೇಳಿಕೊಂಡು ಓಡಾಡುತ್ತಿರುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಜಿ.ಟಿ. ದೇವೇಗೌಡ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಶಾಸಕರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಸಿ.ಎನ್. ಮಂಜೇಗೌಡ ಮೊದಲಾದವರು ಇದ್ದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.