ಸಿಎಂ ಗಾದಿ ಅವಕಾಶವಿದೆ, ಬೆಂಬಲಿಸಿ: ಮತ್ತೊಮ್ಮೆ ಮನದಿಂಗಿತ ಬಿಚ್ಚಿಟ್ಟ ಸಿದ್ದರಾಮಯ್ಯ

By Kannadaprabha NewsFirst Published May 5, 2023, 12:51 PM IST
Highlights

ಗುರುವಾರವಷ್ಟೆ ಶ್ರೀರಂಗಪಟ್ಟಣದ ಕಾಂಗ್ರೆಸ್‌ ಅಭ್ಯರ್ಥಿ ರಮೇಶ್‌ ಬಂಡಿಸಿದ್ದೇಗೌಡ ಪರ ಕೈಗೊಂಡ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ಗೆ ಬಹುಮತ ಬಂದು ಮೇ 14, 15ಕ್ಕೆ ನಾನೇ ಸರ್ಕಾರ ರಚನೆ ಮಾಡುವೆ ಎಂದು ವಿಶ್ವಾಸದಿಂದ ನುಡಿದು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದ ಸಿದ್ದರಾಮಯ್ಯ.

ನಂಜನಗೂಡು (ಮೇ.05): ಗುರುವಾರವಷ್ಟೆ ಶ್ರೀರಂಗಪಟ್ಟಣದ ಕಾಂಗ್ರೆಸ್‌ ಅಭ್ಯರ್ಥಿ ರಮೇಶ್‌ ಬಂಡಿಸಿದ್ದೇಗೌಡ ಪರ ಕೈಗೊಂಡ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ಗೆ ಬಹುಮತ ಬಂದು ಮೇ 14, 15ಕ್ಕೆ ನಾನೇ ಸರ್ಕಾರ ರಚನೆ ಮಾಡುವೆ ಎಂದು ವಿಶ್ವಾಸದಿಂದ ನುಡಿದು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಇದರ ಬೆನ್ನಲ್ಲೇ ತಮ್ಮ ತವರು ಕ್ಷೇತ್ರ ವರುಣದಲ್ಲಿ ಮತಯಾಚನೆ ವೇಳೆ ಮುಖ್ಯಮಂತ್ರಿ ಗಾದಿಯ ಬಯಕೆ ಬಿಚ್ಚಿಟ್ಟಿದ್ದಾರೆ.  ತಾಲೂಕಿನ ವರುಣ ಕ್ಷೇತ್ರ ವ್ಯಾಪ್ತಿಯ ತಾಂಡವಪುರ ಗ್ರಾಮದಲ್ಲಿ ಗುರುವಾರ ತೆರೆದ ವಾಹನದಲ್ಲಿ ಮತ ಪ್ರಚಾರ ನಡೆಸಿ, 2008 ಹಾಗೂ 2013ರಲ್ಲಿ ನನ್ನನ್ನು ಗೆಲ್ಲಿಸಿ ಮುಖ್ಯಮಂತ್ರಿ ಮಾಡಿದ್ದೀರಿ.

ಕಳೆದ ಚುನಾ ವಣೆಯಲ್ಲಿ ಯತೀಂದ್ರನನ್ನು ದೊಡ್ಡ ಬಹುಮತದಿಂದ ಗೆಲ್ಲಿಸಿದ್ದೀರಿ, ಈಗ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶವಿದೆ ಬೆಂಬಲ ನೀಡಿ ಗೆಲ್ಲಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ ಅವರು, ಹಿಂದೆ ನೀಡಿದ್ದ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಲಾಗಿತ್ತು. ಮುಂದೆಯೂ ನುಡಿದಂತೆ ನಡೆದು ನಮ್ಮ ಪಕ್ಷ ನೀಡಿರುವ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದರು. 

ಬಜರಂಗದಳ ಬ್ಯಾನ್‌ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚಿಸುವೆ: ಜಗದೀಶ್‌ ಶೆಟ್ಟರ್‌

ಕೊನೆಯ ಚುನಾವಣೆ: ಇದು ನನ್ನ ರಾಜಕೀಯ ಜೀವನದ ಕೊನೆ ಚುನಾವಣೆ, ಹೈಕಮಾಂಡ್‌ ಸೂಚನೆಯಂತೆ ಸ್ಪರ್ಧೆ ಮಾಡಿದ್ದೇನೆ. ಮುಖ್ಯಮಂತ್ರಿಯಾಗಿ ರೈತರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಜಾತಿ, ಜನಾಂಗಕ್ಕೆ ಅನ್ನ ಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಶಾದಿ ಭಾಗ್ಯ, ಮಾತೃಪೂರ್ಣ, ವಿದ್ಯಾಸಿರಿ ಸೇರಿದಂತೆ ಹಲವು ಯೋಜನೆಗಳನ್ನು ನೀಡಿದ್ದೇನೆ ಎಂದರು.

ಬಸವಣ್ಣನ ಅಭಿಮಾನಿ: ಇನ್ನು ಪ್ರಚಾರದ ಹಿನ್ನೆಲೆ ರಾಂಪುರ, ಹದಿನಾರು ಗ್ರಾಮದಲ್ಲಿ ಸಂಚರಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ನನ್ನನ್ನು ಲಿಂಗಾಯತರ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ನಾನು ಬಸವಣ್ಣನ ಅಭಿಮಾನಿ ಎಂದರಲ್ಲದೆ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಇಡಲು ಆದೇಶ ಮಾಡಿದವನು ನಾನು ಎಂದು ಖಚಿತವಾಗಿ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ವರುಣದಲ್ಲಿ ಸಿದ್ದು ಪರ ಶಿವಣ್ಣ ಪ್ರಚಾರ ಅಬ್ಬರ: ವರುಣ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ರೋಡ್‌ಶೋ ನಡೆಸಿ ಮತಯಾಚಿಸಿದರು. ನಂತರ ಅವರು ಮಾತನಾಡಿದ ಅವರು, ಅಭಿಮಾನಿ ದೇವರುಗಳಿಗೆ ನಮಸ್ಕಾರ, ಮೈಸೂರಿನಲ್ಲಿ ಹಲವು ಬಾರಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು, ಈ ಭಾಗಕ್ಕೆ ಬಂದಿರಲಿಲ್ಲ, ಚುನಾವಣೆ ಪ್ರಚಾರದ ನೆಪದಲ್ಲಿ ನಿಮ್ಮನ್ನು ಭೇಟಿ ಮಾಡುವ ಭಾಗ್ಯ ದೊರೆತಿದೆ. ನಮ್ಮ ಅಪ್ಪಾಜಿಯವರು ಸಿದ್ದರಾಮಯ್ಯ ಮಾಮನನ್ನು ‘ನಮ್ಮ ಕಾಡಿನವರು’ ಅಂತ ಹೇಳುತ್ತಿದ್ದರು. 

ಅಪ್ಪಾಜಿ ಹಾಗೂ ನಮ್ಮ ಜೊತೆಗೆ ಸಿದ್ದರಾಮಯ್ಯ ಮಾಮನ ಒಡನಾಟ ಮರೆಯುವುದಿಲ್ಲ, ಈಗಲೂ ನಮ್ಮ ಕುಟುಂಬದಲ್ಲಿ ‘ಅವರು ನಮ್ಮವರು’ ಎಂಬ ಪ್ರೀತಿ, ವಿಶ್ವಾಸ, ಭಾವನೆಗಳಿವೆ, ಮೈಸೂರಿನಲ್ಲಿ ಅಬಲೆಯರಿಗಾಗಿ ಶಕ್ತಿಧಾಮ ಆರಂಭಿಸಿದಾಗ ಅವರು ನೀಡಿದ ಪ್ರೋತ್ಸಾಹ ಮರೆಯಲು ಸಾಧ್ಯವಿಲ್ಲ. ಅವರು ಜನರಿಗೆ ಏನು ಮಾಡಿದ್ದಾರೆ ಎಂದು ನಾವು ಹೇಳಬೇಕಾಗಿಲ್ಲ, ಕಣ್ಣೇದುರಿಗೆ ಸತ್ಯ ಕಾಣುತ್ತಿದೆ, ಸಿದ್ದರಾಮಯ್ಯ ಇನ್ನೊಂದು ಟಗರು, ಅವರಿಗೆ ನಿಮ್ಮೆಲ್ಲರ ಆಶೀರ್ವಾದ, ಬೆಂಬಲ ಬೇಕು, ಹೆಚ್ಚಿನ ಮತಗಳಿಂದ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಬಜರಂಗದಳವಲ್ಲ, ಕಾಂಗ್ರೆಸ್ಸೇ ಬ್ಯಾನ್‌ ಆಗುತ್ತೆ: ಬಿ.ವೈ.ವಿಜಯೇಂದ್ರ

ಶಿವರಾಜ್‌ ಕುಮಾರ್‌ ಅಭಿಮಾನಿಗಳ ಕೋರಿಕೆ ಮೇರೆಗೆ ‘ನಾನೊಂದು ನಿಮ್ಮವನು, ನಿಮಗಾಗಿ ಬಂದವನು, ನನಗ್ಯಾರ ಭಯವೇನು, ಆ ಸಿಂಹದ ಮರಿ ನಾನು ಕೇಳಣ್ಣ’ ಎಂದು ಹಾಡಿ ರಂಜಿಸಿದರು. ಇದೇ ವೇಳೆ ಗೀತಾ ಶಿವರಾಜ್‌ಕುಮಾರ್‌, ಚಿತ್ರ ನಟಿ ನಿಶ್ವಿಕಾ ನಾಯ್ಡ ಇದ್ದರು.

click me!