ಕೊಟ್ಟಮಾತು ಉಳಿಸಿಕೊಳ್ಳುವ ನಾಯಕ ಎಚ್‌ಡಿಕೆ: ರೇವಣ್ಣ ಗುಣಗಾನ

By Kannadaprabha NewsFirst Published Apr 5, 2023, 1:59 PM IST
Highlights

ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಾಯಕ ಎಂದರೆ ಅದು ಕುಮಾರಸ್ವಾಮಿ. ಅವರು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಕುಮಾರಸ್ವಾಮಿಯ ಗುಣಗಾನ ಮಾಡಿದ್ದಾರೆ. 

ಬೇಲೂರು (ಏ.05): ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಾಯಕ ಎಂದರೆ ಅದು ಕುಮಾರಸ್ವಾಮಿ. ಅವರು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಕುಮಾರಸ್ವಾಮಿಯ ಗುಣಗಾನ ಮಾಡಿದ್ದಾರೆ. ಬೇಲೂರು ಚೆನ್ನಕೇಶವ ಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್‌, ಕುಮಾರಸ್ವಾಮಿ ಹಾಗೂ ರೇವಣ್ಣ ಅವರನ್ನು ಮುಗಿಸಬೇಕೆಂದು ಹಲವು ತಂತ್ರಗಾರಿಕೆ ನಡೆಸುತ್ತಿವೆ. 

ಆದರೆ, ಚೆನ್ನಕೇಶವನ ಆಶೀರ್ವಾದ ಮತ್ತು ದೇವೇಗೌಡ್ರು ಇರುವ ತನಕ ಯಾರೂ, ಏನು ಮಾಡಲು ಸಾಧ್ಯವಿಲ್ಲ. ದೇವೇಗೌಡರ ಕುಟುಂಬವನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕುಮಾರಸ್ವಾಮಿಯವರು ಮತ್ತೆ ಸಿಎಂ ಆಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು. ದೇವೇಗೌಡರ ಕುಟುಂಬದಲ್ಲಿ ಮಾತ್ರ ಕುಟುಂಬ ರಾಜಕಾರಣ ಇರುವುದು ಎನ್ನುವವರಿಗೆ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಇರುವುದು ಕಾಣುತ್ತಿಲ್ಲವಾ? ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ಇದೇ ವೇಳೆ, ಮೀಸಲಾತಿ ಬಗ್ಗೆ ಪ್ರತಿಕ್ರಿಯಿಸಿ, ದೇವೇಗೌಡರು ಮುಸ್ಲಿಮರಿಗೆ ಮೀಸಲಾತಿ ನೀಡುವ ಮೂಲಕ ಆ ಸಮಾಜಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದರು. 

Latest Videos

ನಾನು ಕಿಂಗ್‌ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಆದರೆ, ಮುಸ್ಲಿಮರ ರಂಜಾನ್‌ ಉಪವಾಸದ ಸಂದರ್ಭದಲ್ಲಿಯೇ ಮೀಸಲಾತಿ ತೆಗೆದಿದ್ದಾರೆ. ಡೋಂಗಿ ಹಿಂದುತ್ವದ ಭಕ್ತಿಯ ಮೂಲಕವೇ ಬಿಜೆಪಿ ಸರ್ವನಾಶ ಆಗುತ್ತೆ ಎಂದು ಕಿಡಿ ಕಾರಿದರು. ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್‌ನವರು ತಮ್ಮ ಬಸ್‌ ಹತ್ತಿ ಎನ್ನುತ್ತಿದ್ದಾರೆ. ಆದರೆ, ಅದು ಕೆಟ್ಟಿರುವ ಬಸ್‌, ಇದನ್ನು ಶೆಡ್ಡಿಗೆ ಹಾಕಿ ಎಂದು ಮೋದಿಯವರೇ ಹೇಳಿದ್ದಾರೆ. ಕರ್ನಾಟಕದಲ್ಲಿ ಇನ್ನು 40 ದಿನ ಆ ಬಸ್‌ ಓಡಲಿದೆ. ನಂತರ, ಎಲ್ಲಿ ನಿಲ್ಲುತ್ತೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

6, 7ಕ್ಕೆ ಹಾಸನ ಜೆಡಿಎಸ್‌ ಟಿಕೆಟ್‌ ಫೈನಲ್‌: ತೀವ್ರ ಕುತೂಹಲ ಮೂಡಿಸಿರುವ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಯಾರೆನ್ನುವ ಗೊಂದಲಕ್ಕೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ತೆರೆ ಬೀಳುವ ನಿರೀಕ್ಷೆ ಇದೆ. ಗುರುವಾರ ಅಥವಾ ಶುಕ್ರವಾರ ಹಾಸನ ಕ್ಷೇತ್ರದ ಟಿಕೆಟ್‌ ಫೈನಲ್‌ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕೆ.ಆರ್‌.ಪೇಟೆ ಹಾಗೂ ಚನ್ನಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕೆಲ ಮಾರ್ಗದರ್ಶನ ನೀಡಿದ್ದಾರೆ. ಅವರು ದೆಹಲಿಗೆ ತೆರಳುತ್ತಿರುವುದರಿಂದ ಅಲ್ಲಿಂದ ಬಂದ ನಂತರ ಸಭೆ ಕರೆಯುವಂತೆ ಹೇಳಿದ್ದೇನೆ. ಪ್ರಮುಖರನ್ನು ಕರೆದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಒಮ್ಮತದ ಅಭಿಪ್ರಾಯಕ್ಕೆ ಬರುತ್ತೇವೆ. ಶುಕ್ರವಾರದೊಳಗೆ ಹಾಸನದ ಟಿಕೆಟ್‌ ಫೈನಲ್‌ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ದೇವೇ​ಗೌ​ಡರೇ ಹಾಸನ ಕುರಿತು ತೀರ್ಮಾ​ನ ತಗೋತಾರೆ: ನಿಖಿಲ್‌ ಕುಮಾ​ರ​ಸ್ವಾಮಿ

ನಿಲುವು ಬದಲಿಲ್ಲ: ಹಾಸನ ಕ್ಷೇತ್ರದ ಟಿಕೆಟ್‌ ವಿಷಯದಲ್ಲಿ ನನ್ನ ನಿಲುವು ಬದಲಾಗಲ್ಲ. ದೇವೇಗೌಡರು ದೆಹಲಿಯಿಂದ ಬಂದ ಮೇಲೆ ಎಲ್ಲವೂ ಬಹಿರಂಗವಾಗಲಿದೆ. ಹಾಸನದಲ್ಲಿ ದೇವೇಗೌಡರು ಈಗಾಗಲೇ ಜನಾಭಿಪ್ರಾಯ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದು, ಈ ಬಗ್ಗೆ ಅವರೇ ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!