ಹಾಸನ ವಿಧಾನಸಭಾ ಕ್ಷೇತ್ರ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ರಾಮನಗರ (ಏ.05): ಹಾಸನ ವಿಧಾನಸಭಾ ಕ್ಷೇತ್ರ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಕ್ಷೇತ್ರ ಜನರ ನಾಡಿಮಿಡಿತ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮಾಜಿ ಸಿಎಂ ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಇಬ್ರಾಹಿಂ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರೊಂದಿಗೆ ಚರ್ಚಿಸಿ ಒಂದೆರಡು ದಿನಗಳಲ್ಲಿ ದೇವೇಗೌಡ ಅವರೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ.
ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಸ್ವರೂಪ್ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಅವರ ತಂದೆ ನಾಲ್ಕು ಬಾರಿ ಶಾಸಕರಾಗಿದ್ದವರು. ಇನ್ನು ನಮ್ಮ ಕುಟುಂಬವೂ ಹಾಸನದ ಅಭಿವೃದ್ಧಿ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸ್ವರೂಪ್ ಅಭಿಮಾನಿಗಳು ಅವರಿಗೆ ಟಿಕೆಟ್ ನೀಡಬೇಕೆಂದು ಕೇಳುತ್ತಿದ್ದಾರೆ. ಏನೇ ಆಗಲಿ ಅಂತಿಮವಾಗಿ ದೇವೇಗೌಡರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು. ಹಾಸನ ಕ್ಷೇತ್ರ ಟಿಕೆಟ್ ವಿಚಾರವನ್ನು ದೊಡ್ಡ ಮಟ್ಟದಲ್ಲಿ ಬಿಂಬಿಸುವ ಅಗತ್ಯವಿಲ್ಲ. ನಾವೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಪ್ರತಿಯೊಬ್ಬ ರಾಜಕಾರಣಿಗೂ ಜನ ಸೇವೆ ಮಾಡುವ ತುಡಿತ ಇರುತ್ತದೆ. ಜನ ಸೇವೆ ಮಾಡಲು ರಾಜಕಾರಣ ವೇದಿಕೆಯಾಗಿದೆ ಎಂದು ತಿಳಿಸಿದರು.
ಟಿಕೆಟ್‌ಗಾಗಿ ಬಿಗಿಪಟ್ಟು ಹಿಡಿದಿರುವ ಭವಾನಿ ರೇವಣ್ಣಗೆ ಅನಿತಾ ಕುಮಾರಸ್ವಾಮಿ ಟಾಂಗ್
ಅನಿತಾ ರಾಜಕೀಯದಿಂದ ಹಿಂದಕ್ಕೆ: ಶಾಸಕಿ ಅನಿತಾ ಕುಮಾರಸ್ವಾಮಿಯವರು ಈಗಾಗಲೇ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಈ ಹಿಂದೆ ಮಧುಗಿರಿ ಹಾಗೂ ರಾಮನಗರ ಕ್ಷೇತ್ರದಲ್ಲಿ ಅನಿರೀಕ್ಷಿತವಾಗಿ ಸ್ಪರ್ಧೆ ಮಾಡಿದ್ದರು. ಕಳೆದ ಬಾರಿ ರಾಮನಗರದಿಂದ ಸ್ಪರ್ಧೆಗೆ ನನಗೂ ಒತ್ತಡ ಇತ್ತು. ಆಗ ನಾನು ಸಿನಿಮಾದಲ್ಲಿ ಬ್ಯುಸಿ ಆಗಿದ್ದೆ. ಹಾಗಾಗಿ ಅನಿವಾರ್ಯ ಕಾರಣಗಳಿಂದ ಅನಿತಾರವರು ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ಅನಿತಾರವರು ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸವನ್ನೂ ಮಾಡಿದ್ದಾರೆ. ಅವರು ಟಿಕೆಟ್ ಆಕಾಂಕ್ಷಿಗಳಲ್ಲ, ಅವರಿಗೆ ಆಸಕ್ತಿಯೂ ಇಲ್ಲ. ಎಲ್ಲಾ ಪಕ್ಷದಲ್ಲೂ ಗೊಂದಲಗಳು ಇದ್ದೇ ಇರುತ್ತದೆ. ಅಂತಿಮವಾಗಿ ವರಿಷ್ಠರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ದೇವೇಗೌಡರು ಪಕ್ಷವನ್ನು ಕಟ್ಟಿ ಬೆಳೆಸಿದವರು. ಜೆಡಿಎಸ್ ಹೋರಾಟದ ಹಿನ್ನೆಲೆಯಲ್ಲಿ ಬಂದ ಪಕ್ಷ. ಆ ಪಕ್ಷವನ್ನು ಉಳಿಸಿಕೊಳ್ಳಲು ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಪಕ್ಷ ಹೇಳಿದರೆ ನಾನೇ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ. ಮುಖಂಡರು ಮತ್ತು ಕಾರ್ಯಕರ್ತರು ತೀರ್ಮಾನ ಮಾಡಿದರೆ ನಾನೇ ಬ್ಯಾಕ್ ಆಫ್ ಆಗುತ್ತೀನಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಏಪ್ರಿಲ್ 13ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಮಂಗಳವಾರ ಸಹಜವಾಗಿ ಪಟ್ಟಿಬಿಡುಗಡೆ ಮಾಡಲ್ಲ. ನಾಳೆ ನಾಳಿದ್ದು ಅಧಿಕೃತ ಪಟ್ಟಿಬಿಡುಗಡೆ ಆಗಲಿದೆ. ಮೂರನೇ ಪಟ್ಟಿಇರುವ ಬಗ್ಗೆ ಗೊತ್ತಿಲ್ಲ. ಆಕಾಂಕ್ಷಿಗಳು ಹೆಚ್ಚಾಗಿದ್ದಾಗ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ಪಡೆದು ಪಟ್ಟಿ ಬಿಡುಗಡೆ ಮಾಡುವುದು ಅನಿವಾರ್ಯ. ಮೂರನೇ ಪಟ್ಟಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಸೇಡಂ ಜಿದ್ದಾಜಿದ್ದಿ: ಕಾಗಿಣಾ ತೀರದಲ್ಲಿ ಈ ಬಾರಿ ಮತ್ತೊಂದು ಚತುಷ್ಕೋನ ಕದನ
ಜೆಡಿಎಸ್ ರಾಜ್ಯ ವಕ್ತಾರ ವಿ.ನರಸಿಂಹಮೂರ್ತಿ, ತಾಲೂಕು ಅಧ್ಯಕ್ಷ ರಾಜಶೇಖರ್, ನಗರ ಘಟಕ ಅಧ್ಯಕ್ಷ ಕುಮಾರ್, ನಗರಸಭೆ ಸದಸ್ಯರಾದ ಮುನಜಿಲ್ ಆಗಾ, ಶಿವಸ್ವಾಮಿ, ಮುಖಂಡರಾದ ಸುಹೇಲ್, ಜಿ.ಟಿ.ಕೃಷ್ಣ, ರೈಡ್ ನಾಗರಾಜು, ಬಾಲಗೇರಿ ರವಿ, ವೆಂಕಟೇಶ್, ಪ್ರಮೋದ್, ಬಾಬು, ರಮೇಶ್, ಕುಮಾರ್, ಹನುಮಂತು, ಮಹಾಲಿಂಗು ಇತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.