ಬಿಜೆಪಿಯವರಿಗೆ ಮತ ಕೇಳಲು ಮುಖವಿಲ್ಲ: ಮಾಜಿ ಸಚಿವ ಸಂತೋಷ್‌ ಲಾಡ್‌

By Kannadaprabha News  |  First Published Apr 9, 2023, 1:56 PM IST

ಬಿಜೆಪಿಯವರಿಗೆ ಮತದಾರರ ಬಳಿ ಹೋಗಿ ಮತಕೇಳಲು ಮುಖವಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಿಟ್ಟರೆ ಯಾರೂ ಪ್ರಭಾವಿ ಇಲ್ಲ. ಹಾಗಾಗಿ, ಈಗ ಸ್ಟಾರ್‌ ನಟರ ಮೂಲಕ ಜನರನ್ನು ಆಕರ್ಷಣೆ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ, ಕಲಘಟಗಿ ಕಾಂಗ್ರೆಸ್‌ ಅಭ್ಯರ್ಥಿ ಸಂತೋಷ್‌ ಲಾಡ್‌ ವ್ಯಂಗ್ಯವಾಡಿದರು. 


ಹುಬ್ಬಳ್ಳಿ (ಏ.09): ಬಿಜೆಪಿಯವರಿಗೆ ಮತದಾರರ ಬಳಿ ಹೋಗಿ ಮತ ಕೇಳಲು ಮುಖವಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಿಟ್ಟರೆ ಯಾರೂ ಪ್ರಭಾವಿ ಇಲ್ಲ. ಹಾಗಾಗಿ, ಈಗ ಸ್ಟಾರ್‌ ನಟರ ಮೂಲಕ ಜನರನ್ನು ಆಕರ್ಷಣೆ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ, ಕಲಘಟಗಿ ಕಾಂಗ್ರೆಸ್‌ ಅಭ್ಯರ್ಥಿ ಸಂತೋಷ್‌ ಲಾಡ್‌ ವ್ಯಂಗ್ಯವಾಡಿದರು. ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭಾ ಚುನಾವಣೆಗೆ ದಿನಗಣನೇ ಆರಂಭವಾಗಿದೆ. ಈ ವೇಳೆಯೂ ಬಿಜೆಪಿ ತಮ್ಮ ಆಕಾಂಕ್ಷಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ ಎಂಬುದನ್ನು ನೋಡಿದರೆ ಅರ್ಥ ಮಾಡಿಕೊಳ್ಳಬೇಕು. 

ಇತ್ತಿಚೆಗೆ ಸಿನಿಮಾ ನಟರನ್ನು ಕರೆಸಿ ಪ್ರಚಾರ ಮಾಡುತ್ತಿದ್ದಾರೆ. ರಾಜಕೀಯಕ್ಕೆ ಯಾರು ಬರಬಾರದು ಎಂಬುದಿಲ್ಲ. ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಮುಖ ತೋರಿಸಿ ಜನರನ್ನು ಆಕರ್ಷಣೆ ಮಾಡುತ್ತಿದ್ದರು. ಜನರನ್ನು ಆಕರ್ಷಣೆ ಮಾಡಲು ಈಗ ಮತ್ತೆ ಹೊಸ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು. 15 ವರ್ಷದಿಂದ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಈ ಬಾರಿ ಕಲಘಟಗಿ ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಹೀಗಾಗಿ, ನಮ್ಮ ನಾಯಕರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

Tap to resize

Latest Videos

ದೇವೇಗೌಡರಂತೆ ಕುಳಿತಲ್ಲೆ ಟಿಕೆಟ್‌ ಘೋಷಣೆ ಬಿಜೆಪಿಯಲ್ಲಿ ನಡೆಯಲ್ಲ: ಸಂಸದ ತೇಜಸ್ವಿ ಸೂರ್ಯ

ನಾಗರಾಜ್‌ ಛಬ್ಬಿ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಟಿಕೆಟ್‌ ಸಿಗದಿರುವುದರಿಂದ ನೋವು ಆಗುವುದು ಸಹಜ. ಛಬ್ಬಿ ನನ್ನ ಆತ್ಮೀಯ ಸ್ನೇಹಿತ, ಅವರಿಗೆ ಟಿಕೆಟ್‌ ಸಿಗದೆ ಇರುವುದಕ್ಕೆ ನನಗೂ ಬೇಸರ ಇದೆ. ಪಕ್ಷಾಂತರ ಮಾಡುವ ಹಂತಕ್ಕೆ ಅವರು ಹೋಗಬಾರದಿತ್ತು. ನಾಗರಾಜ್‌ ಛಬ್ಬಿ ಅವರನ್ನು ನಮ್ಮ ಪಕ್ಷದ ಮುಖಂಡರು ಕರೆಸಿ ಮಾತನಾಡುತ್ತಾರೆ. ಹೀಗಾಗಿ, ಛಬ್ಬಿ ಉತ್ತಮ ನಿರ್ಧಾರ ತೆಗೆದುಕೊಳ್ಳತ್ತಾರೆಂಬ ನಂಬಿಕೆ ಇದೆ. ನಾನು ಸಹ ವೈಯಕ್ತಿಕವಾಗಿ ಮಾತನಾಡಿ ಅವರ ಮನವೊಲಿಸಲು ಪ್ರಯತ್ನ ಮಾಡುತ್ತೇನೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆದರೆ ನಾನು ಸಿಎಂ ಅಭ್ಯರ್ಥಿಯಿಂದ ಹಿಂದೆ ಸರಿಯುತ್ತೇನೆ ಎಂಬ ಡಿ.ಕೆ. ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಪಕ್ಷದ ಹೈಕಮಾಂಡ್‌ ತೀರ್ಮಾನ ಮಾಡಲಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಸಣ್ಣವರಲ್ಲ, ಯಾರೂ ದೊಡ್ಡವರಲ್ಲ. ಇಲ್ಲಿ ಮತದಾರರ ನಿರ್ಧಾರವೇ ಅಂತಿಮ. ಜನರು ನನ್ನನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸಬಾರದು ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ, ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಅವರು ರಾಜ್ಯ ಪ್ರವಾಸ ಮಾಡಿದರೆ, ಕಾಂಗ್ರೆಸ್‌ಗೆ ಹೆಚ್ಚಿನ ಸೀಟ್‌ ಗೆಲ್ಲಲು ಅನುಕೂಲ ಆಗುತ್ತದೆ ಎಂಬ ಆಲೋಚನೆಯಲ್ಲಿ ಹೇಳಿದ್ದೆ ಎಂದು ತಿಳಿಸಿದರು. ಡಾ. ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಅಪಮಾನ ಮಾಡಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಡಾ. ಬಾಬಾಸಾಹೇಬ ಅಂಬೇಡ್ಕರ್‌ಗೆ ಎಷ್ಟುಗೌರವ ಸಲ್ಲಿಸಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಮೀಸಲಾತಿ ವಿಚಾರವನ್ನು ವಿರೋಧ ಮಾಡಿದ್ದೆ ಬಿಜೆಪಿ. ರಾಜಕೀಯ ಲಾಭದ ಉದ್ದೇಶದಿಂದ ಈಗ ಬಿಜೆಪಿಯವರು ಮಾಡುತ್ತಿರುವ ಆರೋಪದಿಂದ ಯಾವ ಬದಲಾವಣೆ ಆಗಲ್ಲ ಎಂದು ತಿರುಗೇಟು ನೀಡಿದರು. ಏ. 19ರಂದು ಕಲಘಟಗಿ ವಿಧಾನಸಭಾ ಮತಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವುದಾಗಿ ಇದೇ ವೇಳೆ ಸಂತೋಷ ಲಾಡ್‌ ತಿಳಿಸಿದರು.

ಬಟ್ಟೆಯಿಂದ ಶಿವಮೊಗ್ಗ ಏರ್‌ಪೋರ್ಟ್‌ ಮುಚ್ಚಲು ಚುನಾವಣಾ ಆಯೋಗಕ್ಕೆ ಮೊರೆ!

ಅದ್ಧೂರಿ ಸ್ವಾಗತ: ಕಲಘಟಗಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮೊದಲ ಬಾರಿ ಕ್ಷೇತ್ರಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಸಂತೋಷ ಲಾಡ್‌ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು ನಗರದ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದರು. ಸಂತೋಷ ಲಾಡ್‌ ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಆವರಣದಲ್ಲಿ ಒಂದು ಗಂಟೆಗೂ ಮುನ್ನ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಲಾಡ್‌ ಆಗಮಿಸಿದ ಕೂಡಲೇ ಕೇಕೆ ಸಂಭ್ರಮಿಸಿದ ಘೋಷಣೆ ಕೂಗಿ ಸಂಭ್ರಮಿಸಿದರು. ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸಿ ಅವರನ್ನು ಎತ್ತಿಕೊಂಡು ಸಂತಸಪಟ್ಟರು. ಈ ಸಂದರ್ಭದಲ್ಲಿ ಕಲಘಟಗಿ ತಾಲೂಕಿನ ಕಾಂಗ್ರೆಸ್‌ ಘಟಕದ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!