ನಾನು ಕಿಂಗ್‌ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ: ಎಚ್‌.ಡಿ.ಕುಮಾರಸ್ವಾಮಿ

By Kannadaprabha News  |  First Published Apr 5, 2023, 1:35 PM IST

‘ನಾನು ಕಿಂಗ್‌ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಈ ಬಾರಿ 100-120 ಸ್ಥಾನ ಗಳಿಸುತ್ತೇನೆ’ ಎಂದು ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


ಬೆಂಗಳೂರು (ಏ.05): ‘ನಾನು ಕಿಂಗ್‌ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಈ ಬಾರಿ 100-120 ಸ್ಥಾನ ಗಳಿಸುತ್ತೇನೆ’ ಎಂದು ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ಎರಡೂ ಪಕ್ಷಗಳು ಸಹ 60-70 ಸ್ಥಾನ ತಲುಪುವುದಿಲ್ಲ. ಎರಡು ಪಕ್ಷಗಳ ಹಣೆಬರಹ ರಾಜ್ಯದ ಜನತೆಗೆ ಗೊತ್ತಾಗಿದೆ. ಅಲ್ಲದೇ, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಗಳ ಕೋಟಾ ದೊಡ್ಡದಿದೆ. ಅವರಲ್ಲಿಯೇ ಮುಖ್ಯಮಂತ್ರಿಗಾಗಿ ಪೈಪೋಟಿ ನಡೆದಿದೆ. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಕೊಂಡಿದ್ದಾರೆ. ಆದರೆ, ಯಾವ ಕಾರಣಕ್ಕೂ ಅವರಿಗೆ ಅಷ್ಟೊಂದು ಸ್ಥಾನ ಬರುವುದಿಲ್ಲ. ಕಾಂಗ್ರೆಸ್‌ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ಅಂತಿಮವಾಗಿ ಜನ ತೀರ್ಮಾನ ಮಾಡಬೇಕಲ್ಲ’ ಎಂದು ಹೇಳಿದರು.

ನಂಜನಗೂಡು ಹುಂಡಿ ಲೂಟಿಗೆ ಸರ್ಕಾರ ಯತ್ನ: ರಾಜ್ಯಬಿಜೆಪಿ ಸರ್ಕಾರವು ನಂಜನಗೂಡಿನ ದೇವಾಲಯದ ಹುಂಡಿಯ ಹಣವನ್ನು ಲಪಟಾಯಿಸಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ನಂಜನಗೂಡು ಶಾಸಕರು ದೇವಾಲಯದ ಹುಂಡಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಕಿಡಿಕಾರಿರುವ ಅವರು ಈ ಕುರಿತು ದೇವರ ಹುಂಡಿಗೆ ಬಿಜೆಪಿ ಕನ್ನ ಎಂದು ಹ್ಯಾಷ್‌ಟ್ಯಾಗ್‌ ಹಾಕಿ ಸರಣಿ ಟ್ವಿಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಯಂ ಘೋಷಿತ ಧರ್ಮೋದ್ದಾರಕರು, ಹಿಂದೂ ಧರ್ಮವನ್ನು ಗುತ್ತಿಗೆ ಪಡೆದುಕೊಂಡವರೆಂದು ಬೀಗುವವರಿಗೆ ಧರ್ಮವೆಂದರೆ ಅಧಿಕಾರಕ್ಕಿರುವ ರಾಜಮಾರ್ಗವಾಗಿದೆ. ದೇವರ ಹುಂಡಿ ಎಂಬುದು ಲಜ್ಜೆಗೆಟ್ಟು ಹೊಡೆದುಕೊಳ್ಳುವ ನಿಧಿ. 

Tap to resize

Latest Videos

ಟಿಕೆಟ್‌ಗಾಗಿ ಬಿಗಿಪಟ್ಟು ಹಿಡಿದಿರುವ ಭವಾನಿ ರೇವಣ್ಣಗೆ ಅನಿತಾ ಕುಮಾರಸ್ವಾಮಿ ಟಾಂಗ್‌

ಇವರಿಗೆ ನಾಚಿಕೆ, ಸಂಕೋಚ ಎನ್ನುವುದು ಕನಿಷ್ಠಕ್ಕಿಂತ ಕಡಿಮೆ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪಾಪದ ಪಕ್ಷಕ್ಕೆ ಪಾಯಶ್ಚಿತ್ತ ತಪ್ಪದು. ಶ್ರೀನಂಜುಂಡೇಶ್ವರನ ಶಾಪವೂ ತಟ್ಟದೆ ಇರದು ಎಂದು ಎಚ್ಚರಿಕೆ ನೀಡಿದ್ದಾರೆ. ನಾಡಿಗೆ ನಾಡೇ ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುವ ನಂಜನಗೂಡಿನ ಶ್ರೀನಂಜುಂಡೇಶ್ವರ ದೇವರ ಹುಂಡಿಕೆ ಬಿಜೆಪಿ ಶಾಸಕ ಬಿ.ಹರ್ಷವರ್ಧನ್‌ ಕೈ ಹಾಕಿರುವುದು ದೈವಕ್ಕೆ ಎಸಗಿದ ಅಪಮಾನ. ಇದು ಯೋಜನೆಗಳ ಹೆಸರಿನಲ್ಲಿ ದೇವರ ಹುಂಡಿಗೂ ಕನ್ನ ಕೊರೆಯುವ ಬಿಜೆಪಿಯ ನೈಜ ಜಾಯಮಾನ. ಕಮಲ ಪಕ್ಷ ಮತ್ತೊಮ್ಮೆ ಬೆತ್ತಲಾಗಿದೆ. ಮುಜರಾಯಿ ದೇವಾಲಯದ ಆದಾಯ ಆಯಾ ದೇಗುಲದ ಅಭಿವೃದ್ಧಿಗೆ ಬಳಸಬೇಕು ಎನ್ನುವುದು ಕಾನೂನು. ರಾಜ್ಯ ಬಿಜೆಪಿ ಸರ್ಕಾರ ಕಾನೂನನ್ನು ಗಾಳಿಗೆ ಬಿಟ್ಟು ಶೇ.40 ಪರ್ಸೆಂಟ್‌ಗಾಗಿ ದೇವರ ದುಡ್ಡನ್ನೇ ನುಂಗಿನೀರು ಕುಡಿದು, ಆ ಹಣವನ್ನೂ ಚುನಾವಣೆಗೆ ಸುರಿಯಲು ಹೊರಟಿದೆ.

ಮುಖ್ಯಮಂತ್ರಿ ಆಗುವ ಸಿದ್ದು, ಡಿಕೆಶಿ ಕನಸು ನನಸಾಗಲ್ಲ: ಸಿಎಂ ಬೊಮ್ಮಾಯಿ

ಜೆಡಿಎಸ್‌ 2ನೇ ಪಟ್ಟಿ2-3 ದಿನದಲ್ಲಿ ಫೈನಲ್‌: ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಎರಡ್ಮೂರು ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಚನ್ನಪಟ್ಟಣ, ಕೆ.ಆರ್‌.ಪೇಟೆಯಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಹಾಸನ ಕ್ಷೇತ್ರ ಹೊರತುಪಡಿಸಿ 40ರಿಂದ 50 ಕ್ಷೇತ್ರಗಳ ಅಭ್ಯರ್ಥಿಗಳನ್ನು 2ನೇ ಪಟ್ಟಿಯಲ್ಲಿ ಅಂತಿಮಗೊಳಿಸಲಾಗುವುದು. ನಾಲ್ಕೈದು ದಿನಗಳ ಬಳಿಕ ಮೂರನೇ ಪಟ್ಟಿಯೂ ಬಿಡುಗಡೆಯಾಗಲಿದೆ ಎಂದರು. ಇದೇ ವೇಳೆ ಏ.17ರಂದು ನಿಖಿಲ್‌ ಕುಮಾರಸ್ವಾಮಿ ರಾಮನಗರದಿಂದ ಹಾಗೂ ತಾವು ಏ.19ರಂದು ಚನ್ನಪಟ್ಟಣದಿಂದ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಮಾಹಿತಿ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!