ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸೂಚನೆ ಮೇರೆಗೆ ರಾಜ್ಯ ರಾಜಕಾರಣಕ್ಕೆ ಕಳುಹಿಸಿದ್ದು, ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ.
ವಿಜಯಪುರ (ಮಾ.27): ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸೂಚನೆ ಮೇರೆಗೆ ರಾಜ್ಯ ರಾಜಕಾರಣಕ್ಕೆ ಕಳುಹಿಸಿದ್ದು, ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ. ಮುಖ್ಯಮಂತ್ರಿಯನ್ನು ಚುನಾಯಿತ ಶಾಸಕರು ಹಾಗೂ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಸಮೀಪದ ಭಟ್ಟರೇನಹಳ್ಳಿಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಹಾಗೂ ಶಿರಡಿ ಸಾಯಿ ಮಂದಿರ ದೇವಾಲಯದಲ್ಲಿ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಬಡವರಾಗಿರುವ ಬ್ರಾಹ್ಮಣರಾಗಲಿ, ಲಿಂಗಾಯತರಾಗಲಿ, ಒಕ್ಕಲಿಗರಾಗಲಿ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಎಲ್ಲರಿಗೂ ಮೀಸಲು ಕಲ್ಪಿಸುವ ಮೂಲಕ ಭಾರತದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರೆಯುವಂತಾಗಬೇಕೆಂದು ಕೆ.ಎಚ್ ಮುನಿಯಪ್ಪ ತಿಳಿಸಿದರು.
ಬಳ್ಳಾರಿ ಗ್ರಾಮೀಣದಲ್ಲಿ ದೋಸ್ತಿಗಳ ನಡುವೆ ಕುಸ್ತಿ: ಕಾಂಗ್ರೆಸ್‌ನಿಂದ ಶಾಸಕ ನಾಗೇಂದ್ರಗೆ ಟಿಕೆಟ್
ಇತ್ತೀಚೆಗೆ ಸರ್ಕಾರ ತಂದಿರುವ ಮೀಸಲಾತಿ ಬದಲಾವಣೆ ನಿಜವಾಗಲೂ ಜನರಿಗೆ ಅನುಕೂಲವಾಗಬೇಕೆಂದಿದ್ದರೆ ಮೂರು ವರ್ಷಗಳ ಮುನ್ನವೇ ಜಾರಿಗೊಳಿಸಿ ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಬೇಕಿತ್ತು. ಇದೀಗ ಚುನಾವಣಾ ಸಂದರ್ಭದಲ್ಲಿ ಮೀಸಲಾತಿ ಬದಲಾವಣೆ ತಂದಿದ್ದು, ಇದು ಕೇವಲ ಚುನಾವಣಾ ತಂತ್ರವೆಂದು ಜನರು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಬಂದ ನಂತರ ಪರಿಶಿಷ್ಟಜಾತಿಯಲ್ಲಿರುವ ನೂರೊಂದು ಜಾತಿಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ ಎಂದು ಹೇಳಿದರು.
ಪಕ್ಷದ ಕೆಲವರು ದೇವನಹಳ್ಳಿ ಕ್ಷೇತ್ರಕ್ಕೆ ಕೆ.ಎಚ್.ಮುನಿಯಪ್ಪ ಕೊಡುಗೆ ಏನೆಂದು ಪ್ರಶ್ನಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ತಾವು ಕೇಂದ್ರ ಮಂತ್ರಿಯಾಗಿ ತನ್ನ ಕೊಡುಗೆ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದೆ ರಾಷ್ಟ್ರಕ್ಕೆ ನೀಡಿದ ಕೊಡುಗೆಯಾಗಿದೆ. ಹೈದರಾಬಾದ್, ಚೆನ್ನೈ, ಹೊಸೂರು ಹೆದ್ದಾರಿಗಳ ನಿರ್ಮಾಣ ತಮ್ಮ ಅವಧಿಯಲ್ಲಿ ಆಗಿದೆ. ದೇವನಹಳ್ಳಿ ರೈಲ್ವೆ ಸ್ಟೇಷನ್ ಹಾಗೂ ಬ್ರಾಡ್‌ಗೇಜ್ ನಿರ್ಮಾಣ, ನರಸಾಪುರ, ವೇಮ್‌ಗಲ್ ಬಳಿ ಕೆಐಎಡಿಬಿ ಇಂಡಸ್ಟ್ರಿಯಲ್ ನಗರ ನಿರ್ಮಾಣದಿಂದ ಲಕ್ಷಾಂತರ ಮಂದಿಗೆ ನೌಕರಿ ಸಿಕ್ಕಿರುವುದೇ ನನ್ನ ಸಾಧನೆ ಎಂದರು.
ಕೇಂದ್ರದಿಂದ ಹೈದರಾಬಾದ್ ಮುಕ್ತಿ ದಿನಾಚರಣೆ: ಅಮಿತ್ ಶಾ
ರಾಹುಲ್ ಗಾಂಧಿ ಸಂಸದ ಸ್ಥಾನ ವಜಾ ಮಾಡುವ ಮೂಲಕ ಹಿಟ್ಲರ್ ಮುಸಲೋನಿ ತರ ದರ್ಬಾರ್ ನಡೆಸುತ್ತಿದ್ದು ಕೊನೆಗೆ ಅವರುಗಳಂತೆಯೇ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಮೋದಿ ಸರ್ಕಾರಕ್ಕೂ ಬರುತ್ತದೆ. ವರ್ಷಕ್ಕೊಮ್ಮೆಯೂ ರಾಜ್ಯಕ್ಕೆ ಬಾರದ ಪ್ರಧಾನ ಮಂತ್ರಿಗಳು, ಇದೀಗ ವಾರಕ್ಕೊಮ್ಮೆ ಬರುತ್ತಿರುವುದು ಈಗಾಗಲೇ ಅವರ ಪಕ್ಷದ ಸರ್ವೆಯಲ್ಲಿಯೇ ತಿಳಿಸಿರುವಂತೆ ಅಧಿಕಾರ ಕೈ ಬಿಟ್ಟು ಹೋಗುವ ಭಯದಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತಿರುವರೆಂದು ತಿಳಿಸಿದರು. ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಜಿಪಂ ಮಾಜಿ ಸದಸ್ಯ ಚಂದೇನಹಳ್ಳಿ ಮುನಿಯಪ್ಪ, ಕಾಂಗ್ರೆಸ್ ಎಸ್ಸಿ ಘಟಕದ ಗೊಡ್ಲುಮುದ್ದೇನಹಳ್ಳಿ ಮುನಿರಾಜು, ಮಳ್ಳೂರು ರಾಮರೆಡ್ಡಿ, ಬಿಸೇಗೌಡರು, ಅಶ್ವತ್, ನಾಗರಾಜು, ಸೋಮಣ್ಣ, ಸುಬ್ರಹ್ಮಣಿ, ಶಿರಡಿ ಸಾಯಿ ಮಂದಿರದ ಸಂಚಾಲಕ ನಾರಾಯಣಸ್ವಾಮಿರವರು ಇತರರಿದ್ದರು.