ಚುನಾವಣೆ ಸಿಬ್ಬಂದಿಗಳು ಮತದಾನ ಸ್ಥಗಿತಗೊಳಿಸಿ ಮತಯಂತ್ರಗಳನ್ನು ವಾಪಸ್ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಪ್ಪು ಬಾವಿಸಿ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಗ್ರಾಮಸ್ಥರು ಮತಯಂತ್ರಗಳನ್ನು ಪುಡಿ ಪುಡಿ ಮಾಡಿದ ಘಟನೆ ನಡೆದಿದೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಮೇ.10): ಚುನಾವಣೆ ಸಿಬ್ಬಂದಿಗಳು ಮತದಾನ ಸ್ಥಗಿತಗೊಳಿಸಿ ಮತಯಂತ್ರಗಳನ್ನು ವಾಪಸ್ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಪ್ಪು ಬಾವಿಸಿ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಗ್ರಾಮಸ್ಥರು ಮತಯಂತ್ರಗಳನ್ನು ಪುಡಿ ಪುಡಿ ಮಾಡಿದ ಘಟನೆ ನಡೆದಿದೆ. ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ಸಿಬ್ಬಂದಿಗಳು ಮತಯಂತ್ರಗಳನ್ನು ವಾಪಸ್ ತೆಗೆದುಕೊಂಡು ಬರುತ್ತಿದ್ದ ಈ ಅವಘಡ ನಡೆದಿದೆ.
ಮತಯಂತ್ರಗಳನ್ನ ಪುಡಿಪುಡಿ ಮಾಡಿದ ಗ್ರಾಮಸ್ಥರು: ಸೆಕ್ಟರ್ ಆಫೀಸರ್ ವಿವಿಪ್ಯಾಟ್, ಇವಿಎಂ ಮಶೀನ್ ತೆಗೆದುಕೊಂಡು ಬರ್ತಿದ್ದ ಕಾರ್‌ಗೆ ಬೆನ್ನುಬಿದ್ದ ಮಸಬಿನಾಳ ಗ್ರಾಮಸ್ಥರು, ಮೊದಲು ಕಾರನ್ನ ನಿಲ್ಲಿಸಿದ್ದಾರೆ. ಎಲ್ಲಿಂದ ಎಲ್ಲಿಗೆ ಮಶೀನ್‌ಗಳನ್ನ ಕೊಂಡೊಯ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ವೇಳೆ ಸಿಬ್ಬಂದಿಗಳು ಸರಿಯಾದ ಮಾಹಿತಿ ನೀಡದ ಕಾರಣ ಇವಿಎಂ ಮಶೀನ್ ಹಾಗೂ ವಿವಿಪ್ಯಾಟ್ ಮಶೀನ್‌ಗಳನ್ನು ಗ್ರಾಮಸ್ಥರು ಒಡೆದು ಹಾಕಿದ್ದಾರೆ. ಜತೆಗೆ ಚುನಾವಣಾ ಸಿಬ್ಬಂದಿಯ ಕಾರು ಸಹ ಜಖಂಗೊಳಿಸಿದ್ದಾರೆ. ಈ ವೇಳೆ ಕಾರಲ್ಲಿದ್ದ ಸೆಕ್ಟರ್ ಆಫೀಸರ್ ಹಾಗೂ ಸಿಬ್ಬಂದಿಗಳ ಮೇಲೆಯು ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಮಶೀನ್‌ಗಳನ್ನ ಮನಬಂದಂತೆ ಮೇಲೆ ಹಾರಿಸಿ ಪುಡಿಪುಡಿ ಮಾಡಿದ್ದಾರೆ.
ರಾಜ್ಯದಲ್ಲಿ ಸ್ಥಿರ ಮತ್ತು ಬಹುಮತದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ: ಸಿಎಂ ಬೊಮ್ಮಾಯಿ
ಅವು ಕಾಯ್ದಿರಿಸಿದ್ದ ಮತಯಂತ್ರಗಳು: ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಚುನಾವಣಾಧಿಕಾರಿಗಳು ಇವು ಕಾಯ್ದಿರಿಸಿದ ಮತಯಂತ್ರಗಳು ಎಂದಿದ್ದಾರೆ. ಕಾಯ್ದಿಟ್ಟ ಮತಯಂತ್ರಗಳನ್ನು ಸಿಬ್ಬಂದಿ ತೆಗೆದುಕೊಂಡು ಹೋಗುವಾಗ, ಮತದಾನ ಅರ್ಧಕ್ಕೆ ಸ್ಥಗಿತಗೊಳಿಸಿ ಮತಯಂತ್ರಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರು ತಪ್ಪು ಕಲ್ಪನೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಿಬ್ಬಂದಿಗಳನ್ನು ಗ್ರಾಮಸ್ಥರು ಪ್ರಶ್ನಿಸಿದಾಗ ಸರಿಯಾಗಿ ಉತ್ತರ ನೀಡದ ಕಾರಣ ರೊಚ್ಚಿಗೆದ್ದು ವಿವಿಪ್ಯಾಡ್ ಇವಿಎಂ ಮಶೀನ್ ಪುಡಿಪುಡಿ ಮಾಡಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಗ್ರಾಮಸ್ಥರು ಚುನಾವಣಾ ಸಿಬ್ಬಂದಿಗಳನ್ನು ಸಹ ಥಳಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಮಸಬಿನಾಳ ಗ್ರಾಮಕ್ಕೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ: ಘಟನೆ ಕುರಿತು ಪರಿಶೀಲನೆ ನಡೆಸಲು ಖುದ್ದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಸಬಿನಾಳ ಗ್ರಾಮಕ್ಕೆ ಭೇಟಿ ನೀಡಿದರು. ಘಟನೆ ಬಗ್ಗೆ ಬಸವನಬಾಗೇವಾಡಿ ಡಿವೈಎಸ್‌ಪಿಯಿಂದ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟಿಕರಣ ನೀಡಿದ ಸೆಕ್ಟರ್ ಅಧಿಕಾರಿ ಜನರ ತಪ್ಪು ಕಲ್ಪನೆಯಿಂದಾಗಿ ಈ ಘಟನೆ ನಡೆದಿದೆ ಎಂದು ಡಿಸಿಯವರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ವಿವಿಪ್ಯಾಟ್, ಇವಿಎ ಯಂತ್ರ ಒಡೆದು ಹಾಕಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಡಿಸಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Koppal: 5ರ ಹೊಸ ನಾಣ್ಯ ಹಾಕಿ ನೀರು ಪಡೆಯುವ ವ್ಯವಸ್ಥೆಯಿಂದ ಫಜೀತಿ
23 ಜನರನ್ನ ಬಂಧಿಸಿ ವಶಕ್ಕೆ ಪಡೆದ ಪೊಲೀಸರು: ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆದಿದ ಎಸ್ಪಿ ಆನಂದಕುಮಾರ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ 25-30 ಜನರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದೇವೆ. ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇಂಥ ಕೃತ್ಯದಲ್ಲಿ ಭಾಗವಹಿಸಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಇಂದು (ಮೇ.10) ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.