ಯಾವುದೇ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಸಾಥ್ ಇರುತ್ತದೆ ಎಂಬ ಮಾತಿದೆ. ಅದೇ ರೀತಿ ಇದೀಗ ಚುನಾವಣಾ ಕಣದಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಅವರ ಪತ್ನಿಯರೇ ಬೆವರು ಸುರಿಸುತ್ತಿದ್ದಾರೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಏ.22) : ಯಾವುದೇ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಸಾಥ್ ಇರುತ್ತದೆ ಎಂಬ ಮಾತಿದೆ. ಅದೇ ರೀತಿ ಇದೀಗ ಚುನಾವಣಾ ಕಣದಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಅವರ ಪತ್ನಿಯರೇ ಬೆವರು ಸುರಿಸುತ್ತಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಪತ್ನಿಯರ ಅಬ್ಬರದ ಪ್ರಚಾರ ನಡೆಯುತ್ತಿದೆ. ಕೆಲವರಂತೂ ಟಿಕೆಟ್ ಘೋಷಣೆಗೂ ಮುನ್ನವೇ ಪ್ರಚಾರ ಶುರು ಹಚ್ಚಿಕೊಂಡಿದ್ದರು. ಇನ್ನು ಕೆಲ ಅಭ್ಯರ್ಥಿಗಳ ಪತ್ನಿಯರು ಟಿಕೆಟ್ ಘೋಷಣೆಗೆ ಮುನ್ನ ಒಂದು ಪಕ್ಷದ ಟಿಕೆಟ್ ಸಿಗುವ ನಂಬಿಕೆ ಮೇಲೆ ಪ್ರಚಾರ ನಡೆಸುತ್ತಿದ್ದರು. ಆದರೆ ಅಲ್ಲಿ ಟಿಕೆಟ್ ಸಿಗದೇ ಬೇರೆ ಪಕ್ಷಕ್ಕೆ ಸೇರಿದ್ದರಿಂದ ಇದೀಗ ಆ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.
ಚುನಾವಣೆ ಕಣಕ್ಕೆ ರಂಗು ತುಂಬಿದ ಪತ್ನಿಯರು: ಕುಂಕುಮ ತಿಲಕವಿಟ್ಟು ಮತ ಯಾಚನೆ
ಎಲ್ಲೆಲ್ಲಿ ಪ್ರಚಾರ:
ಪ್ರಮುಖವಾಗಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪತ್ನಿಯರ ಆರ್ಭಟ ಕೊಂಚ ಜೋರಾಗಿದೆ. ಇಲ್ಲಿ ವಿನಯ ಕುಲಕರ್ಣಿ ಅವರಂತೂ ಧಾರವಾಡ ಜಿಲ್ಲೆಗೆ ಪ್ರವೇಶಿಸುವಂತೆಯೇ ಇಲ್ಲ. ಹೀಗಾಗಿ ಪತಿಯ ಗೈರಿನಲ್ಲೇ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ಪತ್ನಿ ಶಿವಲೀಲಾ ಹೆಗಲ ಮೇಲಿದೆ. ಈ ಗೆಲುವಿನ ಮೂಲಕ ಎದುರಾಳಿಗಳಿಗೆ ತಕ್ಕ ಉತ್ತರ ಕೊಡಬೇಕೆನ್ನುವ ಇರಾದೆ ಶಿವಲೀಲಾ ಅವರದು.
ಹೀಗಾಗಿ ಟಿಕೆಟ್ ಘೋಷಣೆಯಾದಾಗಿನಿಂದ ಒಂದು ದಿನವೂ ವಿಶ್ರಮಿಸದೇ ನಿರಂತರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಅಕ್ಷರಶಃ ತಾವೇ ಅಭ್ಯರ್ಥಿಯೆಂಬಂತೆ ಬೆಳಿಗ್ಗೆಯಿಂದ ರಾತ್ರಿವರೆಗೂ ಊರೂರು ಸುತ್ತತ್ತಾ ಬೆವರಿಳಿಸುತ್ತಿದ್ದಾರೆ.
ಇನ್ನುಳಿದ ಕ್ಷೇತ್ರಗಳಾದ ಸೆಂಟ್ರಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರಿಗೂ ಈ ಚುನಾವಣೆ ಅಕ್ಷರಶಃ ಅಗ್ನಿ ಪರೀಕ್ಷೆಯೇ ಆಗಿದೆ. ಬಿಜೆಪಿ ಸಿದ್ಧಾಂತದಿಂದಲೇ ರಾಜಕಾರಣ ಪ್ರವೇಶಿಸಿದ ಅವರು, ಇದೀಗ ಕಾಂಗ್ರೆಸ್ ಅಭ್ಯರ್ಥಿ. ಹೀಗಾಗಿ ಪತ್ನಿ ಶಿಲ್ಪಾ ಶೆಟ್ಟರ್ ಕೂಡ ಬೆವರಿಳಿಸುತ್ತಿದ್ದಾರೆ. ಹಾಗೆ ನೋಡಿದರೆ ಪ್ರತಿ ಚುನಾವಣೆಯಲ್ಲೂ ಶೆಟ್ಟರ್‌ಗೆ ಶಿಲ್ಪಾ ಸಾಥ್ ನೀಡುವುದು ಮಾಮೂಲಿ. ಆದರೆ ಇದೀಗ ತಮ್ಮ ಮೂಲ ಪಕ್ಷದ ವಿರುದ್ಧವೇ ಸ್ಪರ್ಧಿಗಿಳಿದಿರುವುದರಿಂದ ಕೊಂಚ ಜಾಸ್ತಿ ಕಸರತ್ತು ನಡೆಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರ ಪತ್ನಿ, ಕಲಘಟಗಿ ಬಿಜೆಪಿ ಅಭ್ಯರ್ಥಿ ಪರ ನಾಗರಾಜ ಛಬ್ಬಿ ಪರ ಪತ್ನಿ ಜ್ಯೋತಿ ಛಬ್ಬಿ, ಕುಂದಗೋಳ ಬಿಜೆಪಿ ಅಭ್ಯರ್ಥಿ ಎಂ.ಆರ್.ಪಾಟೀಲ ಪರ ಪತ್ನಿ ಶಶಿಕಲಾ ಪಾಟೀಲ ಹೀಗೆ ಎಲ್ಲ ಅಭ್ಯರ್ಥಿಗಳ ಪರವಾಗಿ ಪತ್ನಿಯರ ಸುತ್ತಾಟ ಬಲು ಜೋರಾಗಿದೆ.
Karnataka election 2023: ರಘುಮೂರ್ತಿ ಆಯ್ಕೆ ಮಾಡಿ ಅಭಿವೃದ್ಧಿಗೆ ಕೈಜೋಡಿಸಿ: ಕೆ ವೀರಭದ್ರಪ್ಪ
ಮಹಿಳೆಯರೇ ಟಾರ್ಗೆಟ್:
ಹೀಗೆ ಅಡ್ಡಾಡುವ ಅಭ್ಯರ್ಥಿಗಳ ಪತ್ನಿಯರಿಗೆ ಮಹಿಳೆಯರೇ ಟಾರ್ಗೆಟ್. ಮಹಿಳೆಯರಿದ್ದಲ್ಲಿ ಸಲೀಸಾಗಿ ಅಡುಗೆ ಮನೆಯವರೆಗೂ ಸಂಪರ್ಕ ಸಾಧಿಸಲು ಸಾಧ್ಯ. ಜತೆಗೆ ದೇವಸ್ಥಾನ, ವಾರದ ಸಂತೆ ಸೇರಿದಂತೆ ವಿವಿಧೆಡೆ ಮಹಿಳೆಯರನ್ನು ಕಂಡು ಪ್ರಚಾರದಲ್ಲಿ ತೊಡಗುತ್ತಿದ್ದಾರೆ. ಮಹಿಳೆಯರೊಂದಿಗೆ ಬೆರೆತು ತಮ್ಮ ತಮ್ಮ ಪತಿ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಅಭ್ಯರ್ಥಿಗಳ ಪರ ಪತ್ನಿಯರ ಅಬ್ಬರದ ಪ್ರಚಾರವಂತೂ ನಡೆಯುತ್ತಿರುವುದು ಸತ್ಯ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.